ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಮುಖ್ಯಸ್ಥೆ ರೇಖಾ ಶರ್ಮಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಿಳಾ ಆಯೋಗ ಶುಕ್ರವಾರ ದೆಹಲಿ ಪೊಲೀಸರಿಗೆ ದೂರು ನೀಡಿದ ನಂತರ ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
“ಎನ್‌ಸಿಡಬ್ಲ್ಯೂ ನಿಂದ ದೂರು ಸ್ವೀಕರಿಸಲಾಗಿದ್ದು, ಟ್ವೀಟ್‌ನ ಮರುಪೋಸ್ಟ್ (ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ) ಮಾಡುವ ಮೂಲಕ ಸಂಸದೆ ಮೊಯಿತ್ರಾ ಅವರು ಸೆಕ್ಷನ್ 79, ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) 2023 ರ ಅಡಿಯಲ್ಲಿ ಅಪರಾಧ ಮಾಡಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
ದೂರನ್ನು ಸ್ವೀಕರಿಸಿದ ದೆಹಲಿ ಪೊಲೀಸ್ ವಿಶೇಷ ಸೆಲ್ ಪ್ರಾಥಮಿಕ ಪರೀಕ್ಷೆಯ ನಂತರ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಪ್ರಾರಂಭಿಸಿದೆ ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಓರ್ವ ಸಂಸದೆಯ ಧ್ವನಿ ಹತ್ತಿಕ್ಕಿ ಬಿಜೆಪಿ ಭಾರೀ ಬೆಲೆ ತೆತ್ತಿದೆ, 63 ಸ್ಥಾನ ಕಳೆದುಕೊಂಡಿದೆ: ಮಹುವಾ ಮೊಯಿತ್ರಾ
ಗುರುವಾರ, ಹಾಥರಸ್ ಕಾಲ್ತುಳಿತದ ಸ್ಥಳಕ್ಕೆ ರೇಖಾ ಶರ್ಮಾ ಆಗಮನವನ್ನು ತೋರಿಸುವ ವೀಡಿಯೊದಲ್ಲಿ ಮೊಯಿತ್ರಾ ಕಾಮೆಂಟ್ ಮಾಡಿದ್ದರು. ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ರೇಖಾ ಅವರಿಗೆ ಛತ್ರಿ ಹಿಡಿದುಕೊಂಡು ಹಿಂದೆ ಹೋಗುತ್ತಿರುವುದನ್ನು ಕಾಣಬಹುದು. ಈ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ.
ರೇಖಾ ಶರ್ಮಾ ತನ್ನ ಸ್ವಂತ ಛತ್ರಿಯನ್ನು ತಾನೇ ಬಳಸಲು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ. ಈ ಎಕ್ಸ್ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಮಹುವಾ ಮೊಯಿತ್ರಾ “ಅವರು (ರೇಖಾ ಶರ್ಮಾ) ತನ್ನ ಬಾಸ್‌ನ ಪೈಜಾಮಾವನ್ನು ಹಿಡಿದಿಟ್ಟುಕೊಳ್ಳುವಲ್ಲಿ ನಿರತರಾಗಿದ್ದಾರೆ” ಎಂದು ಹೇಳಿದ್ದಾರೆ.
Also @DelhiPolice while you’re at it can you please register an FIR against another serial offender under your new Act.
I Can Hold My Old Umbrella pic.twitter.com/QE6iCT0fU4— Mahua Moitra (@MahuaMoitra) July 5, 2024
ತನ್ನ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿದ್ದಂತೆ ಮಹಿಳಾ ಆಯೋಗ್ಯ ಮುಖ್ಯಸ್ಥೆ ರೇಖಾ ಶರ್ಮಾ ಅವರು ಇತರೆ ವ್ಯಕ್ತಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಎಕ್ಸ್ ಪೋಸ್ಟ್‌ಗಳ ಸ್ಕ್ರೀನ್‌ಶಾಟ್ ಅನ್ನು ಮಹುವಾ ಮೊಯಿತ್ರಾ ಹಂಚಿಕೊಂಡಿದ್ದಾರೆ. ಸೋನಿಯಾ ಗಾಂಧಿ, ಮಹಾತ್ಮ ಗಾಂಧಿ ಸೇರಿದಂತೆ ಹಲವಾರು ಮಂದಿಯ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ರೇಖಾ ಶರ್ಮಾ ವಿರುದ್ಧವೂ ಪ್ರಕರಣ ದಾಖಲಾಗಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.