ಜನವರಿ 26ರ ಗಣರಾಜ್ಯೋತ್ಸವ ದಿನದಂದು ನಡೆಯುವ ಮೆರವಣಿಗೆಯ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಕೇಂದ್ರ ಸರ್ಕಾರ ಬಿಜೆಪಿಯೇತರ ರಾಜ್ಯಗಳಿಗೆ ತಾರತಮ್ಯ ಮಾಡುತ್ತಿದೆ ಎಂದು ಎಎಪಿ ಆರೋಪಿಸಿದೆ.
ದೆಹಲಿ ಸರ್ಕಾರದ ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಮಾದರಿ ಸ್ತಬ್ಧಚಿತ್ರಗಳನ್ನು ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದಕ್ಕೆ ಕೇಂದ್ರ ಸರ್ಕಾರವು ಯಾವುದೇ ಕಾರಣ ನೀಡದೆ ನಿರಾಕರಿಸಿದೆ ಎನ್ನುವುದು ಎಎಪಿ ಆರೋಪವಾಗಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಎಪಿ ರಾಷ್ಟ್ರೀಯ ವಕ್ತಾರರಾದ ಪ್ರಿಯಾಂಕ ಕಕ್ಕರ್, ಕೇಂದ್ರದ ನಿರ್ಧಾರವು ರಾಜಕೀಯ ನಿರ್ಧಾರವಾಗಿದೆ. ದೆಹಲಿ ಸರ್ಕಾರವು ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಮಾದರಿಗಳನ್ನು ಪ್ರದರ್ಶಿಸಲು ಬಯಸಿತ್ತು. ಆದರೆ ಪಂಜಾಬ್ ಮತ್ತು ದೆಹಲಿ ಸರ್ಕಾರಗಳ ಸ್ತಬ್ಥಚಿತ್ರಗಳನ್ನು ಆಯ್ಕೆಯಿಂದ ಹೊರಗಿಡಲಾಗಿದೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ₹40 ಸಾವಿರ ಕೋಟಿ ಲೂಟಿ ಆರೋಪ; ಪ್ರಧಾನಿ ಮೋದಿ ಏನು ಹೇಳುತ್ತಾರೆ?
“ಬಿಜೆಪಿ ನೇತೃತ್ವದ ಸರ್ಕಾರಗಳಾದ ಅಸ್ಸಾಂ, ಗುಜರಾತ್ ಮತ್ತು ಉತ್ತರ ಪ್ರದೇಶದ ಸ್ತಬ್ಧಚಿತ್ರಗಳನ್ನು ಕಳೆದ 5 ವರ್ಷಗಳಿಂದ ಸತತವಾಗಿ ಪ್ರದರ್ಶಿಸಲು ಅನುಮತಿಸಲಾಗುತ್ತಿದೆ” ಎಂದು ಕಕ್ಕರ್ ಆಕ್ರೋಶ ವ್ಯಕ್ತಪಡಿಸಿದರು.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡ ಕೇಂದ್ರದ ರಾಜಕೀಯ ತಾರತಮ್ಯದ ಬಗ್ಗೆ ವಾಗ್ದಾಳಿ ನಡೆಸಿದರು. ಬಿಜೆಪಿ ಸರ್ಕಾರದ ಈ ನಿರ್ಧಾರವು ಪಂಜಾಬ್ ಪದವನ್ನು ರಾಷ್ಟ್ರಗೀತೆಯಿಂದ ತೆಗೆದು ಹಾಕುವ ನಡೆಯಾಗಿದೆ ಎಂದು ತಿಳಿಸಿದ್ದಾರೆ.