ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ್ದ ಯುವ ಪತ್ರಕರ್ತೆ ಹಾಗೂ ಯೂಟ್ಯೂಬರ್ ವಿರುದ್ಧವೇ ಎಸ್ಸಿ/ಎಸ್ಟಿ (ಜಾತಿನಿಂದನೆ) ತಡೆ ಕಾಯ್ದೆಯಡಿ ಎಫ್ಐಆರ್ ದಾಖಲಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಅರ್ಜಿದಾರ ಯುವತಿಯ ವಿರುದ್ಧ ಯಾವುದೇ ಕಠಿಣ ಅಥವಾ ಬಂಧನದಂತಹ ಕ್ರಮಗಳನ್ನು ಕೈಗೊಳ್ಳದಂತೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ರಕ್ಷಣೆ ಒದಗಿಸಿದೆ.
ಇದರೊಂದಿಗೆ, ಪತ್ರಕರ್ತರಿಗೆ ಪೊಲೀಸ್ ಕಿರುಕುಳ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಅತ್ಯಾಚಾರ ತಡೆ) ಕಾಯ್ದೆಯ ದುರುಪಯೋಗದ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರಿಗೆ ಸಮಜಾಯಿಷಿ (ಸಮನ್ಸ್/ನೋಟಿಸ್) ಕೇಳಿದೆ.
ಜಂತರ್ ಮಂತರ್ನಲ್ಲಿ ಪ್ರತಿಭಟನೆಯ ವರದಿಗಾರಿಕೆ ಮಾಡುತ್ತಿದ್ದಾಗ ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಯೂಟ್ಯೂಬರ್, ಸ್ವತಂತ್ರ ಪತ್ರಕರ್ತೆ ಆರೋಪಿಸಿ ದೂರು ನೀಡಿದ್ದರು. ಪತ್ರಕರ್ತೆಯ ದೂರಿನ ಮೇಲೆ ಎಫ್ಐಆರ್ ದಾಖಲಿಸದ ದೆಹಲಿ ಪೊಲೀಸರು, ಪ್ರತಿಯಾಗಿ ಆರೋಪಿತ ಪೊಲೀಸ್ ಅಧಿಕಾರಿಯ ದೂರಿನ ಆಧಾರದ ಮೇಲೆ ಯುವತಿ ಮತ್ತು ಮತ್ತೊಬ್ಬ ಯೂಟ್ಯೂಬರ್ ವಿರುದ್ಧ ಎಸ್ಸಿ/ಎಸ್ಟಿ ತಡೆ ಕಾಯ್ದೆಯಡಿ (ಜಾತಿನಿಂದನೆ ಆರೋಪ) ಪ್ರಕರಣ ದಾಖಲಿಸಿಕೊಂಡಿದ್ದರು.
ಇದನ್ನೂ ಓದಿ: ಮಂಗಳೂರು | ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಪ್ರಕರಣ ದಾಖಲು
ಪೊಲೀಸರು ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ತಮ್ಮ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ತಮಗೆ ರಕ್ಷಣೆ ಬೇಕು ಎಂದು ಕೋರಿ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರ ಮೂಲಕ ಪತ್ರಕರ್ತೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲೆ ಇಂದಿರಾ ಜೈಸಿಂಗ್, “ನನ್ನ ಕಕ್ಷಿದಾರರು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದು, ದೂರು ನೀಡಲು ಹೋದರೆ ಪೊಲೀಸರು ಎಫ್ಐಆರ್ ದಾಖಲಿಸಲಿಲ್ಲ. ಬದಲಿಗೆ ಪೊಲೀಸ್ ಅಧಿಕಾರಿಯೇ ಎಸ್ಸಿ/ಎಸ್ಟಿ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ಆಕೆಯ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ತಮ್ಮ ವಿರುದ್ಧ ತಾವೇ ತನಿಖೆ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ಪತ್ರಕರ್ತೆಯ ಬಂಧನಕ್ಕೆ ತಡೆ ನೀಡಬೇಕು” ಎಂದು ಕೋರ್ಟ್ನಲ್ಲಿ ವಾದಿಸಿದರು.
ಇನ್ನು ಕೇಂದ್ರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ಆರೋಪಗಳು ಗಂಭೀರವಾಗಿವೆ ಮತ್ತು ನಾವು ಇದಕ್ಕೆ ಸೂಕ್ತ ಉತ್ತರ ನೀಡುತ್ತೇವೆ. ಪ್ರತಿಭಟನಾ ಸ್ಥಳಗಳಲ್ಲಿ ಯಾರು ನೈಜ ಪತ್ರಕರ್ತರು, ಯಾರು ರೀಲ್ಸ್ ಮಾಡುವವರು ಎಂದು ತಿಳಿಯುವುದು ಕಷ್ಟ. ಆದರೂ ಯಾವುದೇ ಮಹಿಳೆಗೆ ಅನ್ಯಾಯವಾಗಬಾರದು. ಆದರೆ ಸಂಪೂರ್ಣ ತನಿಖೆಗೆ ತಡೆ ನೀಡುವುದು ಸರಿಯಲ್ಲ” ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಿದರು.
ನ್ಯಾಯಮೂರ್ತಿಗಳನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಅರ್ಜಿದಾರ ಯುವತಿಗೆ ತಕ್ಷಣದ ರಿಲೀಫ್ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಆದೇಶದವರೆಗೆ ಆಕೆಯ ವಿರುದ್ಧ ಯಾವುದೇ ಬಂಧನ ಅಥವಾ ಕಠಿಣ ಕ್ರಮ ಕೈಗೊಳ್ಳಬಾರದು ಎಂದು ಆದೇಶಿಸಿದೆ. ಅಲ್ಲದೆ, ದೆಹಲಿ ಪೊಲೀಸರಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಘಟನೆಯ ಕುರಿತು ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.




