ಸುಮಾರು 16 ವರ್ಷಗಳ ನಂತರ ಬಹು ನಿರೀಕ್ಷಿತ ಭಾರತದ 16ನೇ ಜನಗಣತಿಯೊಂದಿಗೆ ಜಾತಿ ಗಣತಿ ನಡೆಸಲು ಕೇಂದ್ರ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ.
2026ರ ಅಕ್ಟೋಬರ್ 1ರಿಂದ ಆರಂಭಿಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಜನಗಣತಿಯು ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲನೆಯ ಹಂತ 2026ರ ಅ. 1ರಿಂದ ನಡೆಯಲಿದ್ದು, 2ನೇ ಹಂತ, 2027ರ ಮಾ. 1ರಿಂದ ಆರಂಭಗೊಳ್ಳಲಿದೆ ಎಂದು ಕೇಂದ್ರ ಸರ್ಕಾರ ಜೂ. 16ರಂದು ಹೊರಡಿಸಿರುವ ಗೆಜೆಟ್ ನೋಟಿಫಿಕೇಷನ್ ನಲ್ಲಿ (ಕೇಂದ್ರ ಸರ್ಕಾರದ ಅಧಿಕೃತ ರಾಜ್ಯಪತ್ರ) ತಿಳಿಸಿದೆ.
ಮೊದಲ ಹಂತದಲ್ಲಿ ಲಡಾಖ್ ಕೇಂದ್ರಾಡಳಿತ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ಹಿಮದಿಂದ ಆವೃತವಲ್ಲದ ಸಿಂಕ್ರೊನಸ್ ಅಲ್ಲದ ಪ್ರದೇಶಗಳಲ್ಲಿ ಸರ್ವೇ ನಡೆಯಲಿದ್ದು, ಈ ಪ್ರದೇಶಗಳಿಗೆ ಸಂಬಂಧಿಸಿದಂತೆ, ಉಲ್ಲೇಖ ದಿನಾಂಕವು ಅಕ್ಟೋಬರ್ 1, 2026 ಎಂದು ಪ್ರಕಟಣೆ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಯುಪಿಎ ಸರ್ಕಾರ 2011ರಲ್ಲಿ ನಡೆಸಿದ ಜಾತಿ ಗಣತಿಯ ವಿವರಗಳು ಬಿಡುಗಡೆ ಆಗಲಿಲ್ಲವೇಕೆ?
ಸರ್ಕಾರದ ಪ್ರಕಾರ, ಈ ಬಾರಿ ಜನಗಣತಿಯು ದೊಡ್ಡ ಪ್ರಮಾಣದಲ್ಲಿ ನಡೆಯಲಿದೆ. ಇದಕ್ಕಾಗಿ ತರಬೇತಿ ಪಡೆದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಡಿಜಿಟಲ್ ತಂತ್ರಜ್ಞಾನವನ್ನು ಬಳಸುವುದರಿಂದ ದತ್ತಾಂಶ ಸಂಗ್ರಹಣೆ ಮತ್ತು ವಿಶ್ಲೇಷಣೆ ಸುಲಭವಾಗುತ್ತದೆ .ಸುಮಾರು 34 ಲಕ್ಷ ಗಣತಿದಾರರು ಮತ್ತು ಮೇಲ್ವಿಚಾರಕರು ಈ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ, ಡಿಜಿಟಲ್ ಸಾಧನಗಳನ್ನು ಹೊಂದಿರುವ 1.3 ಲಕ್ಷ ಜನಗಣತಿ ಕಾರ್ಯಕರ್ತರು ಕಾರ್ಯ ನಿರ್ವಹಿಸಲಿದ್ದಾರೆ.
ಕೇಂದ್ರ ಸರ್ಕಾರವು ಈ ಬಾರಿ ನಡೆಸಲಿರುವ 16ನೇ ಜನಗಣತಿಯ ಸಂದರ್ಭದಲ್ಲೇ ಜಾತಿ ಗಣತಿಯನ್ನು ಸೇರಿಸುವುದಾಗಿ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಮೇ 2ರಂದು ನಡೆದಿದ್ದ ಕೇಂದ್ರ ಸಂಪುಟ ಸಭೆಯಲ್ಲಿ ಈ ಕುರಿತಂತೆ ನಿರ್ಧಾರ ಕೈಗೊಳ್ಳಲಾಗಿದೆ.
