ನ್ಯಾ.ಯಶವಂತ್ ವರ್ಮಾ ಅವರ ಮನೆಯಲ್ಲಿ ಅರೆಬೆಂದ ಸ್ಥಿತಿಯಲ್ಲಿ ಲೆಕ್ಕವಿಲ್ಲದ ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನೇಮಿಸಿದ್ದ ಆಂತರಿಕ ನ್ಯಾಯಾಂಗ ಸಮಿತಿಯು ಅವರ ಮೇಲಿನ ಆರೋಪಗಳು ಸತ್ಯ ಎಂದು ಹೇಳಿದೆ.
ಮೇ 4ರಂದು ಸಮಿತಿಯು ಸಲ್ಲಿಸಿರುವ ವರದಿಯ ಅಂಶಗಳನ್ನು ಉಲ್ಲೇಖಿಸಿ, ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಸಂಜೀವ್ ಖನ್ನಾ ಅವರು, ನ್ಯಾಯಮೂರ್ತಿ ಸ್ಥಾನದಿಂದ ಕೆಳಗಿಳಿಯುವಂತೆ ವರ್ಮಾ ಅವರಿಗೆ ಸೂಚಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. ಆದರೆ ಈ ಸಂಗತಿ ಇನ್ನೂ ಖಚಿತವಾಗಿಲ್ಲ. ಸಹಜ ನ್ಯಾಯದ ತತ್ವವನ್ನು ಪಾಲಿಸಿರುವ ಸಿಜೆಐ, ವರದಿಯ ಪ್ರತಿಯನ್ನು ನ್ಯಾಯಮೂರ್ತಿ ವರ್ಮಾ ಅವರಿಗೆ ತಲುಪಿಸಿ ಪ್ರತಿಕ್ರಿಯೆ ಕೊಡುವಂತೆ ತಿಳಿಸಿದ್ದಾರೆ. ಅವರು ಅದನ್ನು ಪಾಲಿಸದಿದ್ದರೆ, ಅವರ ವಾಗ್ದಂಡನೆಗೆ ಶಿಫಾರಸುಗಳೊಂದಿಗೆ ವರದಿಯನ್ನು ಭಾರತದ ರಾಷ್ಟ್ರಪತಿಗಳಿಗೆ ಕಳುಹಿಸಲಾಗುವುದು ಎಂದು ತಿಳಿದುಬಂದಿದೆ.
ಸಿಜೆಐ ಅವರು ನ್ಯಾಯಮೂರ್ತಿ ವರ್ಮಾ ಅವರಿಗೆ ಮೇ 9ರ ಶುಕ್ರವಾರದವರೆಗೆ ಫಲಿತಾಂಶಗಳನ್ನು ನೀಡಲು ಕಾಲಾವಕಾಶ ನೀಡಿದ್ದಾರೆ ಎಂದು ವರದಿಯಾಗಿದೆ.
ನ್ಯಾಯಮೂರ್ತಿ ವರ್ಮಾ ನಗದು ವಿವಾದ ಪ್ರಕರಣದ ಬಗ್ಗೆ?
ಮಾರ್ಚ್ 14ರಂದು ನ್ಯಾಯಮೂರ್ತಿ ವರ್ಮಾ ಅವರ ದೆಹಲಿ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡಾಗ ವಿವಾದ ಪ್ರಾರಂಭವಾಯಿತು. ಅವರು ಮತ್ತು ಅವರ ಪತ್ನಿ ಮಧ್ಯಪ್ರದೇಶದಲ್ಲಿ ಪ್ರಯಾಣದಲ್ಲಿದ್ದಾಗ, ಅವರ ಮಗಳು ಹಾಗೂ ವಯಸ್ಸಾದ ತಾಯಿ ಮಾತ್ರ ಮನೆಯಲ್ಲಿದ್ದರು. ಬೆಂಕಿ ನಂದಿಸಲು ಹೋದ ಅಗ್ನಿಶಾಮಕ ದಳದವರಿಗೆ ಲೆಕ್ಕವಿಲ್ಲದಷ್ಟು ಹಣದ ಕಟ್ಟುಗಳು ಕಂಡುಬಂದಿರುವು ವರದಿಯಾಗಿತ್ತು. ಬಳಿಕ ನಗದು ಸುಡುವುದನ್ನು ತೋರಿಸುವ ವಿಡಿಯೊ ಕೂಡ ಹೊರಬಂದಿತ್ತು.
