ಸುಮಾರು 966 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ, ಎರಡನೇ ಅತಿ ದೊಡ್ಡ ಬಾಂಡ್ ಖರೀದಿದಾರ ಸಂಸ್ಥೆಯಾದ ಹೈದರಾಬಾದ್ ಮೂಲದ ಮೇಘಾ ಎಂಜಿನಿಯರಿಂಗ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ.
ಜಗದಲ್‌ಪುರ ಸಂಯೋಜಿತ ಸ್ಟೀಲ್ ಪ್ಲಾಂಟ್‌ಗೆ ಸಂಬಂಧಿಸಿದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮೇಘಾ ಇಂಜಿನಿಯರಿಂಗ್‌ನ 174 ಕೋಟಿ ರೂಪಾಯಿಗಳ ಬಿಲ್‌ಗಳನ್ನು ತೆರವುಗೊಳಿಸಲು ಸುಮಾರು 78 ಲಕ್ಷ ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಈ ಎಫ್‌ಐಆರ್ ದಾಖಲಿಸಲಾಗಿದ್ದು, ಎನ್‌ಐಎಸ್‌ಪಿ, ಎನ್‌ಎಂಡಿಸಿಯ ಎಂಟು ಅಧಿಕಾರಿಗಳು ಮತ್ತು ಎಂಇಸಿಒಎನ್‌ನ ಇಬ್ಬರು ಅಧಿಕಾರಿಗಳ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು.
ಇದನ್ನು ಓದಿದ್ದೀರಾ? ಚುನಾವಣಾ ಬಾಂಡ್ | ಮೇಘಾ, ರಿಲಯನ್ಸ್, ಬಿರ್ಲಾ- ಬಿಜೆಪಿಗೆ ಹೆಚ್ಚು ದೇಣಿಗೆ ಕೊಟ್ಟ ಕಂಪನಿಗಳ ಪಟ್ಟಿ ಇಲ್ಲಿದೆ
ಮಾರ್ಚ್ 21 ರಂದು ಚುನಾವಣಾ ಆಯೋಗ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ ಮೇಘಾ ಇಂಜಿನಿಯರಿಂಗ್ ಚುನಾವಣಾ ಬಾಂಡ್‌ಗಳ ಎರಡನೇ ಅತಿ ದೊಡ್ಡ ಖರೀದಿದಾರ ಸಂಸ್ಥೆಯಾಗಿದೆ. ಈ ಪೈಕಿ ಬಿಜೆಪಿಗೆ 586 ಕೋಟಿ ರೂಪಾಯಿ ದೇಣಿಗೆಯನ್ನು ನೀಡಿದೆ.
ಕಂಪನಿಯು ಬಿಆರ್‌ಎಸ್‌ಗೆ 195 ಕೋಟಿ ರೂಪಾಯಿ, ಡಿಎಂಕೆಗೆ 85 ಕೋಟಿ ರೂಪಾಯಿ, ವೈಎಸ್‌ಆರ್‌ಸಿಪಿಗೆ 37 ಕೋಟಿ ರೂಪಾಯಿ, ಟಿಡಿಪಿಗೆ 25 ಕೋಟಿ ರೂಪಾಯಿ, ಕಾಂಗ್ರೆಸ್‌ಗೆ 17 ಕೋಟಿ ರೂಪಾಯಿ, ಜೆಡಿ-ಎಸ್, ಜನಸೇನಾ, ಜೆಡಿಯು ಪಕ್ಷಗಳಿಗೆ 5 ಕೋಟಿಯಿಂದ 10 ಕೋಟಿ ರೂಪಾಯಿವರೆಗೆ ದೇಣಿಗೆಯನ್ನು ನೀಡಿದೆ.
ಶನಿವಾರ ಪ್ರಕಟವಾದ ಎಫ್‌ಐಆರ್‌ನ ಪ್ರಕಾರ, ಇಂಟೆಕ್‌ವೆಲ್, ಪಂಪ್‌ಹೌಸ್ ಮತ್ತು ಕ್ರಾಸ್ ಕಂಟ್ರಿ ಪೈಪ್‌ಲೈನ್ ಕಾಮಗಾರಿಗೆ ಸಂಬಂಧಿಸಿದ 315 ಕೋಟಿ ರೂಪಾಯಿಗಳ ಯೋಜನೆಯಲ್ಲಿ ಲಂಚದ ಆರೋಪದ ಬಗ್ಗೆ ಸಿಬಿಐ 2023 ಆಗಸ್ಟ್ 10 ರಂದು ಪ್ರಾಥಮಿಕ ವಿಚಾರಣೆಯನ್ನು ದಾಖಲಿಸಿದೆ. ಅದಾದ ಬಳಿಕ ಪ್ರಾಥಮಿಕ ವಿಚಾರಣೆ ನಂತರ ಪ್ರಕರಣ ದಾಖಲಿಸಲು ಶಿಫಾರಸು ಮಾಡಲಾಗಿದೆ.