ಭೂಕುಸಿತಕ್ಕೊಳಗಾಗಿದ್ದ ವಯನಾಡಿನ ಚೂರಲ್ಮಲಾ ಮತ್ತು ಮುಂಡಕ್ಕೈ ಪ್ರದೇಶಗಳಲ್ಲಿ ಪುನರ್‌ನಿರ್ಮಾಣ ಕೆಲಸಗಳಿಗಾಗಿ 16 ಯೋಜನೆಗಳನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ. ಈ ಯೋಜನೆಗಳಿಗೆ 529.50 ಕೋಟಿ ರೂ. ವಿಶೇಷ ನೆರವು (ಸಾಲ) ಮಂಜೂರು ಮಾಡಿದೆ. 2024-25 ಹಣಕಾಸು ವರ್ಷಕ್ಕೆ ನಿಗದಿಪಡಿಸಿದ ಈ ಹಣವನ್ನು 2025ರ ಮಾರ್ಚ್ 31ರೊಳಗೆ ಬಳಸಿಕೊಳ್ಳಬೇಕೆಂದು ಸೂಚಿಸಿದೆ.
ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ಸಹಾಯ ಯೋಜನೆ (SASCI) ಅಡಿಯಲ್ಲಿ ಕೇಂದ್ರ ಸರ್ಕಾರವು ಕೇರಳ ಸರ್ಕಾರಕ್ಕೆ ಬಡ್ಡಿ ರಹಿತ ಸಾಲವನ್ನು ನೀಡಿದೆ.
ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಹಣಕಾಸು ಸಚಿವಾಲಯವು ಫೆಬ್ರವರಿ 11ರಂದು ಪತ್ರ ಬರೆದಿದ್ದು, “10 ಕೆಲಸದ ದಿನಗಳೊಳಗೆ ರಾಜ್ಯ ಸರ್ಕಾರಕ್ಕೆ ಹಣ ಬಿಡುಗಡೆ ಮಾಡಲಾಗುವುದು. ರಾಜ್ಯ ಸರ್ಕಾರವು ಸಲ್ಲಿಸಿರುವ ಪುನರ್ವಸತಿ, ಸಾರ್ವಜನಿಕ ಕಟ್ಟಡಗಳ ನಿರ್ಮಾಣ, ಪ್ರವೇಶ ರಸ್ತೆಗಳು ಮತ್ತು ಇತರ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಈ ಹಣವನ್ನು ಬಳಸಿಕೊಳ್ಳಬೇಕು” ಎಂದು ಸೂಚಿಸಿದ್ದಾರೆ.
“ಅನುಮೋದಿತ 16 ಯೋಜನೆಗಳ ಹೊರತಾಗಿ, ಬೇರೆ ಯಾವುದೇ ಉದ್ದೇಶಕ್ಕೆ ಹಣವನ್ನು ಬಳಸಿದರೆ, ಸಾಲದ ಮೊತ್ತದಲ್ಲಿ ಕಡಿತ ಮಾಡಲಾಗುತ್ತದೆ” ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಕೇರಳ ಸರ್ಕಾರವು ವಯನಾಡ್‌ನ ಪುನರ್ನಿರ್ಮಾಣಕ್ಕಾಗಿ 2,000 ಕೋಟಿ ರೂಪಾಯಿಗಳ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಕೇಳಿತ್ತು. ಕೇರಳದ ಮನವಿಯಲ್ಲಿ ಪರಿಶೀಲಿಸಿರುವ ಕೇಂದ್ರವು, ಇದೀಗ, 529.50 ಕೋಟಿ ರೂ. ಸಾಲ ಮಂಜೂರು ಮಾಡಿದೆ.
