‘ಬಜೆಟ್ ಹಣ’ ನಮ್ಮ, ನಿಮ್ಮ ಹಣ; ಈ ಅಂಶಗಳನ್ನು ನೀವು ಗಮನಿಸಲೇಬೇಕು

Date:

Advertisements
ಬಜೆಟ್‌ ಕೇವಲ ಒಂದು ವರ್ಷಕ್ಕೆ ಸೀಮಿತವಾಗಿರುತ್ತದೆ. ಆದರೆ ಹೊಸ ಸರ್ಕಾರದ ಅವಧಿಯ ಆರಂಭದಲ್ಲಿ ಮಂಡಿಸಲಾಗುವ ಬಜೆಟ್‌, ಆ ಸರ್ಕಾರ ತನ್ನ ಆದಾಯವನ್ನು ಹೇಗೆಲ್ಲ ಖರ್ಚು ಮಾಡಬಯಸುತ್ತದೆ ಎಂಬುದರ ಸಿಗ್ನಲ್ ಅಥವಾ ದಿಕ್ಕು ದೆಸೆಯನ್ನು ಸೂಚಿಸುತ್ತದೆ.

ಪ್ರತಿ ಐದು ವರ್ಷಗಳಿಗೊಮ್ಮೆ ಕೇಂದ್ರ ಬಜೆಟ್ಟನ್ನು ಒಂದೇ ವರ್ಷದಲ್ಲಿ ಎರಡು ಸಲ ಮಂಡಿಸಲಾಗುತ್ತದೆ. ಲೋಕಸಭೆ ಚುನಾವಣೆಯನ್ನು ಎದುರಿಸಲು ನಿರ್ಗಮಿಸುವ ಸರ್ಕಾರ ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್ ಮಂಡಿಸುತ್ತದೆ. ಚುನಾವಣೆಯ ನಂತರ ಹೊಸ ಸರ್ಕಾರ ಪೂರ್ಣಪ್ರಮಾಣದ ಬಜೆಟ್ಟನ್ನು ಮಂಡಿಸುತ್ತದೆ. ಕಳೆದ ಫೆಬ್ರವರಿ ಒಂದರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ರ ಮಧ್ಯಂತರ ಬಜೆಟ್ ಮಂಡಿಸಿದ್ದರು.

ಮಧ್ಯಂತರ ಮತ್ತು ಮಂಗಳವಾರ ಮಂಡನೆಯಾದ ಪೂರ್ಣಪ್ರಮಾಣದ ಬಜೆಟ್ ನಡುವಣ ದೊಡ್ಡ ಅಂತರವೊಂದಿದೆ. ಬಿಜೆಪಿ ಅಂದೂ ಅಧಿಕಾರದಲ್ಲಿತ್ತು. ಇಂದೂ ಅಧಿಕಾರದಲ್ಲಿದೆ. ಆದರೆ ಇಂದು ಬಿಜೆಪಿಗೆ ಸ್ವಂತ ಬಹುಮತ ಇಲ್ಲ. ಬದಲಾಗಿರುವ ಈ ಜನಾದೇಶವು ಬಜೆಟ್ ಮೇಲೆಯೂ ಪರಿಣಾಮ ಬೀರುತ್ತದೆ. ಮಧ್ಯಂತರ ಬಜೆಟ್ಟಿನ ಅಂಕಿ-ಅಂಶಗಳನ್ನು ಪೂರ್ಣಪ್ರಮಾಣದ ಬಜೆಟ್ ಅಂಕಿ ಅಂಶಗಳ ಜೊತೆ ತಾಳೆ ನೋಡಿದರೆ ಈ ವ್ಯತ್ಯಾಸ ಅರ್ಥವಾದೀತು.

