ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯು ಬಯಸದ ಗರ್ಭದಾರಣೆಯನ್ನು ಉಳಿಸಿಕೊಳ್ಳುವಂತೆ, ಗರ್ಭಪಾತ ಮಾಡಿಸಿಕೊಳ್ಳದಂತೆ ಒತ್ತಾಯಿಸಲಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಜೊತೆಗೆ 28 ವಾರಗಳ ಗರ್ಭಿಣಿಯಾಗಿರುವ 12 ವರ್ಷದ ಬಾಲಕಿಗೆ ವೈದ್ಯಕೀಯ ತಜ್ಞರ ವರದಿಯ ಹೊರತಾಗಿಯೂ ಗರ್ಭಪಾತ ಮಾಡಲು ಅವಕಾಶ ನೀಡಿದೆ.
ಆಕೆಯ ಇಚ್ಛೆಗೆ ವಿರುದ್ಧವಾಗಿ ಮಗುವಿಗೆ ಜನ್ಮ ನೀಡುವಂತೆ ಒತ್ತಾಯಿಸಿದರೆ, ನ್ಯಾಯಾಲಯವು ‘ಆಕೆಯ ಜೀವನದ ಹಾದಿಯನ್ನು’ ನಿರ್ಧರಿಸುವ ಹಕ್ಕನ್ನು ಕಸಿದುಕೊಳ್ಳುವಂತೆ ಆಗುತ್ತದೆ ಎಂದು ಹೈಕೋರ್ಟ್ ಹೇಳಿದೆ.
ಇದನ್ನು ಓದಿದ್ದೀರಾ? 30 ವಾರಗಳ ಗರ್ಭಿಣಿಯಾಗಿರುವ 14 ವರ್ಷದ ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತಕ್ಕೆ ಸುಪ್ರೀಂ ಅನುಮತಿ
ಬಾಲಕಿಯನ್ನು ಪರೀಕ್ಷಿಸಿದ ನಂತರ ವೈದ್ಯಕೀಯ ಮಂಡಳಿಯು, ಬಾಲಕಿಯ ವಯಸ್ಸು ಮತ್ತು ಭ್ರೂಣದ ಬೆಳವಣಿಗೆಯ ಹಂತವನ್ನು ಪರಿಗಣಿಸಿ ಗರ್ಭಪಾತ ಮಾಡಿಸಿಕೊಳ್ಳುವುದು ಹೆಚ್ಚು ಅಪಾಯಕಾರಿ ಎಂದು ಅಭಿಪ್ರಾಯಪಟ್ಟಿತ್ತು.
ಆದರೆ ನ್ಯಾಯಮೂರ್ತಿಗಳಾದ ನಿತಿನ್ ಸಾಂಬ್ರೆ ಮತ್ತು ಸಚಿನ್ ದೇಶಮುಖ್ ಅವರ ಪೀಠವು ಜೂನ್ 17ರ ಆದೇಶದಲ್ಲಿ ಗರ್ಭಪಾತವನ್ನು ಅನುಮತಿಸಬೇಕಾಗುತ್ತದೆ ಎಂದು ಆದೇಶಿಸಿದೆ.
“ಈ ನ್ಯಾಯಾಲಯವು ಸಂತ್ರಸ್ತೆಯನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ಗರ್ಭ ಧರಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ. ನಾವು ಹಾಗೆ ಒತ್ತಾಯಿಸಿದರೆ ಆಕೆಯ ಜೀವನದ ತಕ್ಷಣದ ಮತ್ತು ದೀರ್ಘಾವಧಿಯ ಮಾರ್ಗವನ್ನು ನಿರ್ಧರಿಸುವ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.
“ಮಹಿಳೆ ವಿವಾಹವಾಗದೆಯೇ ಆಕೆಯ ಆಯ್ಕೆಯ ಮೂಲಕ ಗರ್ಭಿಣಿಯಾಗಬಹುದು. ಆದಾಗ್ಯೂ ಆಕೆ ಬಯಸದ ಗರ್ಭದ ಹೊರೆಯನ್ನು ಆಕೆಯ ಮೇಲೆಯೇ ಹಾಕಲಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.
ಬಾಲಕಿಯ ಮೇಲೆ ಆಕೆಯ ಚಿಕ್ಕಪ್ಪ ಅತ್ಯಾಚಾರ ಎಸಗಿದ್ದು, ಬಾಲಕಿ ಗರ್ಭಿಣಿಯಾಗಿದ್ದಾಳೆ. ಗರ್ಭಪಾತಕ್ಕೆ ಅವಕಾಶ ನೀಡಬೇಕು ಎಂದು ಕೋರಿ ಬಾಲಕಿಯ ತಂದೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
