ಮೇಕೆ ಕಳ್ಳತನ ಮಾಡಿದ್ದಾರೆಂದು ಶಂಕಿಸಿ ಇಬ್ಬರು ದಲಿತ ಯುವಕರಿಗೆ ಚಪ್ಪಲಿ ಹಾಕಿ ಹಾಕಿ, ಅಮಾನುಷವಾಗಿ ಥಳಿಸಿರುವ ಘಟನೆ ಒಡಿಶಾದ ಜಗತ್ ಸಿಂಗ್ ಪುರ ಜಿಲ್ಲೆಯಲ್ಲಿ ನಡೆದಿದೆ.
ಜಗತ್ ಸಿಂಗ್ ಪುರ ಜಿಲ್ಲೆಯ ಬಿರಿಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿಮದಾಳ ಘಟನೆ ನಡೆದಿದ್ದು, ಘಟನೆಯ ವೀಡಿಯೊವನ್ನು ಒಡಿಶಾದ ಕಾಂಗ್ರೆಸ್ ನಾಯಕ ಅಮಿಯಾ ಪಾಂಡವ್ ಹಂಚಿಕೊಂಡಿದ್ದಾರೆ. ಜಾತಿ ದೌರ್ಜನ್ಯ ಮತ್ತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಯುವಕರು ಆಟೋದಲ್ಲಿ ಎರಡು ಮೇಕೆಗಳನ್ನು ಸಾಗಿಸುತ್ತಿದ್ದರು. ಅವರನ್ನು ಸಿಮದಾಳದ ಕೆಲವು ಗ್ರಾಮಸ್ಥರು ಹಿಂಬಾಲಿಸಿದ್ದು, ಯುವಕರನ್ನು ಹಿಡಿದು, ಚಪ್ಪಲಿ ಹಾರ ಹಾಕಿ, ಕೂದಲು ಕತ್ತರಿಸಿ, ಥಳಿಸಿದ್ದಾರೆ.
ಸಂತ್ರಸ್ತ ಯುವಕರಲ್ಲಿ ಓರ್ವನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. “ತನ್ನ ಮಗ ಮತ್ತು ಆತನ ಸ್ನೇಹಿತ ಸಿಮದಾಳ ಗ್ರಾಮದಿಂದ ಹಿಂದಿರುಗುತ್ತಿದ್ದಾಗ, ಕೆಲವರು ಅವರನ್ನು ಅಡ್ಡಗಟ್ಟಿದ್ದಾರೆ. ಹೆಸರು ಮತ್ತು ಊರಿನ ಬಗ್ಗೆ ವಿಚಾರಿದ್ದಾರೆ. ನನ್ನ ಮಗ ದಲಿತನೆಂದು ಗೊತ್ತಾದ ಬಳಿಕ ಜಾತಿ ನಿಂದನೆ ಮಾಡಿದ್ದಾರೆ. ಕಳ್ಳತನದ ಆರೋಪ ಮಾಡಿ ದೌರ್ಜನ್ಯ ಎಸಗಿದ್ದಾರೆ” ಎಂದು ಆರೋಪಿಸಿದ್ದಾರೆ.
ಅವರ ದೂರಿನ ಆಧಾರದ ಮೇಲೆ 7 ಮಂದಿ ಆರೋಪಿಗಳ ವಿರುದ್ಧ ಜಾತಿ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರ, ತನಿಖೆ ನಡೆಸುತ್ತಿದ್ದಾರೆ. ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ತಿಳಿದುಬಂದಿದೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಜಗತ್ ಸಿಂಗ್ ಪುರ ಪೊಲೀಸ್ ವರಿಷ್ಠಾಧಿಕಾರಿ ಭವಾನಿ ಶಂಕರ್, “ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಪತ್ತೆ ಹಚ್ಚಲು ಕ್ರಮವನ್ನು ಕೈಗೊಳ್ಳಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಹೇಳಿದ್ದಾರೆ.