ಛತ್ತೀಸ್‌ಗಢದ ನಾರಾಯಣಪುರ-ಬಿಜಾಪುರ ಅಂತರ ಜಿಲ್ಲಾ ಗಡಿಯಲ್ಲಿರುವ ಅರಣ್ಯದಲ್ಲಿ ನಕ್ಸಲರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಕಾಳಗ ನಡೆದಿದ್ದು, ಈ ಕಾಳಗದಲ್ಲಿ ಏಳು ಮಂದಿ ನಕ್ಸಲರು ಹತ್ಯೆಯಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಳಗ್ಗೆ 11 ಗಂಟೆ ಹೊತ್ತಿಗೆ ಭದ್ರತಾ ಪಡೆಗಳ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸಿತು. ಈ ವೇಳೆ ಭದ್ರತಾ ಸಿಬ್ಬಂದಿ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆಯಿತು ಎಂದು ನಾರಾಯಣಪುರ ಪೊಲೀಸ್ ಅಧೀಕ್ಷಕ (ಎಸ್‌ಪಿ) ಪ್ರಭಾತ್ ಕುಮಾರ್ ತಿಳಿಸಿದ್ದಾರೆ.
ಈವರೆಗೆ ನಡೆದ ಗುಂಡಿನ ಚಕಮಕಿಯಲ್ಲಿ ಮಾವೋವಾದಿ ಸಮವಸ್ತ್ರದಲ್ಲಿದ್ದ ಏಳು ನಕ್ಸಲರು ಗುಂಡಿಗೆ ಬಲಿಯಾಗಿದ್ದಾರೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ. ದಾಂತೇವಾಡ, ನಾರಾಯಣಪುರ ಮತ್ತು ಬಸ್ತಾರ್ ಜಿಲ್ಲೆಗಳ ಜಿಲ್ಲಾ ಮೀಸಲು ಗಾರ್ಡ್‌ನ ಸದಸ್ಯರು, ಬಸ್ತಾರ್ ಫೈಟರ್ಸ್ ಮತ್ತು ವಿಶೇಷ ಕಾರ್ಯಪಡೆ, ರಾಜ್ಯ ಪೊಲೀಸ್‌ನ ಘಟಕ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.
ಎನ್‌ಕೌಂಟರ್ ಸ್ಥಳದಿಂದ ಒಟ್ಟು ಏಳು ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಈ ವರ್ಷ ಇಲ್ಲಿಯ ವರೆಗೆ ಭದ್ರತಾ ಪಡೆಗಳು ನಡೆಸಿದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಒಟ್ಟು 112 ನಕ್ಸಲರು ಹತ್ಯೆಯಾಗಿದ್ದಾರೆ.
ಇದನ್ನು ಓದಿದ್ದೀರಾ? ಅನಿಲ ಸೋರಿಕೆಯಿಂದ ಒಂದೇ ಕುಟುಂಬದ ನಾಲ್ವರ ಮೃತ್ಯು: ಮನೆಗೆ ಭೇಟಿ ನೀಡಿ ಪರಿಹಾರ ಘೋಷಿಸಿದ ಸಿಎಂ
ಏ.30 ರಂದು ಭದ್ರತಾ ಪಡೆಗಳು ನಾರಾಯಣಪುರ ಮತ್ತು ಕಂಕೇರ್ ಜಿಲ್ಲೆಗಳ ಗಡಿಯುದ್ದಕ್ಕೂ ನಡೆಸಿದ ಎನ್‌ಕೌಂಟರ್‌ಗೆ 10 ನಕ್ಸಲರು ಬಲಿಯಾಗಿದ್ದರು. ಅವರಲ್ಲಿ ಮೂವರು ಮಹಿಳೆಯರು ಸೇರಿದ್ದರು. ಏ.16ರಂದು 29 ನಕ್ಸಲರು ಹತರಾಗಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
