ಮೋದಿ ‘ಪಂಜರದ ಗಿಳಿ’ | ಸಿಬಿಐ ವಿರುದ್ಧ ಸುಪ್ರೀಂ ಚಾಟಿ ಬೀಸುತ್ತಿರುವುದೇಕೆ?

Date:

Advertisements
ಸ್ವಾಯತ್ತ ತನಿಖಾ ಸಂಸ್ಥೆಗಳು ಯಾವುದೇ ಹಗರಣ, ಪ್ರಕರಣಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯನ್ನೂ, ಸಂತ್ರಸ್ತರಿಗೆ ನ್ಯಾಯವನ್ನೂ ಖಾತ್ರಿ ಪಡಿಸಬೇಕು. ಆದರೆ, ಮೋದಿ ಅವಧಿಯಲ್ಲಿ ಎಲ್ಲದರಲ್ಲೂ ರಾಜಕೀಯ ಹಸ್ತಕ್ಷೇಪ. ಸಿಬಿಐ ಕುರಿತು ಸುಪ್ರೀಂ ಕೋರ್ಟ್ ಬಳಸಿರುವ 'ಪಂಜರದ ಗಿಳಿ' ರೂಪಕವೇ ಎಲ್ಲವನ್ನೂ ಹೇಳುತ್ತಿದೆ... 

ಕಳೆದ ಹತ್ತು ವರ್ಷಗಳಲ್ಲಿ ಎರಡನೇ ಬಾರಿಗೆ ಭಾರತದ ಪ್ರಧಾನ ಅಪರಾಧ ತನಿಖಾ ಸಂಸ್ಥೆ- ಸಿಬಿಐಯನ್ನು ‘ಪಂಜರದ ಗಿಳಿ’ ಎಂದು ಸುಪ್ರೀಂ ಕೋರ್ಟ್‌ ಕರೆದಿದೆ. ಸಿಬಿಐ ಕಾರ್ಯನಿರ್ವಹಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಬಂಧನದ ಅಧಿಕಾರವನ್ನು ಉದ್ದೇಶಿತ ಕಿರುಕುಳಕ್ಕೆ ಬಳಸಿಕೊಳ್ಳಬಾರದು ಎಂದು ಕಿಡಿಕಾರಿದೆ.

ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧ ಸಿಬಿಐ ದಾಖಲಿಸಿದ್ದ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಶುಕ್ರವಾರ (ಸೆ 13) ಸುಪ್ರೀಂ ಕೋರ್ಟ್‌ ಜಾಮೀನು ನೀಡಿದೆ. ಈ ವೇಳೆ, ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರು, “ಈ ಹಿಂದೆಯೇ, ನ್ಯಾಯಾಲಯವು ಸಿಬಿಐಯನ್ನು ‘ಪಂಜರದ ಗಿಳಿ’ಗೆ ಹೋಲಿಸಿದೆ. ಸಿಬಿಐ ಪಂಜರದ ಗಿಳಿ ಎಂಬ ಅಪವಾದದಿಂದ ಮುಕ್ತವಾಗುವುದು ಅನಿವಾರ್ಯವಾಗಿದೆ. ಅದು ಪಂಜರವಿಲ್ಲದ ಗಿಳಿಯಾಗಿರಬೇಕು. ತಾನು ಪಂಜರದ ಗಿಳಿ ಎಂಬಂತೆ ವರ್ತಿಸಬಾರದು” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ, 2013ರಲ್ಲಿ ಖಾಸಗಿ ಕಂಪನಿಗಳಿಗೆ ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ (ಕೋಲ್‌ ಗೇಟ್‌ ಪ್ರಕರಣ) ಬಗ್ಗೆ ಸಿಬಿಐ ತನಿಖೆ ನಡೆಸಿತ್ತು. ಆಗ, ಹಗರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಆರ್.ಎಂ ಲೋಧಾ ಅವರು ಸಿಬಿಐಯನ್ನು ‘ಪಂಜರದ ಗಿಳಿ’ ಎಂದು ಕರೆದಿದ್ದರು. ಅದನ್ನು ಉಲ್ಲೇಖಿಸಿ ನ್ಯಾಯಮೂರ್ತಿ ಭುಯಾನ್ ಅವರು ಸಿಬಿಐಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Advertisements

