ಕೆಲವೇ ವಾರಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ಕೇಂದ್ರ ಸರ್ಕಾರವು ಚುನಾವಣಾ ಪ್ರಚಾರಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಮೋದಿ ಚಿತ್ರವಿರುವ ಆಹಾರ ಧಾನ್ಯ ಚೀಲಕ್ಕಾಗಿಯೇ ಕೇಂದ್ರ 15 ಕೋಟಿ ರೂ. ವೆಚ್ಚ ಮಾಡಿದೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (ಪಿಎಂಜಿಕೆಎವೈ) ಅಡಿಯಲ್ಲಿ ನೀಡಲಾಗುವ ಆಹಾರ ಧಾನ್ಯಗಳ ಚೀಲದಲ್ಲಿ ಪ್ರಧಾನಿ ಮೋದಿಯ ಚಿತ್ರ ಹಾಕಲೆಂದು ಕೇಂದ್ರ ಸರ್ಕಾರವು 15 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಅದು ಕೂಡಾ ಬರೀ ಐದು ರಾಜ್ಯಗಳಿಗಾಗಿ ಇಷ್ಟೊಂದು ಮೊತ್ತ ವ್ಯಯಿಸಲಾಗಿದೆ ಎಂದು ‘ದಿ ಹಿಂದೂ’ ವರದಿ ಮಾಡಿದೆ.

ಆರ್‌ಟಿಐ ಕಾರ್ಯಕರ್ತ ಅಜಯ್ ಬೋಸ್ ಅರ್ಜಿಗೆ ದೊರೆತ ಉತ್ತರದಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಆರ್‌ಟಿಐ ಮಾಹಿತಿ ಪ್ರಕಾರ, ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ (ಎಫ್‌ಸಿಐ) ರಾಜಸ್ಥಾನ, ಮಿಜೋರಾಂ, ಸಿಕ್ಕಿಂ, ತ್ರಿಪುರಾ, ಮೇಘಾಲಯದಲ್ಲಿ ಆಹಾರ ಧಾನ್ಯವನ್ನು ವಿತರಿಸಲು ‘ಪ್ರಧಾನಿ ಮೋದಿ ಚಿತ್ರವಿರುವ ಲೋಗೋ ಇರುವ ನೇಯ್ದ ಚೀಲಗಳನ್ನು’ ಖರೀದಿ ಮಾಡಲು ಟೆಂಡರ್ ಅಂತಿಮಗೊಳಿಸಿದೆ. ಪಶ್ಚಿಮ ಬಂಗಾಳ ರಾಜ್ಯಕ್ಕೆ ಟೆಂಡರ್ ಪ್ರಕ್ರಿಯೆ ಇನ್ನೂ ಅಂತಿಮಗೊಂಡಿಲ್ಲ.
ರಾಜ್ಯಸ್ಥಾನ ಎಫ್‌ಸಿಐ ಕಚೇರಿ ಮೋದಿ ಚಿತ್ರವಿರುವ 1.07 ಕೋಟಿ ಸಿಂಥೆಟಿಕ್ ಬ್ಯಾಗ್‌ಗಳಿಗೆ 13.29 ಕೋಟಿ ರೂಪಾಯಿ ವೆಚ್ಚ ಮಾಡಿದರೆ, ತ್ರಿಪುರಾ 5.98 ಲಕ್ಷ ಕೋಟಿ ಬ್ಯಾಗ್‌ಗಳಿಗೆ 85.51 ಲಕ್ಷ ರೂಪಾಯಿ ವ್ಯಯಿಸುತ್ತಿದೆ. ಇನ್ನು ಮೇಘಾಲಯದ ಎಫ್‌ಸಿಐ ಸ್ಥಳೀಯ ಕಚೇರಿ 4.22 ಲಕ್ಷ ಬ್ಯಾಗ್‌ಗಳಿಗೆ 52.75 ಲಕ್ಷ ರೂಪಾಯಿ ವೆಚ್ಚ ಮಾಡುತ್ತಿದೆ. 1.75 ಲಕ್ಷ ಬ್ಯಾಗ್‌ಗಳಿಗೆ ಮಿಜೋರಾಂ 25 ಲಕ್ಷ ರೂಪಾಯಿ ಖರ್ಚು ಮಾಡುತ್ತಿದೆ ಎಂದು ಆರ್‌ಟಿಐ ಮಾಹಿತಿಯಿಂದ ತಿಳಿದುಬಂದಿದೆ.
ಸಿಕ್ಕಿಂನಲ್ಲಿ ವಿತರಣೆಗೆ ಖಾಸಗಿ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದ್ದು ಈ ಪ್ರಕ್ರಿಯೆ ಇನ್ನೂ ಪೂರ್ಣವಾಗಿಲ್ಲ. ದಿ ಹಿಂದೂ ವರದಿಯ ಪ್ರಕಾರ ಈಶಾನ್ಯ ರಾಜ್ಯಗಳಲ್ಲಿ ಕೇಂದ್ರ ಸರ್ಕಾರವು 98,000 ಬ್ಯಾಗ್‌ಗಳನ್ನು ತಲಾ 14.65 ರೂಪಾಯಿಯಂತೆ ಉತ್ಪಾದಿಸುವ ಮಾತುಕತೆ ನಡೆಸುತ್ತಿದೆ.
ಪ್ರತಿ ರಾಜ್ಯದಲ್ಲಿ ಈ ಲೋಗೋ ಕೊಂಚ ಬದಲಾವಣೆ ಹೊಂದಿದೆ. ಮಿಜೋರಾಂನಲ್ಲಿ ಪ್ರತಿ ಬ್ಯಾಗ್ 14.65 ರೂಪಾಯಿ, ತ್ರಿಪುರಾದಲ್ಲಿ 14.30 ರೂಪಾಯಿ, ಮೇಘಾಲಯದಲ್ಲಿ 12.5 ರೂಪಾಯಿ, ರಾಜಸ್ಥಾನದಲ್ಲಿ 12.375 ರೂ. ಗೆ ಟೆಂಡರ್ ನೀಡಲಾಗಿದೆ.