ಜೊಮ್ಯಾಟೊ, ಸ್ವಿಗ್ಗಿ ಮೊದಲಾದ ಕಡೆ ಡೆಲಿವರಿ ಬಾಯ್ ಆಗಿ ಕೆಲಸ ಮಾಡುವ ಸುಮಾರು ಒಂದು ಕೋಟಿ ಗಿಗ್ ಕಾರ್ಮಿಕರಿಗೆ ಅಧಿಕೃತ ಗುರುತಿನ ಚೀಟಿ ಮತ್ತು ಪಿಎಂ ಜನ ಆರೋಗ್ಯ ಯೋಜನೆಯಡಿಯಲ್ಲಿ ಆರೋಗ್ಯ ವಿಮೆ ಸೌಲಭ್ಯ ನೀಡಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನೀತಿ ಆಯೋಗದ ಪ್ರಕಾರ ಸಾಂಪ್ರಾದಾಯಿಕವಾದ ದ್ಯೋಗದಾತ-ಉದ್ಯೋಗಿ ಸಂಬಂಧವಿಲ್ಲದೆ ಕೆಲಸ ಮಾಡುವವರು ಗಿಗ್ ಕಾರ್ಮಿಕರು ಆಗಿದ್ದಾರೆ. ಇವರು ಸ್ವತಂತ್ರ ಗುತ್ತಿಗೆದಾರರಾಗಿ, ಅಲ್ಪಾವಧಿಯ ಕೆಲಸಗಳನ್ನು ಮಾಡುವವರಾಗಿರುತ್ತಾರೆ.
ಇದನ್ನು ಓದಿದ್ದೀರಾ? ಬಜೆಟ್ 2025 | ಯಾವೆಲ್ಲ ವಸ್ತುಗಳ ಬೆಲೆ ಏರಿಕೆ, ಇಳಿಕೆ?
ಸ್ವಿಗ್ಗಿ, ಜೊಮ್ಯಾಟೊ, ಝೆಪ್ಟೋ ಮತ್ತು ಬಿಗ್‌ಬಾಸ್ಕೆಟ್ ಮೊದಲಾದ ಆನ್‌ಲೈನ್ ಡೆಲಿವರಿ ಆ್ಯಪ್‌ಗಳಲ್ಲಿ ಡೆಲಿವರಿ ಪಾರ್ಟ್‌ನರ್, ಗೋದಾಮಿನಲ್ಲಿ ಕೆಲಸ, ಇತರೆ ಕೆಲಸಗಳನ್ನು ಮಾಡುವವರನ್ನು ಗಿಗ್ ಕಾರ್ಮಿಕರು ಎಂದು ಪರಿಗಣಿಸಲಾಗುತ್ತದೆ. ಇ-ಶ್ರಮ ಪೋರ್ಟಲ್‌ನಲ್ಲಿ ರಿಜಿಸ್ಟ್ರೇಷನ್ ಕಡ್ಡಾಯವಾಗಿದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಈ ಯೋಜನೆಯನ್ನು ಜಾರಿ ಮಾಡಲಿದೆ.
“ಗಿಗ್ ಕಾರ್ಮಿಕರು ಹೊಸ ಯುಗದ ಆರ್ಥಿಕತೆಗೆ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಕೊಡುಗೆಯನ್ನು ಗುರುತಿಸುವುದು ಮುಖ್ಯ. ನಮ್ಮ ಸರ್ಕಾರವು ಅವರಿಗೆ ಗುರುತಿನ ಚೀಟಿ ನೀಡುತ್ತದೆ ಮತ್ತು ಇ-ಶ್ರಮ ಪೋರ್ಟಲ್‌ನಲ್ಲಿ ರಿಜಿಸ್ಟ್ರೇಷನ್ ಮಾಡುವ ವ್ಯವಸ್ಥೆ ಕಲ್ಪಿಸುತ್ತದೆ” ಎಂದು ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