ಬಳಿಕ ಮೂವರು ಸದಸ್ಯರು ಇರುವ ಸಮಿತಿಯು ತನ್ನ ವರದಿಯನ್ನು ಸಿಜೆಐ ಅವರಿಗೆ ಇತ್ತೀಚೆಗೆ ಸಲ್ಲಿಸಿದೆ. ಸಾಕ್ಷ್ಯಗಳನ್ನು ಪರಿಶೀಲಿಸಿರುವ ಸಮಿತಿಯು, 50ಕ್ಕೂ ಹೆಚ್ಚು ಮಂದಿಯಿಂದ ಹೇಳಿಕೆ ಪಡೆದುಕೊಂಡಿದೆ. ದೆಹಲಿ ಪೊಲೀಸ್ ಆಯುಕ್ತ ಸಂಜಯ್ ಅರೋರ ಮತ್ತು ದೆಹಲಿ ಅಗ್ನಿಶಾಮಕ ದಳದ ಮುಖ್ಯಸ್ಥರ ಹೇಳಿಕೆಗಳನ್ನೂ ಸಮಿತಿ ದಾಖಲಿಸಿದೆ.
ವರ್ಮಾ ಅವರ ನಿವಾಸದಲ್ಲಿ ಮಾರ್ಚ್ 14ರ ರಾತ್ರಿ 11.35ರ ವೇಳೆಗೆ ಬೆಂಕಿ ಕಾಣಿಸಿಕೊಂಡಾಗ ಅಲ್ಲಿಗೆ ಮೊದಲು ಧಾವಿಸಿದ್ದವರಲ್ಲಿ ಈ ಇಬ್ಬರೂ ಸೇರಿದ್ದಾರೆ. ಆ ಸಂದರ್ಭದಲ್ಲಿ ವರ್ಮಾ ಅವರು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಆಗಿದ್ದರು.
ಸಿಜೆಐ ಖನ್ನಾ ಅವರು ಮಾರ್ಚ್ 22ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಿಎಸ್ ಸಂಧಾವಾಲಿಯಾ ಮತ್ತು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್ ಅವರನ್ನೊಳಗೊಂಡ ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದರು. ಸಮಿತಿಯು ಮಾರ್ಚ್ 25ರಂದು ತನ್ನ ತನಿಖೆಯನ್ನು ಪ್ರಾರಂಭಿಸಿತು.
ನ್ಯಾಯಮೂರ್ತಿ ವರ್ಮಾ ಅವರು ಈ ತಪ್ಪನ್ನು ನಿರಾಕರಿಸಿದ್ದು, ಈ ಘಟನೆ “ತನ್ನನ್ನು ಸಿಲುಕಿಸುವ ಪಿತೂರಿ” ಎಂದು ಬಣ್ಣಿಸಿದ್ದಾರೆ. ಸಿಜೆಐ ಖನ್ನಾ ಅವರು ವರದಿಯಲ್ಲಿರುವ ಅಂಶಗಳನ್ನು ಕುರಿತು ಸುಪ್ರೀಂಕೋರ್ಟ್ ಕೊಲಿಜಿಯಂ ಸದಸ್ಯ(ಹಿರಿಯ ವಕೀಲರಾದ ಸಿದ್ಧಾರ್ಥ್ ಅಗರ್ವಾಲ್, ಅರುಂಧತಿ ಕಾಟ್ಜು ಮತ್ತು ಇತರರನ್ನು ಒಳಗೊಂಡ ಕಾನೂನು ತಂಡ)ರ ಜತೆ ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿದ್ದೀರಾ? ಸರ್ವಪಕ್ಷ ಸಭೆಗೆ ಪ್ರಧಾನಿ ಮೋದಿ ಗೈರು; ಖರ್ಗೆ, ರಾಹುಲ್ ಏನೆಂದರು?
ಏತನ್ಮಧ್ಯೆ, ದೆಹಲಿ ಪೊಲೀಸ್ ಆಯುಕ್ತರು ವಿಡಿಯೊ ಪುರಾವೆಗಳನ್ನು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯೊಂದಿಗೆ ಹಂಚಿಕೊಂಡರು, ನಂತರ ಅದನ್ನು ಪ್ರಾಥಮಿಕ ವರದಿ ಮತ್ತು ನ್ಯಾಯಮೂರ್ತಿ ವರ್ಮಾ ಅವರ ಉತ್ತರದೊಂದಿಗೆ ಸಾರ್ವಜನಿಕಗೊಳಿಸಲಾಯಿಗಿದ್ದು, ಇದು ಸುಪ್ರೀಂ ಕೋರ್ಟ್‌ನ ಅಭೂತಪೂರ್ವ ಕ್ರಮವಾಗಿದೆ.
ಖನ್ನಾ ಅವರು ಮೇ 13ರಂದು ನಿವೃತಿ ಹೊಂದುತ್ತಿದ್ದಾರೆ. ಹಾಗಾಗಿ ನಿವೃತ್ತಿಗೂ ಮುನ್ನ ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದಾರೆಂದು ಹೇಳಲಾಗುತ್ತಿದೆ.