‘ಕೋಲ್‌ ಗೇಟ್‌ ಪ್ರಕರಣ’ವು ಅಂದಿನ ಕಾಂಗ್ರೆಸ್‌ ನೇತೃತ್ವದ ಯುಪಿಎ-2 ಆಡಳಿತದಲ್ಲಿ ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆಯಲ್ಲಿ ನಡೆದಿರುವ ಅಕ್ರಮಗಳ ಕುರಿತಾಗಿತ್ತು. ಮನಮೋಹನ್ ಸಿಂಗ್ ಸರ್ಕಾರದ ಎರಡನೇ ಅವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪಗಳಿಗೆ ಸಾಕ್ಷಿಯಾಗಿದ್ದ ರಾಜಕೀಯ ಹಗರಣದಲ್ಲಿ ಈ ಅಕ್ರಮವೂ ಒಂದಾಗಿತ್ತು.

2004 ಮತ್ತು 2009ರ ನಡುವೆ ಕಲ್ಲಿದ್ದಲು ನಿಕ್ಷೇಪಗಳ ಅಸಮರ್ಥ ಅಥವಾ ಪ್ರಾಯಶಃ ಅಕ್ರಮ ಹಂಚಿಕೆಗಳ ಕುರಿತು 2012ರಲ್ಲಿ ಕಂಟ್ರೋಲರ್ ಅಂಡ್‌ ಆಡಿಟರ್ ಜನರಲ್ ಆಫ್ ಇಂಡಿಯಾ ವರದಿ ನೀಡಿತ್ತು. ಸ್ಪರ್ಧಾತ್ಮಕ ಪ್ರಕ್ರಿಯೆ ಮತ್ತು ಬಿಡ್‌ಗಳನ್ನು ಕರೆಯದೇ ಕಲ್ಲಿದ್ದಲು ನಿಕ್ಷೇಪಗಳನ್ನು ಹಂಚಿಕೆ ಮಾಡಲಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟವಾಗಿದೆ ಎಂದು ವರದಿಯಲ್ಲಿ ಆರೋಪಿಸಲಾಗಿತ್ತು. ಆ ವರದಿ ಬಂದ ಬಳಿಕ, ಆಪಾದಿತ ಹಗರಣ ದೇಶದ ಗಮನ ಸೆಳೆದಿತ್ತು.

ಕಲ್ಲಿದ್ದಲು ಹಗರಣ

ಸಿಎಜಿ ವರದಿಯು ಆರಂಭದಲ್ಲಿ ಸರ್ಕಾರದ ಬೊಕ್ಕಸಕ್ಕೆ 10.7 ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಿತ್ತು. ಆದರೆ, ಅಂತಿಮ ವರದಿಯಲ್ಲಿ ನಷ್ಟದ ಮೊತ್ತವನ್ನು 1.86 ಕೋಟಿ ರೂ.ಗೆ ಇಳಿಸಿತ್ತು. ಈ ನಷ್ಟವಾದ ಮೊತ್ತದ ಗೊಂದಲದ ನಡುವೆ ಬಿಜೆಪಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಕೇಂದ್ರ ಜಾಗೃತ ಆಯೋಗ ವಹಿಸಿತು.

ಅದೇ ಸಮಯದಲ್ಲಿ, 2013ರಲ್ಲಿ ಸಂಸದೀಯ ಸ್ಥಾಯಿ ಸಮಿತಿ ಕೂಡ ವರದಿ ಸಿದ್ದಪಡಿಸಿತ್ತು. 1993ರಿಂದ 2008ರವರೆಗೆ (ಕಾಂಗ್ರೆಸ್‌, ಬಿಜೆಪಿ ಆಡಳಿತ) ನಡುವಿನ ಕಲ್ಲಿದ್ದಲು ನಿಕ್ಷೇಪಗಳನ್ನು ಅನಧಿಕೃತವಾಗಿ ಹಂಚಿಕೆ ಮಾಡಲಾಗಿದೆ. ಕಲ್ಲಿದ್ದಲು ಗಣಿಗಾರಿಕೆ ಇನ್ನೂ ಪ್ರಾರಂಭವಾಗದ ಎಲ್ಲ ಗಣಿಗಳ ಹಂಚಿಕೆಯನ್ನು ರದ್ದುಗೊಳಿಸಬೇಕು ಎಂದು ಹೇಳಿದೆ.