ಮೊದಲ ನೋಟಕ್ಕೆ ಬಜೆಟ್ಟು ಜನಸಾಮಾನ್ಯರಿಗೆ ಅರ್ಥವಾಗದ ಪಾರಿಭಾಷಿಕ ಪದಗಳ ಗೊಂಡಾರಣ್ಯ. ವಿತ್ತೀಯ ಕೊರತೆ, ರೆವಿನ್ಯೂ ಕೊರತೆ, ಪರಿಣಾಮಕಾರಿ ರೆವಿನ್ಯೂ ಕೊರತೆ, ಬಂಡವಾಳ ವೆಚ್ಚ ಮುಂತಾದ ಹತ್ತು ಹಲವು ಪಾರಿಭಾಷಿಕ ಪದಗಳು. ಆದರೆ, ಸರಳ ಪದಗಳಲ್ಲಿ ಹೇಳುವುದೇ ಆದರೆ ಸರ್ಕಾರ ತನ್ನ ಹಣಕಾಸಿನ ಆರೋಗ್ಯವನ್ನು ಸಂಸತ್ತಿಗೆ ಮತ್ತು ಸಂಸತ್ತಿನ ಮೂಲಕ ಇಡೀ ದೇಶಕ್ಕೆ ಸಾರುವ ಕವಾಯತನ್ನು ಬಜೆಟ್ ಅಥವಾ ಆಯವ್ಯಯ ಮುಂಗಡಪತ್ರ ಎಂದು ಕರೆಯಬಹುದು.

Advertisements

ಬಜೆಟ್ಟು ಸಾಮಾನ್ಯವಾಗಿ ಒಂದು ಹಣಕಾಸು ವರ್ಷದ ಅಂತ್ಯ ಮತ್ತು ಮತ್ತೊಂದು ಹಣಕಾಸು ವರ್ಷದ ಆರಂಭದಲ್ಲಿ ಮಂಡನೆಯಾಗುತ್ತದೆ. ಹೀಗಾಗಿ ಕಳೆದ ವರ್ಷ ಸರ್ಕಾರ ಎಷ್ಟು ಹಣವನ್ನು ರೂಢಿಸಿತು ಮತ್ತು ಅದನ್ನು ಹೇಗೆಲ್ಲ ಖರ್ಚು ಮಾಡಿತು, ಆದಾಯ ಮತ್ತು ವೆಚ್ಚದ ನಡುವಣ ಅಂತರವನ್ನು ತುಂಬಲು ಎಷ್ಟು ಸಾಲ ಮಾಡಿತು, ಮುಂಬರುವ ಹಣಕಾಸು ವರ್ಷದಲ್ಲಿ ಎಷ್ಟು ಸಂಪಾದಿಸಲಿದೆ (ಪ್ರಸಕ್ತ ಬಜೆಟ್ಟಿನಲ್ಲಿ ಹಾಲಿ ಹಣಕಾಸು ವರ್ಷ), ಈ ಸಂಪಾದನೆಯಲ್ಲಿ ಎಷ್ಟನ್ನು ಯಾವ್ಯಾವ ಬಾಬ್ತುಗಳ ಮೇಲೆ ವಿನಿಯೋಗಿಸಲಿದೆ, ಅಂತರವನ್ನು ತುಂಬಲು ಎಷ್ಟು ಸಾಲ ಮಾಡಲಿದೆ ಎಂಬುದನ್ನು ವಿವರಿಸುತ್ತದೆ.

ದೇಶದ ಸಾಮಾನ್ಯ ಪ್ರಜೆ ಆಕೆಯೇ ಆಗಲಿ, ಆತನೇ ಇರಲಿ, ಸರ್ಕಾರದ ಈ ಹಣಕಾಸು ಆರೋಗ್ಯ ಕುರಿತು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ ಬಜೆಟ್ಟಿನ ಹಣ ಸರ್ಕಾರದ ಹಣ ಎಂದೇ ಎಲ್ಲರೂ ಭಾವಿಸುತ್ತಾರೆ. ತೆರಿಗೆ ರಿಯಾಯಿತಿ-ವಿನಾಯಿತಿ ಇಲ್ಲವೇ ಸರ್ಕಾರದಿಂದ ಯೋಜನೆಗಳ ರೂಪದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ದೊರೆಯುವ ನಗದು ನೆರವಿನ ಮೇಲೆ ಮಾತ್ರವೇ ಜನಸಾಮಾನ್ಯರ ಕಣ್ಣು ಕೀಲಿಸಿರುತ್ತದೆ. ವಾರ್ಷಿಕ ಕಸರತ್ತಿನ ಸೀಮಿತ ತಿಳಿವಳಿಕೆಯಿದು.

