ಗ್ರಾಮೀಣ ಬಡ ಕುಟುಂಬಗಳ ಒಬ್ಬ ವ್ಯಕ್ತಿಗೆ ವರ್ಷದಲ್ಲಿ ನೂರು ದಿನ ಕೂಲಿ ಒದಗಿಸುವ ಮನರೇಗ, ವಿಶ್ವದ ಅತಿ ದೊಡ್ಡ ಉದ್ಯೋಗ ಯೋಜನೆ ಮನರೇಗ. ಮೋದಿ ಸರ್ಕಾರ ಕಳೆದ ಬಜೆಟ್ ನಲ್ಲಿ ಈ ಯೋಜನೆಗೆ 86 ಸಾವಿರ ಕೋಟಿ ರುಪಾಯಿ ಹಂಚಿಕೆ ಮಾಡಿತ್ತು. ಈ ಯೋಜನೆಗೆ ಭಾರೀ ಬೇಡಿಕೆ ಇದ್ದರೂ ಪರಿಷ್ಕೃತ ಅಂದಾಜಿನಲ್ಲಿ ಈ ಮೊತ್ತವನ್ನು ಹೆಚ್ಚಿಸಲಿಲ್ಲ. ವೆಚ್ಚ 86 ಸಾವಿರ ಕೋಟಿ ರುಪಾಯಿಯನ್ನು ಮೀರಲಿಲ್ಲ. ಈ ವರ್ಷವೂ ಈ ಮೊತ್ತವನ್ನು ಹೆಚ್ಚಿಸಿಲ್ಲ.
ಬಡವರು ನಿರ್ಗತಿಕರು ಕೃಷಿ ಕೂಲಿಗಳಿಗೆ ತುಸುವಾದರೂ ಆಸರೆಯಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯನ್ನು (ಮನರೇಗ) ಬಜೆಟ್ ಮತ್ತಷ್ಟು ಮೂಲೆಗುಂಪು ಮಾಡಿದೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಈ ಯೋಜನೆಯನ್ನು ಬೀಳುಗಳೆಯುತ್ತಲೇ ಬಂದಿದೆ. ಹಂಚಿಕೆಯ ಮೊತ್ತವನ್ನು ಖೋತಾ ಮಾಡುತ್ತಲೇ ಇದೆ. ಶನಿವಾರ ಮಂಡಿಸಿದ ಬಜೆಟ್‌ನಲ್ಲಿ ಈ ಯೋಜನೆಯ ಹೆಸರನ್ನು ಕೂಡ ಹೇಳಲಿಲ್ಲ ಅರ್ಥಮಂತ್ರಿ ನಿರ್ಮಲಾ ಸೀತಾರಾಮನ್.
ಗ್ರಾಮೀಣ ಬಡ ಕುಟುಂಬಗಳ ಒಬ್ಬ ವ್ಯಕ್ತಿಗೆ ವರ್ಷದಲ್ಲಿ ನೂರು ದಿನ ಕೂಲಿ ಒದಗಿಸುವ ಮನರೇಗ, ವಿಶ್ವದ ಅತಿ ದೊಡ್ಡ ಉದ್ಯೋಗ ಯೋಜನೆ. ಮೋದಿ ಸರ್ಕಾರ ಕಳೆದ ಬಜೆಟ್ ನಲ್ಲಿ ಈ ಯೋಜನೆಗೆ 86 ಸಾವಿರ ಕೋಟಿ ರುಪಾಯಿ ಹಂಚಿಕೆ ಮಾಡಿತ್ತು. ಈ ಯೋಜನೆಗೆ ಭಾರೀ ಬೇಡಿಕೆ ಇದ್ದರೂ ಪರಿಷ್ಕೃತ ಅಂದಾಜಿನಲ್ಲಿ ಈ ಮೊತ್ತವನ್ನು ಹೆಚ್ಚಿಸಲಿಲ್ಲ. ವೆಚ್ಚ 86 ಸಾವಿರ ಕೋಟಿ ರುಪಾಯಿಯನ್ನು ಮೀರಲಿಲ್ಲ. ಈ ವರ್ಷವೂ ಈ ಮೊತ್ತವನ್ನು ಹೆಚ್ಚಿಸಿಲ್ಲ.