ಇದೆಲ್ಲದರ ನಡುವೆ, ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳ ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ವಿಶೇಷ ನ್ಯಾಯಾಲಯವನ್ನೂ ರಚಿಸಿತು. ಕಲ್ಲಿದ್ದಲು ಹಗರಣಗಳ ಬಗ್ಗೆ ನ್ಯಾಯಮೂರ್ತಿ ಆರ್.ಎಂ ಲೋಧಾ ನೇತೃತ್ವದ ತ್ರಿಸದಸ್ಯ ಪೀಠವು ವಿಚಾರಣೆ ನಡೆಸುತ್ತಿತ್ತು.

ಕಲ್ಲಿದ್ದಲು ಹಗರಣದ ಕುರಿತು ತನಿಖೆ ನಡೆಸಿದ್ದ ಸಿಬಿಐ, ತನ್ನ ಕರಡು ಸ್ಥಿತಿ ವರದಿಯನ್ನು 2013ರಲ್ಲಿಯೇ ಸಿದ್ದಪಡಿಸಿತ್ತು. ಮಾತ್ರವಲ್ಲದೆ, ಆ ವರದಿಯನ್ನು ರಾಜಕೀಯ ಕಾರ್ಯನಿರ್ವಾಹಕ ಅಧಿಕಾರಿ, ಕಲ್ಲಿದ್ದಲು ಸಚಿವಾಲಯ ಹಾಗೂ ಪ್ರಧಾನಮಂತ್ರಿ ಕಚೇರಿಯೊಂದಿಗೆ ಹಂಚಿಕೊಂಡಿತ್ತು. ಅದನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಮೂರ್ತಿ ಲೋಧಾ ಅವರು ಸಿಬಿಐ ವಿರುದ್ಧ ಕಿಡಿಕಾರಿದ್ದರು.

ವಿಚಾರಣೆ ವೇಳೆ, ಪೀಠದ ಎದುರು ಹಾಜರಾಗಿದ್ದ ಅಂದಿನ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ, ”ಆಗಿನ ಕಾನೂನು ಸಚಿವ ಅಶ್ವನಿ ಕುಮಾರ್ ಅವರು ಪ್ರಕರಣ ಕುರಿತು ಸಿಬಿಐ ಸಿದ್ದಪಡಿಸಿರುವ ಕರಡು ವರದಿಯಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿದ್ದಾರೆ. ಜೊತೆಗೆ, ಪ್ರಧಾನಿ ಕಚೇರಿ ಮತ್ತು ಕಾನೂನು ಅಧಿಕಾರಿಗಳು ಕೆಲವು ತಿದ್ದುಪಡಿಗಳನ್ನು ಸೂಚಿಸಿದ್ದಾರೆ” ಎಂದು ವಿವರಿಸಿದ್ದರು.

ಸಿಬಿಐ ಹೇಳಿಕೆಗೆ ಸಿಟ್ಟಾಗಿ ಪ್ರತಿಕ್ರಿಯಸಿದ್ದ ನ್ಯಾಯಮೂರ್ತಿ ಲೋಧಾ, “ಸಿಬಿಐ ತನಿಖೆಯಲ್ಲಿ ಸ್ಪಷ್ಟ ಹಸ್ತಕ್ಷೇಪ ಕಂಡುಬಂದಿದೆ. ಸಿಬಿಐ ತನ್ನ ಯಜಮಾನನ ಮಾತುಗಳನ್ನು ವ್ಯಕ್ತಪಡಿಸುವ ‘ಪಂಜರದ ಗಿಳಿ’ಯಾಗಿದೆ. ಸಿಬಿಐಗೆ ಅನಿಯಂತ್ರಿತ ಅಧಿಕಾರ ನೀಡುವುದು ಸಾಧ್ಯವಾಗದಿರುವುದು ದುರದೃಷ್ಟಕರ. ಸಿಬಿಐ ಪೊಲೀಸ್ ಫೋರ್ಸ್ ಆಗಿ ಮಾರ್ಪಟ್ಟಿದೆ. ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ” ಎಂದಿದ್ದರು. ಮಾತ್ರವಲ್ಲದೆ, ಅಟಾರ್ನಿ ಜನರಲ್ ಮತ್ತು ಸರ್ಕಾರದ ಉನ್ನತ ವಕೀಲರನ್ನು ಖಂಡನೀಯವಾಗಿ ನಿಂದಿಸಿದ್ದರು.