ವಾಸ್ತವವಾಗಿ ಸರ್ಕಾರದ ಹಣ ಎಂಬ ಭಾವನೆ ತಪ್ಪು. ಸರ್ಕಾರದ ಖಜಾನೆಯ ಎಲ್ಲ ಹಣ ತೆರಿಗೆದಾರರ ಹಣ. ಒಂದೊಮ್ಮೆ ಬ್ರಿಟಿಷ್ ಪ್ರಧಾನಿಯಾಗಿದ್ದ ಮಾರ್ಗರೆಟ್ ಥ್ಯಾಚರ್ ಇಂಗ್ಲೆಂಡ್ ಸಂಸತ್ತಿನ ಕೆಳಮನೆಯಲ್ಲಿ ಆಸಕ್ತಿಕರ ವಿವರಣೆ ನೀಡಿದ್ದರು- “ಈ ಮೂಲಭೂತ ಸತ್ಯವನ್ನು ಮರೆಯಬಾರದು. ಸರ್ಕಾರವೆಂಬುದಕ್ಕೆ ತನ್ನ ಸ್ವಂತದ್ದೆಂದು ಹೇಳಬಹುದಾದ ಯಾವ ಆದಾಯ ಮೂಲವೂ ಇಲ್ಲ. ಜನರ ಗಳಿಕೆಯೇ ಸರ್ಕಾರದ ಗಳಿಕೆ. ಸರ್ಕಾರ ಹೆಚ್ಚು ವೆಚ್ಚ ಮಾಡಬೇಕೆಂದರೆ ನಿಮ್ಮ (ಪ್ರಜೆಗಳ) ಉಳಿತಾಯದ ಹಣವನ್ನು ಕಡ ಪಡೆಯಬೇಕು ಇಲ್ಲವೇ ನಿಮ್ಮ ಮೇಲೆ ಹೆಚ್ಚು ತೆರಿಗೆ ಹೇರಬೇಕು. ಯಾರೋ ಕೊಡ್ತಾರೆ ಬಿಡು ಎಂಬ ಧೋರಣೆ ಸರಿಯಲ್ಲ. ಆ ಯಾರೋ ಎಂಬುವರು ನೀವೇ ಆಗಿರುತ್ತೀರಿ”.

ಬಜೆಟ್ಟಿನ ಹಣ ಆಯಾ ದೇಶದ ನಾಗರಿಕರ ಹಣ. ಸರ್ಕಾರ ಕಡ ಪಡೆಯುವ ಹಣವನ್ನು ತೀರಿಸಬೇಕಾದವರು ಪ್ರಜೆಗಳು ಮತ್ತು ಅವರ ಭಾವೀ ತಲೆಮಾರುಗಳು. ಹೀಗಾಗಿ ಸರ್ಕಾರ ಯಾರ ಮೇಲೆ ಎಷ್ಟು ತೆರಿಗೆ ಹಾಕುತ್ತಿದೆ? ಸರ್ಕಾರದ ವೆಚ್ಚದ ಆದ್ಯತೆಗಳೇನು? ಆರೋಗ್ಯ ಮತ್ತು ಶಿಕ್ಷಣದ ಮೇಲೆ ಸಾಕಷ್ಟು ಖರ್ಚು ಮಾಡುತ್ತಿದೆಯೇ ಇಲ್ಲವೇ? ಸಬ್ಸಿಡಿಗಳನ್ನು ಅರ್ಹರಿಗೆ- ಯೋಗ್ಯರಿಗೆ ನೀಡುತ್ತಿದೆಯೇ ಇಲ್ಲವೇ? ತನ್ನ ಆದಾಯ ಮತ್ತು ವೆಚ್ಚದ ನಡುವಣ ಅಂತರವನ್ನು ಹೇಗೆ ತುಂಬುತ್ತಿದೆ?

ಕೇಂದ್ರ ಬಜೆಟ್ಟು ಇಡೀ ದೇಶದ ಅರ್ಥವ್ಯವಸ್ಥೆಯನ್ನು ಪ್ರಭಾವಿಸುತ್ತದೆ. ಭಾರೀ ಎತ್ತುವಳಿಗಳು ಮತ್ತು ಸಾಲಗಳ ಮೂಲಕ ಜನರ ಮೇಲೆ ಭಾರ ಹೇರದೆ, ತನ್ನ ನಾಗರಿಕರು ಮತ್ತು ವ್ಯಾಪಾರ ವಹಿವಾಟನ್ನು ಪ್ರಭಾವಿಸಲು ಬಜೆಟ್ಟನ್ನು ಸ್ಥೂಲವಾಗಿ ಎರಡು ಬಗೆಯಲ್ಲಿ ಬಳಸಿಕೊಳ್ಳಬಹುದು.

