ಬೆಕ್ಕಿನ ಹೆಸರಿನಲ್ಲಿ ವಸತಿ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಲಾಗಿರುವ ಘಟನೆ ಬಿಹಾರದ ರೋಹ್ತಾಸ್‌ನಲ್ಲಿ ನಡೆದಿದೆ. ಅರ್ಜಿದಾರರ ಹೆಸರು ಕ್ಯಾಟ್ ಕುಮಾರ್, ತಂದೆ ಕ್ಯಾಟಿ ಬಾಸ್ ಮತ್ತು ತಾಯಿ ಕ್ಯಾಟಿಯಾ ದೇವಿ ಎಂದು ಉಲ್ಲೇಖಿಸಲಾಗಿದೆ. ಈ ಸಂಬಂಧ ರೋಹ್ತಾಸ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಉದಿತಾ ಸಿಂಗ್ ಅವರು ನಸ್ರಿಗಂಜ್ ಪೊಲೀಸ್ ಠಾಣೆಯಲ್ಲಿ ಅಪರಿಚಿತರ ವಿರುದ್ದ ಪ್ರಕರಣ ದಾಖಲಿಸಲು ಕಂದಾಯ ಅಧಿಕಾರಿ ಕೌಶಲ್ ಪಟೇಲ್‌ಗೆ ಸೂಚಿಸಲಾಗಿದ್ದು ತನಿಖೆ ನಡೆಯುತ್ತಿದೆ.
ಒಂದೇ ವಾರದಲ್ಲಿ ಎರಡು ರೀತಿಯ ನಕಲಿ ಅರ್ಜಿಗಳು ಸಲ್ಲಿಕೆಯಾದ, ಕೆಲವೇ ವಾರಗಳ ನಂತರ ಕ್ಯಾಟ್ ಕುಮಾರ್ ಅರ್ಜಿ ಬಂದಿದೆ. ಈ ಹಿಂದೆ ಪಟನಾದಲ್ಲಿ ‘ಡಾಗ್ ಬಾಬು’ ಎಂಬ ಹೆಸರಲ್ಲಿ ಅರ್ಜಿ ಬಂದಿತ್ತು. ಚಂಪಾರನ್‌ನಲ್ಲಿ ‘ಸೋನಾಲಿಕಾ ಟ್ರ್ಯಾಕ್ಟರ್’ ಎಂಬ ಹೆಸರಿನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ನಕಲಿ ಅರ್ಜಿಗಳ ಬಗ್ಗೆ ತನಿಖೆ ನಡೆಯುತ್ತಿರುವ ನಡುವೆಯೇ ಇದೀಗ ಕ್ಯಾಟ್ ಕುಮಾರ್ ಹೆಸರಲ್ಲಿ ಅರ್ಜಿ ಸಲ್ಲಿಕೆಯಾಗಿದೆ.
ಇದನ್ನು ಓದಿದ್ದೀರಾ? SIR | ಬಿಹಾರದಲ್ಲಿ ಮತದಾರರ ಪಟ್ಟಿ ಕರಡು ಪ್ರಕಟಿಸಿದ ಚುನಾವಣಾ ಆಯೋಗ
ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದಡಿ ಸದ್ಯ ದೂರು ದಾಖಲಾಗಿದ್ದು, ಆರೋಪಿಗಳ ಬಂಧನವಾದ ಬಳಿಕ ಇತರೆ ಆರೋಪಗಳಡಿ ಪ್ರಕರಣ ದಾಖಲಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಬಿಹಾರ ಸಾರ್ವಜನಿಕ ಸೇವಾ ಹಕ್ಕು ಕಾಯ್ದೆಯಡಿಯಲ್ಲಿ ರಾಜ್ಯದ ನಿವಾಸಿಗಳು ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದೆ. ಸಲ್ಲಿಸಿದ ಪ್ರತಿಯೊಂದು ಅರ್ಜಿಯನ್ನು ಸಂಬಂಧಪಟ್ಟ ಅಧಿಕಾರಿಯು ಮೌಲ್ಯಮಾಪನ ಮಾಡುತ್ತಾರೆ.
ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಾರಂಭವಾದಾಗಿನಿಂದ, ವಸತಿ ಪ್ರಮಾಣಪತ್ರ ಕೋರಿ ಹಲವು ಅರ್ಜಿಗಳು ಸಲ್ಲಿಕೆಯಾಗಿದೆ. ಚುನಾವಣಾ ಆಯೋಗವು ಸ್ವೀಕರಿಸುವ 11 ದಾಖಲೆಗಳ ಪೈಕಿ ಇದೂ ಒಂದು ಆಗಿರುವುದು ಕಾರಣವಾಗಿರಬಹುದು ಎನ್ನಲಾಗಿದೆ.