ಈ 86 ಸಾವಿರ ಕೋಟಿ ರುಪಾಯಿಯ ಮೊತ್ತ ಇದೇ ಸರ್ಕಾರ 2023-24ರಲ್ಲಿ ಮಾಡಿದ್ದ ವೆಚ್ಚಕ್ಕಿಂತ ಕಡಿಮೆ. 2023-24ರಲ್ಲಿ 89,154 ಕೋಟಿ ರುಪಾಯಿಯನ್ನು ವಿನಿಯೋಗಿಸಲಾಗಿತ್ತು. ಗುಂಡಿ ತೋಡಿ ಗುಂಡಿ ಮುಚ್ಚುವ ಈ ನಿರುಪಯೋಗಿ ಯೋಜನೆಯನ್ನು ನಿಲ್ಲಿಸುವುದಾಗಿ ತಮ್ಮ ಸರ್ಕಾರ ಅಧಿಕಾರ ಹಿಡಿದ ಹೊಸತರಲ್ಲಿ ಕಠೋರ ನುಡಿಗಳನ್ನು ಬಳಸಿದ್ದರು ಮೋದಿ. “ಯುಪಿಎ ವೈಫಲ್ಯವನ್ನು ಬಿಂಬಿಸುವ ಜೀವಂತ ಸ್ಮಾರಕ ಮನರೇಗ” ಎಂದೆಲ್ಲ ಜರೆದಿದ್ದರು. ಆದರೆ ಯೋಜನೆಯನ್ನು ನಿಲ್ಲಿಸುವುದು ಅಸಾಧ್ಯವಾಗಿತ್ತು. ಹಂಚಿಕೆಯ ಮೊತ್ತವನ್ನು ಕಡಿತಗೊಳಿಸಿದರು. ಬೇಡಿಕೆಯಿದ್ದರೂ ಅದನ್ನು ಅವಗಣಿಸುತ್ತ ಬಂದಿದ್ದಾರೆ. ಗ್ರಾಮೀಣ ಬದುಕನ್ನು ಕಾಡಿರುವ ಸಂಕಟದ ಮೇಲೆ ಪರದೆ ಎಳೆದು ಮುಚ್ಚುವುದು ಅವರ ಸನ್ನಾಹ. ಕೋವಿಡ್ ನಂತರದ ಗ್ರಾಮೀಣ ನಿರುದ್ಯೋಗದ ತೀವ್ರ ಸಂಕಟದ ನಿವಾರಣೆಗೆ ತುಸು ಮಟ್ಟಿಗೆ ಉಪಯೋಗಕ್ಕೆ ಬಂದಿತ್ತು ಮನರೇಗ. 2020ರಲ್ಲಿ ಈ ಯೋಜನೆಯ ಮೊತ್ತವನ್ನು 1.11 ಲಕ್ಷ ಕೋಟಿ ರುಪಾಯಿಗಳಿಗೆ ಏರಿಸಲಾಗಿತ್ತು. ಕೋವಿಡ್ ನಂತರವೂ ಈ ಯೋಜನೆಗೆ ಭಾರೀ ಬೇಡಿಕೆ ಮುಂದುವರೆದಿತ್ತು. ಹೀಗಾಗಿ 2023-24ರಲ್ಲಿ 90,800 ಕೋಟಿ ರುಪಾಯಿಗಳನ್ನು ವಿನಿಯೋಗಿಸಲಾಗಿತ್ತು.
ಇದನ್ನೂ ಓದಿ ಬಜೆಟ್ 2025 | ಎಂದಿನಂತೆ ಶಾಲಾ ಶಿಕ್ಷಣಕ್ಕೆ ಆಯವ್ಯಯದಲ್ಲಿ ಅತ್ಯಲ್ಪ ಆದ್ಯತೆ!
ಸಾಮಾಜಿಕ ಭದ್ರತೆಯ ಯೋಜನೆಯಿದು ಎಂಬುದನ್ನು ಸಾಬೀತುಪಡಿಸಿತ್ತು. ಈ ಯೋಜನೆಗೆ ಹಂಚಿಕೆಯನ್ನು ಕಡಿತಗೊಳಿಸಿರುವುದು ನಿಗೂಢ ಅಚ್ಚರಿಯ ಸಂಗತಿ. ಈ ಕುರಿತು ಪುನರ್ ಪರಿಶೀಲನೆ ಮಾಡಬೇಕು ಎಂದು 2024ರ ಮನರೇಗ ಲೋಕಸಭಾ ಸ್ಥಾಯಿ ಸಮಿತಿ ತನ್ನ ವರದಿಯಲ್ಲಿ ಹೇಳಿತ್ತು. ಮನರೇಗ ಕೂಲಿ ಪಾವತಿಯನ್ನು ಆಧಾರ್ ಜೊತೆ ಬೆಸೆದ ಕೇಂದ್ರ ಸರ್ಕಾರದ ಕ್ರಮ ಬಹುದೊಡ್ಡ ಸಂಖ್ಯೆಯ ಮನರೇಗ ಫಲಾನುಭವಿಗಳನ್ನು ಕಷ್ಟಕ್ಕೆ ಗುರಿ ಮಾಡಿದ್ದಲ್ಲದೆ, ಅವರನ್ನು ಈ ಯೋಜನೆಯಿಂದಲೇ ಹೊರಗಿರಿಸಲು ಕಾರಣ ಆಗಿರುವುದೂ ಹೌದು. ಆಧಾರ್ ಆಧರಿತ ಕೂಲಿ ಪಾವತಿಯನ್ನು ಕಡ್ಡಾಯ ಮಾಡಕೂಡದು ಎಂಬುದು ಮನರೇಗ ಫಲಾನುಭವಿಗಳ ತೀವ್ರತರ ಬೇಡಿಕೆ. ಈ ಯೋಜನೆಯ ಕೂಲಿಯನ್ನು ದಿನಕ್ಕೆ 400 ರುಪಾಯಿಗೂ, ಕೂಲಿ ನೀಡಿಕೆಯ ದಿನಗಳನ್ನು ವರ್ಷಕ್ಕೆ 100 ರಿಂದ 140ಕ್ಕೆ ಹೆಚ್ಚಿಸಬೇಕೆಂಬ ಕೂಗಿಗೂ ಕೇಂದ್ರ ಸರ್ಕಾರ ಕಿವಿಗೊಟ್ಟಿಲ್ಲ. ಈ ಯೋಜನೆಗೆ ದೇಶದ ಜಿಡಿಪಿಯ ಶೇ.1.7ರಷ್ಟನ್ನಾದರೂ ಮೀಸಲಿಡಬೇಕು ಎಂಬುದು ವಿಶ್ವಬ್ಯಾಂಕಿನ ಶಿಫಾರಸಾಗಿತ್ತು. ಆದರೆ ಈ ಹಂಚಿಕೆಯನ್ನು ಕೇವಲ ಶೇ.0.26ಕ್ಕೆ ಸೀಮಿತಗೊಳಿಸಲಾಗಿದೆ.