4 ವರ್ಷಗಳ ಹಿಂದೆ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯ ಮನೆಯನ್ನು ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಉರುಳಿಸಿತ್ತು. ಇದೀಗ, ಅದೊಂದು ಸುಳ್ಳು ಪ್ರಕರಣವೆಂದು ಹೇಳಿರುವ ನ್ಯಾಯಾಲಯ ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿದೆ. ಬಿಜೆಪಿ ಸರ್ಕಾರದ ಕಾನೂನುಬಾಹಿರ ‘ಬುಲ್ಡೋಜರ್ ನ್ಯಾಯ’ಕ್ಕೆ ನಿರಪರಾಧಿಯೊಬ್ಬ ತನ್ನ ಮನೆ ಕಳೆದುಕೊಂಡಿದ್ದಾರೆ. ನಾಲ್ಕು ವರ್ಷಗಳಿಂದ ಆತನ ಕುಟುಂಬ ಬೀದಿಪಾಲಾಗಿದೆ.
2021ರ ಮಾರ್ಚ್‌ನಲ್ಲಿ, ಮಧ್ಯಪ್ರದೇಶದ ರಾಜ್‌ಗಢದಲ್ಲಿ ಮಾಜಿ ಕೌನ್ಸಿಲರ್ ಶಫೀಕ್ ಅನ್ಸಾರಿ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ದೂರು ದಾಖಲಿಸಿದ್ದರು. ಅವರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣ ದಾಖಲಾದ 10 ದಿನಗಳ ಬಳಿಕ, ಶಫೀಕ್ ಅನ್ಸಾರಿ ಅವರ ಮನೆಯನ್ನು ಸ್ಥಳೀಯ ಅಧಿಕಾರಿಗಳು ಬುಲ್ಡೋಜರ್ ಮೂಲಕ ಧ್ವಂಸಗೊಳಿಸಿದ್ದರು.
ಮನೆ ಕಳೆದುಕೊಂಡ ಶಫೀಕ್ ಕುಟುಂಬಕ್ಕೆ ಅವರ ಸಹೋದರ ಆಶ್ರಯ ನೀಡಿದ್ದರು. ಆಶ್ರಯ ನೀಡಿದ್ದಕ್ಕಾಗಿ ಸಹೋದರ ವಿರುದ್ಧವೂ ಪ್ರಕರಣ ದಾಖಲಿಸಲಾಗಿತ್ತು.
ಇದೀಗ, ಪ್ರಕರಣದ ವಿಚಾರಣೆ ನಡೆಸಿ, ಅಂತಿಮ ತೀರ್ಪು ನೀಡಿರುವ ರಾಜ್‌ಗಢ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಚಿತ್ರೇಂದ್ರ ಸಿಂಗ್ ಸೋಲಂಕಿ, “ದೂರುದಾರರ ಸಾಕ್ಷ್ಯಗಳಲ್ಲಿ ಗಮನಾರ್ಹ ವ್ಯತ್ಯಾಸಗಳಿವೆ. ಆರೋಪಿ ಶಫೀಕ್ ಅನ್ಸಾರಿ ಮನೆಯಲ್ಲಿ ಸಂತ್ರಸ್ತೆ ಇದ್ದರು ಎಂಬುದು ಅನುಮಾನಾಸ್ಪದವಾಗಿದೆ. ಆರೋಪಿಯು ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬುದು ವೈದ್ಯಕೀಯ ಅಥವಾ ವೈಜ್ಞಾನಿಕ ಪುರಾವೆಗಳಿಂದ ದೃಢಪಟ್ಟಿಲ್ಲ. ಘಟನೆ ಕುರಿತು ತನ್ನ ಪತಿಗೆ ತಿಳಿಸಲು ಮತ್ತು ಪ್ರಕರಣ ದಾಖಲಿಸುವಲ್ಲಿನ ವಿಳಂಬಕ್ಕೆ ಯಾವುದೇ ತೃಪ್ತಿದಾಯಕ ಕಾರಣವನ್ನೂ ನೀಡಿಲ್ಲ. ಮಹಿಳೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದುದ್ದರ ಬಗ್ಗೆ ಶಫೀಕ್ ದೂರು ನೀಡಿದ್ದ ಕಾರಣಕ್ಕಾಗಿ, ಸೇಡು ತೀರಿಸಿಕೊಳ್ಳಲು ಮಹಿಳೆ ಅತ್ಯಾಚಾರದ ಸುಳ್ಳು ಆರೋಪ ಮಾಡಿದ್ದಾರೆ” ಎಂದು ಹೇಳಿದ್ದಾರೆ. ಪ್ರಕರಣದಿಂದ ಶಫೀಕ್ ಅವರನ್ನು ಖುಲಾಸೆಗೊಳಿಸಿದ್ದಾರೆ.
ಈ ವರದಿ ಓದಿದ್ದೀರಾ?: ಹಿಂದಿವಾಲಾಗಳ ಬುಲ್ಡೋಜರ್ ಬಾಬಾ ಯೋಜನೆಯನ್ನು ಕನ್ನಡ ನಾಡಿನಲ್ಲಿ ಹೇರಿದ ಸುಪ್ರೀಂ ಕೋರ್ಟ್
ಪ್ರಕರಣದಿಂದ ಖುಲಾಸೆಗೊಂಡಿರುವ ಶಫೀಕ್ ತನ್ನ ಮನೆಯನ್ನು ಅಧಿಕಾರಿಗಳು ಧ್ವಂಸಗೊಳಿಸಿದ ಬಗ್ಗೆ ಮಾತನಾಡಿದ್ದಾರೆ. “ಅಂದು ಮುಂಜಾನೆ ನಮ್ಮ ಮನೆಯ ಬಳಿ ಅಧಿಕಾರಿಗಳು ಬುಲ್ಡೋಜರ್‌ಗಳೊಂದಿಗೆ ಧಾವಿಸಿದರು. ನಮ್ಮ ಕುಟುಂಬ ಸದಸ್ಯರ ಮನವಿಯನ್ನು ಆಲಿಸದೆ, ಅರ್ಥಮಾಡಿಕೊಳ್ಳದೆ ಮನೆಯನ್ನು ಕೆಡವಿದರು” ಎಂದು ಅಳಲು ತೋಡಿಕೊಂಡಿದ್ದಾರೆ.
“ಮನೆಗೆ ಸಂಬಂಧಿಸಿದ ಎಲ್ಲ ದಾಖಲೆಗಳು ನಮ್ಮ ಬಳಿ ಇವೆ. ಆದರೂ, ಅನುಮತಿ ಪಡೆಯದೆ ಮನೆ ಕಟ್ಟಿದ್ದೇವೆಂದು ಅಧಿಕಾರಿಗಳು ಆರೋಪಿಸಿದ್ದರು. ದಾಖಲೆಗಳನ್ನು ತೋರಿಸಲು ಕೂಡ ಅವಕಾಶ ಕೊಡದೆ, ಮನೆಯನ್ನು ಉರುಳಿಸಿದರು. ನಾನು ಮೂರು ತಿಂಗಳು ಜೈಲು ವಾಸವನ್ನೂ ಅನುಭವಿಸಬೇಕಾಯಿತು. ನಮ್ಮ ಕುಟುಂಬದಲ್ಲಿ 7 ಮಂದಿ ಇದ್ದಾರೆ. ಎಲ್ಲರೂ ನಿರಾಶ್ರಿತರಾಗಿದ್ದೇವೆ” ಎಂದು ಶಫೀಕ್ ಹೇಳಿದ್ದಾರೆ.