ಯಾರ ಮೇಲೆ ಮತ್ತು ಎಷ್ಟು ತೆರಿಗೆಯನ್ನು ವಿಧಿಸುತ್ತದೆ ಎಂಬುದು ಗಮನಾರ್ಹ. ಉದಾಹರಣೆಗೆ ಸರ್ಕಾರ ದೇಶದ ಅರ್ಥವ್ಯವಸ್ಥೆಯ ಒಂದು ವಿಭಾಗದ ವ್ಯಾಪಾರೋದ್ದಿಮೆಗಳು ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತವೆ ಮತ್ತು ಸಮೃದ್ಧಿಯನ್ನು ತರುತ್ತವೆ ಎಂದು ಭಾವಿಸಿ ಪ್ರೋತ್ಸಾಹ ನೀಡಲು ಬಯಸಿದರೆ ಆ ವ್ಯಾಪಾರೋದ್ದಿಮೆಗಳ ಮೇಲಿನ ತೆರಿಗೆ ದರಗಳನ್ನು ಇಳಿಸಬಹುದು. ತೆರಿಗೆ ದರಗಳನ್ನು ತಗ್ಗಿಸಿದ ಮಾತ್ರಕ್ಕೆ ಆದಾಯವೂ ಖಚಿತವಾಗಿ ತಗ್ಗುತ್ತದೆ ಎಂಬುದು ತಪ್ಪು ತಿಳಿವಳಿಕೆ. ತೆರಿಗೆ ದರದ ಇಳಿಕೆಯಿಂದ ಆರ್ಥಿಕ ಚಟುವಟಿಕೆ ಹೆಚ್ಚಿದರೆ ಒಟ್ಟಾರೆ ಆದಾಯ ಕೂಡ ಏರುತ್ತದೆ.

ಬಜೆಟ್ಟು ಕೇವಲ ಒಂದು ವರ್ಷಕ್ಕೆ ಸೀಮಿತವಾಗಿರುತ್ತದೆ. ಆದರೆ, ಹೊಸ ಸರ್ಕಾರದ ಅವಧಿಯ ಆರಂಭದಲ್ಲಿ ಮಂಡಿಸಲಾಗುವ ಬಜೆಟ್‌ (ಉದಾಹರಣೆಗೆ ಈ ಸಲದ ಬಜೆಟ್ಟು) ಆ ಸರ್ಕಾರ ತನ್ನ ಆದಾಯವನ್ನು ಹೇಗೆಲ್ಲ ಖರ್ಚು ಮಾಡಬಯಸುತ್ತದೆ ಎಂಬುದರ ಸಿಗ್ನಲ್ ಅಥವಾ ದಿಕ್ಕು ದೆಸೆಯನ್ನು ಸೂಚಿಸುತ್ತದೆ.

ಉದಾಹರಣೆಗೆ ಖಾಸಗಿ ವಲಯದಿಂದ ಹೂಡಿಕೆಗಳನ್ನು ಪ್ರೋತ್ಸಾಹಿಸುವುದು ಕಳೆದ ಸರ್ಕಾರದ (2019-2024) ಬೃಹತ್ ಅರ್ಥಶಾಸ್ತ್ರ ನೀತಿಯ ಬಹುದೊಡ್ಡ ಪಲ್ಲಟವಾಗಿತ್ತು. ಈ ದಿಕ್ಕಿನಲ್ಲಿ ಕಾರ್ಪೋರೇಟ್ ತೆರಿಗೆಯಲ್ಲಿ ಐತಿಹಾಸಿಕ ಕಡಿತವನ್ನು ಮಾಡಿತ್ತು. ಜೊತೆ ಜೊತೆಗೆ ಮೂಲಭೂತ ಸೌಕರ್ಯಗಳ ಸೃಷ್ಟಿಯ ಮೇಲೆ ತನ್ನ ವೆಚ್ಚವನ್ನು ಹೆಚ್ಚಿಸುವುದಕ್ಕೂ ಒತ್ತು ನೀಡಿತ್ತು.

ಇದನ್ನೂ ಓದಿ ಈ ದಿನ ಸಂಪಾದಕೀಯ | RSS ನಿಷೇಧ ತೆರವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುತ್ತದೆಯೇ?

