ಬಸ್ ಮಾರ್ಷಲ್‌ಗಳ ಮರು ನಿಯೋಜನೆ ಬಗ್ಗೆ ಸಚಿವ ಸಂಪುಟ ಕೈಗೊಂಡಿರುವ ನಿರ್ಣಯಕ್ಕೆ ಒಪ್ಪಿಗೆ ನೀಡುವಂತೆ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾಗೆ ಮನವಿ ಮಾಡಲು ತಮ್ಮ ಜೊತೆ ಬರುವಂತೆ ದೆಹಲಿ ಸಚಿವ ಸೌರಭ್ ಭಾರಧ್ವಜ್ ಅವರು ಬಿಜೆಪಿ ಶಾಸಕ ವಿಜೇಂದರ್ ಗುಪ್ತಾ ಅವರ ಕಾಲು ಹಿಡಿದು ಮನವಿ ಮಾಡಿದರು.
ಇದಕ್ಕೆ ಅವರು ಸ್ಪಂದಿಸುತ್ತಿದಂತೆಯೇ, ಮುಖ್ಯಮಂತ್ರಿ ಆತಿಶಿ ಅವರು ತಮ್ಮ ಕಾರನ್ನು ಬಿಟ್ಟು ಬಿಜೆಪಿ ನಾಯಕರ ಕಾರಿನಲ್ಲಿ ಕುಳಿತು ಸಚಿವರು, ಶಾಸಕರೊಂದಿಗೆ ವಿ ಕೆ ಸಕ್ಸೇನಾ ಅವರ ಮನೆಗೆ ತೆರಳಿದರು. ಆದರೆ, ಅಲ್ಲಿಂದ ಹೊರ ಬರುತ್ತಿದಂತೆಯೇ ಎಎಪಿ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
‘ಸಚಿವ ಸಂಪುಟದ ನಿರ್ಣಯಕ್ಕೆ ಸಹಿ ಮಾಡುವಂತೆ ಬಿಜೆಪಿಯು ಲೆಫ್ಟಿನೆಂಟ್ ಗವರ್ನರ್ ಅವರನ್ನು ಒತ್ತಾಯಿಸಿಲ್ಲ’ ಎಂದು ಆರೋಪಿಸಿದ ಎಎಪಿ ನಾಯಕರು, ಲೆ.ಗವರ್ನರ್ ಮನೆ ಮುಂದೆ ಪ್ರತಿಭಟನೆ ನಡೆಸಿದರು.
‘ಲೆ.ಗವರ್ನರ್ ಅವರನ್ನು ಭೇಟಿ ಮಾಡಲು ಬಿಜೆಪಿ ಶಾಸಕರು ತಯಾರಿರಲಿಲ್ಲ. ಆದರೆ ನಾವು ಅವರನ್ನು ಜೊತೆಗೆ ಕರೆದುಕೊಂಡು ಹೋದೆವು. ನಿರ್ಣಯಕ್ಕೆ ಸಹಿ ಮಾಡುವಂತೆ ಬಿಜೆಪಿ ಶಾಸಕರು ಲೆ.ಗವರ್ನರ್ ಅವರಿಗೆ ಮನವಿ ಮಾಡಲಿಲ್ಲ. ಬಿಜೆಪಿಯು ದ್ರೋಹ ಮಾಡಿದೆ’ ಎಂದು ಮುಖ್ಯಮಂತ್ರಿ ಆತಿಶಿ ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆರೋಪ-ಪ್ರತ್ಯಾರೋಪಗಳೆಷ್ಟು ಕಾಲ? ಆಡಳಿತ, ಅಭಿವೃದ್ಧಿ, ಕಲ್ಯಾಣಕ್ಕೆಷ್ಟು ಸಮಯ?
‘ಸಚಿವ ಸಂಪುಟದ ನಿರ್ಣಯಕ್ಕೆ ಲೆ.ಗವರ್ನರ್ ವಿ ಕೆ ಸಕ್ಸೇನಾ ಸಹಿ ಮಾಡಿಲ್ಲ. ಇದರಿಂದಾಗಿ 10 ಸಾವಿರ ಬಸ್ ಮಾರ್ಷಲ್‌ಗಳ ಆಕ್ರೋಶಕ್ಕೆ ಅವರು ತುತ್ತಾಗಲಿದ್ದಾರೆ’ ಎಂದು ಸಚಿವ ಭಾರಧ್ವಜ್ ಕಿಡಿಕಾರಿದರು.
ನಾಗರಿಕ ಸೇನೆಯ 10 ಸಾವಿರ ಸ್ವಯಂಸೇವಕರನ್ನು ಬಸ್‌ಗಳಲ್ಲಿ ಮಾರ್ಷಲ್‌ಗಳಾಗಿ ನಿಯೋಜಿಸಿರುವ ಬಗ್ಗೆ ನಾಗರಿಕ ರಕ್ಷಣಾ ನಿರ್ದೇಶನಾಲಯವು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಕಳೆದ ವರ್ಷ ಅವರನ್ನು ವಜಾಗೊಳಿಸಲಾಗಿತ್ತು. ಬಸ್ ಮಾರ್ಷಲ್‌ಗಳ ಮರುನಿಯೋಜನೆಯ ಬಗ್ಗೆ ಬಿಜೆಪಿ ಶಾಸಕರು ಶುಕ್ರವಾರ ಮುಖ್ಯಮಂತ್ರಿ ಆತಿಶಿ ಜೊತೆ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಸಚಿವ ಸಂಪುಟವು ನಿರ್ಣಯ ಕೈಗೊಂಡಿತ್ತು.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಿ ಕೆ ಸಕ್ಸೇನಾ ಈ ಸೇವೆಯನ್ನು ಸ್ಥಗಿತಗೊಳಿಸಿದ ನಂತರ ಬಸ್ ಮಾರ್ಷಲ್‌ಗಳು ತಮ್ಮ ಸೇವೆಯನ್ನು ಮರುಸ್ಥಾಪಿಸುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿಯ ಚಂದಗಿರಾಮ್ ಅಖಾರಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಎಎಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.
