ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ಅವರು ಬೆಂಗಳೂರಿನಲ್ಲಿ ಮುಸ್ಲಿಮರು ಹೆಚ್ಚು ವಾಸಿಸುವ ಗೋರಿಪಾಳ್ಯವನ್ನು ಪಾಕಿಸ್ತಾನ ಎಂದು ಕರೆದಿದ್ದರು. ಅವರ ಹೇಳಿಕೆ ವಿರುದ್ಧ ಸುಪ್ರೀಂ ಕೋರ್ಟ್ ‘ಸು ಮೋಟೊ’ ಪ್ರಕರಣ ದಾಖಲಿಸಿತ್ತು. ಬಳಿಕ, ಶ್ರೀಶಾನಂದ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದು, ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಮುಕ್ತಾಯಗೊಳಿಸಿದೆ. ಈ ವೇಳೆ, “ಭಾರತದ ಯಾವುದೇ ಭಾಗವನ್ನು ಪಾಕಿಸ್ತಾನ ಎಂದು ಕರೆಯುವಂತಿಲ್ಲ” ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಹೇಳಿದ್ದಾರೆ.
ಶ್ರೀಶಾನಂದ ವಿರುದ್ಧದ ‘ಸು ಮೋಟೊ’ ಪ್ರಕರಣದ ವಿಚಾರಣೆಯಲ್ಲಿ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ವಿಚಾರಣೆ ನಡೆಸಿದೆ. “ಭಾರತದ ಯಾವುದೇ ಭಾಗವನ್ನು ಯಾರೂ ಪಾಕಿಸ್ತಾನ ಎಂದು ಕರೆಯಲು ಸಾಧ್ಯವಿಲ್ಲ. ಆ ರೀತಿ ಕರೆಯುವುದು ಮೂಲಭೂತವಾಗಿ ರಾಷ್ಟ್ರದ ಪ್ರಾದೇಶಿಕ ಸಮಗ್ರತೆಗೆ ವಿರುದ್ಧವಾಗಿದೆ” ಎಂದು ಸಿಜೆಐ ಚಂದ್ರಚೂಡ್ ಹೇಳಿದ್ದಾರೆ.
“ನ್ಯಾಯ ಮತ್ತು ನ್ಯಾಯಾಂಗದ ಘನತೆಯ ಹಿತಾಸಕ್ತಿಯಿಂದಾಗಿ ‘ಸು ಮೋಟೊ’ ಪ್ರಕರಣವನ್ನು ಮುಕ್ತಾಯಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.
“ಒಬ್ಬರು ಪಿತೃಪ್ರಭುತ್ವ ಅಥವಾ ಸ್ತ್ರೀದ್ವೇಷದ ಹೇಳಿಕೆಗಳನ್ನು ನೀಡುವ ಮುನ್ನ ಜಾಗರೂಕರಾಗಿರಬೇಕು. ನಿರ್ದಿಷ್ಟ ಲಿಂಗ ಅಥವಾ ಸಮುದಾಯದ ಮೇಲಿನ ಅವಲೋಕನಗಳ ಬಗ್ಗೆ ನಾವು ನಮ್ಮ ಗಂಭೀರ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತೇವೆ. ಅಂತಹ ಅವಲೋಕನಗಳು ಪಕ್ಷಪಾತದಿಂದ ಕೂಡಿರಬಾರದು. ಎಲ್ಲರನ್ನು ಒಳಗೊಳ್ಳುವಂತಿರಬೇಕು” ಎಂದು ಸಿಜೆಐ ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಿಂದ ಮತ್ತೊಂದು ಅಸಹ್ಯಕರ ಹೇಳಿಕೆ: ವ್ಯಾಪಕ ಖಂಡನೆ
ಪ್ರಕರಣವೊಂದರ ವಿಚಾರಣೆ ವೇಳೆ, ಶ್ರೀಶಾನಂದ ಅವರು ಭೂಮಾಲೀಕ-ಬಾಡಿಗೆದಾರರ ವಿವಾದವನ್ನು ಉಲ್ಲೇಖಿಸಿ ಮಾತನಾಡಿದ್ದರು. ಆಗ, ಬೆಂಗಳೂರಿನಲ್ಲಿ ಮುಸ್ಲಿಂ ಬಾಹುಳ್ಯವಿರುವ ಗೋರಿಪಾಳ್ಯವನ್ನು ‘ಪಾಕಿಸ್ತಾನ’ ಎಂದು ಉಲ್ಲೇಖಿಸಿದ್ದರು. ಮಾತ್ರವಲ್ಲದೆ, ಮತ್ತೊಂದು ಪ್ರಕರಣದ ವಿಚಾರಣೆ ವೇಳೆ, ಮಹಿಳಾ ವಕೀಲರನ್ನು ಅಸಹ್ಯಕರ ಪದಗಳನ್ನು ಬಳಸಿ, ಅಪಮಾನ ಮಾಡಿದ್ದರು. ಎರಡೂ ಘಟನೆಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನ್ಯಾಯಾಧೀಶ ಶ್ರೀಶಾನಂದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ, ಶ್ರೀಶಾನಂದ ವಿರುದ್ಧ ಸುಪ್ರೀಂ ಕೋರ್ಟ್ ಪ್ರಕರಣ ದಾಖಲಿಸಿಕೊಂಡು, ಕರ್ನಾಟಕ ಹೈಕೋರ್ಟ್‌ಗೆ ನೋಟಿಸ್ ಜಾರಿ ಮಾಡಿತ್ತು. ವರದಿ ನೀಡುವಂತೆ ಸೂಚಿಸಿತ್ತು.