ಆಸ್ತಿ ವಿವಾದದಿಂದಾಗಿ 86 ವರ್ಷದ ಕೈಗಾರಿಕೋದ್ಯಮಿಯೊಬ್ಬರನ್ನು ಅವರ ಮೊಮ್ಮಗನೇ ಇರಿದು ಕೊಂದಿರುವ ಆಘಾತಕಾರಿ ಘಟನೆ ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದಿದೆ.
ಆರೋಪಿ, 28 ವರ್ಷದ ಕೀರ್ತಿ ತೇಜ ಎಂಬಾತ ತನ್ನ ಅಜ್ಜ, ವೆಲ್ಜನ್ ಗ್ರೂಪ್‌ನ ಅಧ್ಯಕ್ಷ ವಿ.ಸಿ. ಜನಾರ್ದನ ರಾವ್ ಅವರನ್ನು ಚಾಕುವಿನಿಂದ ಇರಿದಿದ್ದಾನೆ. ಹಲವಾರು ಚುಚ್ಚಿದ್ದರಿಂದ ತೀವ್ರ ರಕ್ತಸ್ರಾವದಿಂದಾಗಿ ರಾವ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಜ್ಜನ ಮೇಲೆ ಹಲ್ಲೆ ನಡೆಸುತ್ತಿದ್ದುದ್ದನ್ನು ತಡೆಯಲು ಬಂದ ತನ್ನ ತಾಯಿಗೂ ಆರೋಪಿ ಚಾಕುವಿನಿಂದ ಇರಿದಿದ್ದಾನೆ. ಆಕೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ.
ಆರೋಪಿ ತೇಜು ಪ್ರತ್ಯೇಕವಾಗಿ ವಾಸವಾಗಿದ್ದ. ಅಜ್ಜನ ಮನೆಗೆ ಬಂದಿದ್ದ ಆತ, ಆಸ್ತಿಯನ್ನು ಹಂಚಿಕೆ ಮಾಡುವಂತೆ ಅಜ್ಜನ ಬಳಿ ಬೇಡಿಕೆ ಇಟ್ಟಿದ್ದಾನೆ. ಆದರೆ, ಆಸ್ತಿ ಹಂಚಿಕೆಗೆ ರಾವ್ ನಿರಾಕಸಿದ್ದಾರೆ. ಹೀಗಾಗಿ, ಆತ ಜಗಳ ತೆಗೆದಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗಿದ್ದು, ಚಾಕುವಿನಿಂದ ಇರಿದಿದ್ದಾನೆ ಎಂದು ವರದಿಯಾಗಿದೆ.
ರಾವ್ ಅವರನ್ನು ಆರೋಪಿ ತೇಜು ಸುಮಾರು 70 ಬಾರಿ ಇರಿದಿದ್ಧಾನೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ತನಿಖೆ ನಡೆಸುತ್ತಿದ್ದಾರೆ.