ಆದರೆ ಈ ವ್ಯವಹಾರ ಕೌಶಲ್ಯಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಲಿಲ್ಲ. ಭಾರತದ ವ್ಯಾಪಾರೋದ್ದಿಮೆಗಳು ಸರ್ಕಾರ ಬಯಸಿದಷ್ಟು ಪ್ರಮಾಣದಲ್ಲಿ ಖಾಸಗಿ ಹೂಡಿಕೆಯನ್ನು ಮಾಡಲಿಲ್ಲ. ಯಾಕೆಂದರೆ ಜನತೆಯಿಂದ ಸರಕು (ಉದಾಹರಣೆಗೆ ದ್ವಿಚಕ್ರವಾಹನ) ಮತ್ತು ಸೇವೆಗಳ (ಉದಾಹರಣೆಗೆ ಪ್ರವಾಸೋದ್ಯಮ) ಒಟ್ಟಾರೆ ಬೇಡಿಕೆ ಪ್ರೋತ್ಸಾಹದಾಯಕ ಆಗಿರಲಿಲ್ಲ. ಉದ್ಯೋಗಾವಕಾಶಗಳ ಕೊರತೆ ಮತ್ತು ವ್ಯಾಪಕ ಆರ್ಥಿಕ ದುಃಸ್ಥಿತಿ ಜನತೆಯನ್ನು ಆವರಿಸಿತ್ತು.

ಇಂತಹ ಸ್ಥಿತಿಯಲ್ಲಿ ಸರ್ಕಾರ ತಾನು ಬಯಸಿದರೆ ಬಂಡವಾಳ ಹೂಡಿಕೆಯನ್ನು ಪ್ರೋತ್ಸಾಹಿಸುವ ಬದಲು ಜನಸಾಮಾನ್ಯರ ಬಳಕೆಯ ಸಾಮರ್ಥ್ಯವನ್ನು ಹೆಚ್ಚಿಸುವ ರೀತಿಯಲ್ಲಿ ತನ್ನ ವೆಚ್ಚವನ್ನು ಮರು ರೂಪಿಸಬಹುದು. ಬಳಕೆ ಹೆಚ್ಚಿದರೆ ಹೊಸ ಬಂಡವಾಳ ಹೂಡಿಕೆಯು ವ್ಯಾಪಾರೋದ್ಯಮಗಳಿಗೆ ಲಾಭದಾಯಕ ಎನಿಸಬಹುದು.
ಸರ್ಕಾರದ ತೆರಿಗೆ ಆದಾಯಗಳು ಎಷ್ಟು ಹೆಚ್ಚಿವೆ ಎಂಬುದು ಬಜೆಟ್ಟಿನಲ್ಲಿ ಗಮನಿಸಬೇಕಾದ ಅಂಶ.

ಗ್ರಾಮೀಣ ಭಾರತ ಮತ್ತು ಸಣ್ಣ ವ್ಯವಹಾರೋದ್ಯಮಗಳ ಮೇಲೆ ಸರ್ಕಾರ ಎಷ್ಟು ವೆಚ್ಚ ಮಾಡುತ್ತಿದೆ ಎಂಬುದು ಗಮನಾರ್ಹ. ಯಾಕೆಂದರೆ ಈ ಎರಡೂ ವಲಯಗಳು ಆರ್ಥಿಕ ಒತ್ತಡಕ್ಕೆ ಸಿಕ್ಕಿ ನಲುಗುತ್ತಿವೆ. ಸಬ್ಸಿಡಿಗಳು ಯಾರಿಗೆ ಎಷ್ಟು ಎಂಬುದು ಮುಖ್ಯ. ವಿತ್ತೀಯ ಕೊರತೆಗಳು ಸರ್ಕಾರಿ ಸಾಲದ ಬೆಟ್ಟವನ್ನು ಮತ್ತಷ್ಟು ದೊಡ್ಡದು ಮಾಡುತ್ತವೆ. ಈ ಹಿಂದಿನ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ವಿತ್ತೀಯ ಕೊರತೆಯನ್ನು ಸಮರ್ಥವಾಗಿ ನಿರ್ವಹಿಸಿಲ್ಲ. ಹೊಸ ಸರ್ಕಾರದ ಈ ಮೊದಲ ಬಜೆಟ್ಟು ಅರ್ಥವ್ಯವಸ್ಥೆಯನ್ನು ತಾನು ಹೇಗೆಲ್ಲ ನಿರ್ವಹಿಸುತ್ತದೆ ಯಾವ ದಾರಿಯನ್ನು ಹಿಡಿಯುತ್ತದೆ, ಅದರ ಆಶಾವಾದದ ಆಧಾರವೇನು ಎಂಬುದರ ದಿಕ್ಸೂಚಿಯಾಗಿರುತ್ತದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

Download Eedina App Android / iOS

X