ಕೇಜ್ರಿವಾಲ್ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ, ನ್ಯಾಯಮೂರ್ತಿ ಲೋಧಾ ಅವರು ಸಿಬಿಐಯನ್ನು ನಿಂದಿಸಿದ್ದನ್ನು ಸ್ಮರಿಸಿದ ನ್ಯಾಯಮೂರ್ತಿ ಉಜ್ಜಲ್ ಭುಯಾನ್, ಸಿಬಿಐಯನ್ನು ಮತ್ತೆ ಪಂಜರದ ಗಿಳಿ ಎಂದು ಕರೆದಿದ್ದಾರೆ.

ಈ ವರದಿ ಓದಿದ್ದೀರಾ?: ಒಕ್ಕೂಟ ವ್ಯವಸ್ಥೆ ಉಳಿಯಲು ಸಾಮುದಾಯಿಕವಾಗಿ ಸೆಣಸುವ ಅಗತ್ಯವಿದೆ: ಡಾ ಜಿ ರಾಮಕೃಷ್ಣ

”ಇಡಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ಲಭಿಸಿರುವಾಗ ಅವರನ್ನು ಜೈಲಿನಲ್ಲಿಡುವುದು ನ್ಯಾಯದ ಅಪಹಾಸ್ಯವಾಗುತ್ತದೆ. ಇಡಿ ಪ್ರಕರಣದಲ್ಲಿ ನೀಡಲಾಗಿದ್ದ ಜಾಮೀನನ್ನು ವಿಫಲಗೊಳಿಸಲೆಂದೇ ಅರವಿಂದ್ ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸಿದೆ” ಎಂದು ಭುಯಾನ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಂದರೆ, ಕಳೆದ 10-12 ವರ್ಷಗಳಿಂದಲೇ ಸಿಬಿಐ ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಬಳಕೆಯಾಗುತ್ತಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿದ್ದವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂಬುದು ಸ್ಪಷ್ಟ. ಆದಾಗ್ಯೂ, ಕೇಂದ್ರದಲ್ಲಿ ಮೋದಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸಿಬಿಐ ತನ್ನ ಕಾರ್ಯನಿರ್ವಹಣೆಯನ್ನು ಮತ್ತಷ್ಟು ಬದಲಿಸಿಕೊಂಡಿದೆ. ಮೋದಿ ಸರ್ಕಾರ ಸಿಬಿಐಗೆ ಬಗ್ಗು ಎಂದು ಹೇಳಿದರೆ, ಸಿಬಿಐ ತೆವಳಲು ಆರಂಭಿಸಿದೆ ಎಂಬ ಆರೋಪಗಳು ಹಲವಾರು ವರ್ಷಗಳಿಂದ ಕೇಳಿಬರುತ್ತಿವೆ.

ವಿಪಕ್ಷಗಳನ್ನು ಬಗ್ಗು ಬಡಿಯಲು, ಪ್ರತಿಪಕ್ಷಗಳ ನಾಯಕರ ಬಾಯ್ಮುಚ್ಚಿಸಲು, ವಿರೋಧ ಪಕ್ಷಗಳ ಮುಖಂಡರು, ಶಾಸಕರು, ಸಂಸದರನ್ನು ಬಿಜೆಪಿಗೆ ಸೆಳೆದುಕೊಳ್ಳಲು ಅವರ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳನ್ನು ಮೋದಿ ಸರ್ಕಾರ ಎಗ್ಗಿಲ್ಲದೆ ಬಳಸಿಕೊಳ್ಳುತ್ತಿದೆ ಎಂಬುದು ಹಲವಾರು ಸಂದರ್ಭಗಳಲ್ಲಿ ಸಾಬೀತಾಗಿರುವ ಸಂಗತಿ.

