ಸಿದ್ಧಾಂತದ ಕಾರಣಕ್ಕಾಗಿ ಯಾರನ್ನೂ ಜೈಲಿಗೆ ಹಾಕಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿರುವ ಸುಪ್ರೀಂ ಕೋರ್ಟ್, ನಿಷೇಧಿತ ಪಿಎಫ್‌ಐ ಸಂಘಟನೆಯ ನಾಯಕ ಅಬ್ದುಲ್ ಸತ್ತಾರ್ ಅವರಿಗೆ ಜಾಮೀನು ನೀಡಿದೆ.
2022ರ ಏಪ್ರಿಲ್ 16ರಂದು ಕೇರಳದ ಪಾಲಕ್ಕಾಡ್‌ನಲ್ಲಿ ನಡೆದಿದ್ದ ಆರ್‌ಎಸ್‌ಎಸ್ ಕಾರ್ಯಕರ್ತ ಶ್ರೀನಿವಾಸನ್ ಕೊಲೆ ಪ್ರಕರಣದಲ್ಲಿ ಅಬ್ದುಲ್ ಸತ್ತಾರ್ ಅವರನ್ನು ಬಂಧಿಸಲಾಗಿತ್ತು. ಅವರ ವಿರುದ್ಧ ಕೊಲೆ ಪಿತೂರಿ ರೂಪಿಸಿದ ಆರೋಪ ಹೊರಿಸಲಾಗಿತ್ತು. ಆ ಕೊಲೆಗೂ ತಮಗೂ ಯಾವುದೇ ಸಂಬಂಧವಿಲ್ಲ. ಪ್ರಕರಣದ ಮುಖ್ಯ ಎಫ್‌ಐಆರ್‌ನಲ್ಲೂ ನನ್ನ ಹೆಸರಿಲ್ಲ ಎಂದು ವಾದಿಸಿದ್ದ ಸತ್ತಾರ್ ಅವರಿಗೆ ಜಾಮೀನು ನೀಡಲು ಈ ಹಿಂದೆ ಕೇರಳ ಹೈಕೋರ್ಟ್ ನಿರಾಕರಿಸಿತ್ತು.
ಹೈಕೋರ್ಟ್ ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ಸತ್ತಾರ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರಿದ್ದ ಪೀಠವು ಸತ್ತಾರ್ ಅವರಿಗೆ ಜಾಮೀನು ನೀಡಿದೆ.
ಜಾಮೀನು ನೀಡುವ ಆದೇಶದಲ್ಲಿ ನ್ಯಾಯಮೂರ್ತಿ ಓಕಾ ಅವರು, “ಸಿದ್ಧಾಂತದ ಕಾರಣಕ್ಕಾಗಿ ಯಾರನ್ನಾದರೂ ಜೈಲಿಗೆ ಹಾಕಲು ಸಾಧ್ಯವಿಲ್ಲ. ಇತ್ತೀಚೆಗೆ, ಸಿದ್ಧಾಂತದ ಕಾರಣಕ್ಕಾಗಿ ಜೈಲಿಗಟ್ಟುವ ಟ್ರೆಂಡ್ ಹೆಚ್ಚುತ್ತಿದೆ. ಅವರು ನಿರ್ದಿಷ್ಟ ಸಿದ್ಧಾಂತವನ್ನು ಅಳವಡಿಸಿಕೊಂಡಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಜೈಲಿಗೆ ಹಾಕಲಾಗುತ್ತಿದೆ” ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ವಿಚಾರಣೆ ವೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಪರವಾಗಿ ಹಾಜರಾಗಿದ್ದ ವಕೀಲರು, “ಕೊಲೆಗೆ ಸಂಬಂಧಿಸಿದ ಮುಖ್ಯ ಎಫ್ಐಆರ್‌ನಲ್ಲಿ ಸತ್ತಾರ್ ಹೆಸರಿಲ್ಲದಿದ್ದರೂ, ಪಿಎಫ್ಐ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯಕರ್ತರ ನೇಮಕಾತಿ ಮತ್ತು ಶಸ್ತ್ರಾಸ್ತ್ರ ತರಬೇತಿಗೆ ಸಂಬಂಧಿಸಿದಂತೆ ಸತ್ತಾರ್ ಅವರು ಕ್ರಮಗಳನ್ನು ತೆಗೆದುಕೊಂಡಿದ್ದಾರೆ” ಎಂದು ವಾದಿಸಿದ್ದರು.