ಕೇಂದ್ರ ಸರಕಾರವು ತನ್ನ ಒಂದು ಕೋಟಿಗೂ ಹೆಚ್ಚಿನ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಶೇ.3ರಷ್ಟು ಹೆಚ್ಚಿಸಿದೆ.
ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರವನ್ನು (ಡಿಆರ್) ಸರ್ಕಾರ ವರ್ಷಕ್ಕೆ ಎರಡು ಬಾರಿ ಹೆಚ್ಚಿಸುತ್ತದೆ. ಜನವರಿ ಮತ್ತು ಜುಲೈನಲ್ಲಿ ಹೆಚ್ಚಳವಾಗುತ್ತದೆ. ಬೆಲೆ ಏರಿಕೆಯ ಬಿಸಿ ತಾಕದಿರಲಿ ಎಂಬ ಕಾರಣಕ್ಕೆ ಸಂಬಳಕ್ಕೆ ಮತ್ತು ಪಿಂಚಣಿಗೆ ಹೆಚ್ಚುವರಿಯಾಗಿ ಡಿಎ ಮತ್ತು ಡಿಆರ್ ಅನ್ನು ನೀಡಲಾಗುತ್ತದೆ.
ಹಣದುಬ್ಬರ ದರಕ್ಕೆ ಅನುಗುಣವಾಗಿ ಈ ಏರಿಕೆ ಇರುತ್ತದೆ. ಈಗ ಮಾಡಲಿರುವ ಡಿಎ ಮತ್ತು ಡಿಆರ್ ಹೆಚ್ಚಳವು ಜುಲೈ 1ರಿಂದಲೇ ಅನ್ವಯ ಆಗುತ್ತದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪೊಲೀಸರಿಗೆ-ಸರ್ಕಾರಕ್ಕೆ ಸವಾಲಾಗಿರುವ ಸೈಬರ್ ಕ್ರೈಮ್
ಸದ್ಯ ಡಿಎ ಅಥವಾ ತುಟ್ಟಿಭತ್ಯೆಯು ಮೂಲವೇತನದ ಶೇ. 50ರಷ್ಟಿದೆ. ಈಗ ಹೆಚ್ಚಳವಾದರೆ ಡಿಎ ಶೇ. 53ಕ್ಕೆ ಏರಲಿದೆ. ಒಬ್ಬ ಸರ್ಕಾರಿ ಉದ್ಯೋಗಿಯ ಪೂರ್ಣ ಮಾಸಿಕ ವೇತನದಲ್ಲಿ ಮೂಲವೇತನವು 30,000 ರೂ ಇದ್ದಲ್ಲಿ ಈಗ 15,000 ರೂನಷ್ಟು ಡಿಎ ಅನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ. ಈಗ ಶೇ. 3ರಷ್ಟು ಡಿಎ ಹೆಚ್ಚಳವಾದರೆ 900 ರೂ ಸೇರ್ಪಡೆಯಾಗುತ್ತದೆ. ಅಂದರೆ 15,900 ರೂ.ನಷ್ಟು ಡಿಎ ಆಗುತ್ತದೆ.
ಕೆಲವು ವರ್ಷಗಳಿಂದಲೂ ಸರ್ಕಾರ ವರ್ಷಕ್ಕೆ ಎರಡು ಬಾರಿ ಶೇ. 4ರಷ್ಟು ಡಿಎ ಮತ್ತು ಡಿಆರ್ ಹೆಚ್ಚಳ ಮಾಡುತ್ತಾ ಬಂದಿದೆ. ಈ ಬಾರಿ ಶೇ. 3ರಷ್ಟು ಮಾತ್ರವೇ ಏರಿಕೆ ಆಗಲಿದೆ. ಜೂನ್ ಅಂತ್ಯಕ್ಕೆ ಮುಂಚಿನ 12 ತಿಂಗಳ ಸರಾಸರಿ ಹಣದುಬ್ಬರ ದರದ ಆಧಾರದ ಮೇಲೆ ಡಿಎ ಮತ್ತು ಡಿಆರ್ ಏರಿಕೆಯನ್ನು ನಿರ್ಧರಿಸಲಾಗಿದೆ.