ಈ ಹಿಂದೆ, ಸಿಬಿಐ ಮಾತ್ರವೇ ಕೇಂದ್ರ ಸರ್ಕಾರದ ಆಣತಿಯಂತೆ ಕೆಲಸ ಮಾಡುತ್ತದೆ ಎಂಬ ಆರೋಪಗಳಿದ್ದವು. ಈಗ ಅದು, ಜಾರಿ ನಿರ್ದೇಶನಾಲಯ (ಇಡಿ), ಎನ್‌ಐಎ ಕೂಡ ಕೇಂದ್ರ ಸರ್ಕಾರದ ಎದುರು ಮಂಡಿ ಊರಿವೆ ಎಂದು ಆರೋಪಿಸಲಾಗುತ್ತಿದೆ.

ಇದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಚಾಟಿ ಏಟಿಗೆ ಮತ್ತೆ ಸಿಬಿಐ ಸಿಲುಕಿಕೊಂಡಿದೆ. ಕೇಜ್ರಿವಾಲ್ ಅವರನ್ನು ರಾಜಕೀಯವಾಗಿ ಕುಗ್ಗಿಸಲು, ಅವರ ದನಿಯನ್ನು ಅಡಗಿಸಲು ಇಡಿ ಬಂಧನದಲ್ಲಿ ಜಾಮೀನು ಪಡೆಯುತ್ತಿದ್ದಂತೆಯೇ, ಅವರನ್ನು ಸಿಬಿಐ ಬಂಧಿಸಿ, ತಿಹಾರ್ ಜೈಲಿನಲ್ಲಿ ಉಳಿಯುವಂತೆ ಮಾಡಿತು. ಅಂತೂ, ಸಿಬಿಐ ದಾಖಲಿಸಿದ್ದ ಪ್ರಕರಣದಲ್ಲಿಯೂ ಜಾಮೀನು ಪಡೆದು ಕೇಜ್ರಿವಾಲ್ ಹೊರಬಂದಿದ್ದಾರೆ. ತಮ್ಮನ್ನು ಕುಗ್ಗಿಸಲು ವಿರೋಧ ಪಕ್ಷಗಳ ನಾಯಕರಿಗೆ, ತನಿಖಾ ಸಂಸ್ಥೆಗಳಿಗೆ ಹಾಗೂ ಜೈಲಿಗೆ ಸಾಧ್ಯವಿಲ್ಲ ಎಂದಿದ್ದಾರೆ.

ಏನೇ ಇರಲಿ, ತನಿಖಾ ಸಂಸ್ಥೆಗಳು ಯಾವುದೇ ಹಗರಣ, ಪ್ರಕರಣಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯನ್ನೂ, ಸಂತ್ರಸ್ತರಿಗೆ ನ್ಯಾಯವನ್ನೂ ಖಾತ್ರಿ ಪಡಿಸಬೇಕು. ಆದರೆ, ಈಗ ಎಲ್ಲೆಡೆ ರಾಜಕೀಯ ತಾಂಡವವಾಡುತ್ತಿದೆ. ನ್ಯಾಯ ಎಂಬುದು ದೇಶದ ಜನರಿಗೆ ದೂರದ ಬೆಟ್ಟದಂತೆ ಕಾಣುತ್ತಿದೆ. ಆದಾಗ್ಯೂ, ಹಲವು ಸಂದರ್ಭಗಳಲ್ಲಿ ಸುಪ್ರೀಂ ಕೋರ್ಟ್‌ ನೀಡುತ್ತಿರುವ ತೀರ್ಪುಗಳು ಮತ್ತು ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳು ನ್ಯಾಯಾಂಗದ ಮೇಲಿನ ಭರವಸೆಯನ್ನು ಭದ್ರಪಡಿಸುತ್ತಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X