ಅನುಮೋದಿತ ಯೋಜನೆಗಳು ಮತ್ತು ಮಂಜೂರಾದ ಹಣ
- ನೆಡುಂಪಲ ಮತ್ತು ಎಲ್ಸ್ಟೋನ್ ಎಸ್ಟೇಟ್ ಪ್ರದೇಶದಲ್ಲಿ ಪುನರ್ವಸತಿ ಮತ್ತು ಸಾರ್ವಜನಿಕ ಕಟ್ಟಡಗಳ ನಿರ್ಮಾಣ- 111.32 ಕೋಟಿ ರೂ.
- ಹಳ್ಳಿಗಳಲ್ಲಿ ರಸ್ತೆ ಮತ್ತು ಇತರ ನಿರ್ಮಾಣ ಕೆಲಸಗಳು- 87.24 ಕೋಟಿ ರೂ.
- ಪುನ್ನಪ್ಪುಳ ನದಿಯ ಪುನಶ್ಚೇತನ- 65 ಕೋಟಿ ರೂ.
- ಅಗ್ನಿಶಾಮಕ ಮತ್ತು ರಕ್ಷಣಾ ಠಾಣೆ- 21 ಕೋಟಿ ರೂ.
- ಮುಟ್ಟಿಲ್-ಮೇಪ್ಪಾಡಿ ರಸ್ತೆ ನವೀಕರಣ- 60 ಕೋಟಿ ರೂ.
- ಚೂರಲ್ಮಲಾ ಸೇತುವೆ ನಿರ್ಮಾಣ- 38 ಕೋಟಿ ರೂ.
- ವೆಲ್ಲರ್ಮಲಾ ಮತ್ತು ಮುಂಡಕ್ಕೈನಲ್ಲಿ ಶಾಲೆಗಳ ಪುನರ್‌ನಿರ್ಮಾಣ- 12 ಕೋಟಿ ರೂ.
- ಆಸ್ಪತ್ರೆಗಳಲ್ಲಿ ಒಳರೋಗಿಗಳ ಕಟ್ಟಡ ನಿರ್ಮಾಣ- 15 ಕೋಟಿ ರೂ.
- ಎಲ್ಸ್ಟೋನ್ ಪ್ರದೇಶದಲ್ಲಿ 110 ಕೆವಿ ಸಬ್‌ಸ್ಟೇಷನ್ ನಿರ್ಮಾಣ- 13.50 ಕೋಟಿ ರೂ.
- ಕರಾಪುಳ ನೀರು ಶುದ್ಧೀಕರಣ ಘಟಕ- 22.50 ಕೋಟಿ ರೂ.
- ಅಪ್ರೋಚ್ ರಸ್ತೆಗಳು ಸೇರಿದಂತೆ ಆರು ಹೆಲಿಪ್ಯಾಡ್‌ಗಳ ನಿರ್ಮಾಣ- 9 ಕೋಟಿ ರೂ.
- ಕಲ್ಪೆಟ್ಟ ಸಿವಿಲ್ ಸ್ಟೇಷನ್‌ನಲ್ಲಿ ಡಿಡಿಎಂಎ ಕಾಂಪ್ಲೆಕ್ಸ್ ಮತ್ತು ಡಿ-ಬ್ಲಾಕ್ ನಿರ್ಮಾಣ- 30 ಕೋಟಿ ರೂ.
- ಬಹುಪಯೋಗಿ ವಸತಿ ಗೃಹಗಳ ನಿರ್ಮಾಣ- 28 ಕೋಟಿ ರೂ.
- ಚೂರಲ್‌ಮಲಾ-ಅಟ್ಟಮಾಲ ರಸ್ತೆ- 9 ಕೋಟಿ ರೂ.
- ಪುಂಚಿರಿಮಟ್ಟಂ–ವನರಾಣಿ ಸೇತುವೆ ಮತ್ತು ಅಪ್ರೋಚ್ ರಸ್ತೆ– 7 ಕೋಟಿ ರೂ.
- ಜಿಎಲ್‌ಪಿಎಸ್ ಎಂಟನೇ ನಂಬರ್ ಸೇತುವೆ ಮತ್ತು ಅಪ್ರೋಚ್ ರಸ್ತೆ- 7 ಕೋಟಿ ರೂ.