ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಮತಗಟ್ಟೆಯೊಂದರ ಬಳಿ ಶುಕ್ರವಾರ ನಡೆದ ಐಇಡಿ ಸ್ಫೋಟದಲ್ಲಿ 32 ವರ್ಷದ ಸಿಆರ್‌ಪಿಎಫ್ ಯೋಧ ಸಾವನ್ನಪ್ಪಿದ್ದಾರೆ. ಪ್ರತ್ಯೇಕ ಘಟನೆಯಲ್ಲಿ, ಬಿಜಾಪುರದಲ್ಲಿ, ಮತ್ತೊಬ್ಬ ಸಿಆರ್‌ಪಿಎಫ್ ಐಇಡಿ ಸ್ಫೋಟದಲ್ಲಿ ಗಾಯಗೊಂಡಿದ್ದಾರೆ.
ಶುಕ್ರವಾರ ಮತದಾನ ನಡೆದ ಮಾವೋವಾದಿ ಪೀಡಿತ ಬಸ್ತಾರ್ ಕ್ಷೇತ್ರದ ವ್ಯಾಪ್ತಿಯಲ್ಲಿ ಎರಡೂ ಘಟನೆಗಳು ನಡೆದಿವೆ.
ಬಿಜಾಪುರ ಜಿಲ್ಲೆಯಿಂದ ಸುಮಾರು 55 ಕಿಮೀ ದೂರದಲ್ಲಿರುವ ಗಲ್ಗಾಮ್ ಪ್ರದೇಶದಲ್ಲಿ ಮತದಾನ ನಡೆಯುತ್ತಿದ್ದ ಮತಗಟ್ಟೆಯಿಂದ ಸುಮಾರು 500 ಮೀಟರ್‌ಗಳ ದೂರದಲ್ಲಿ ಸಿಆರ್‌ಪಿಎಫ್ ಬೆಟಾಲಿಯನ್ 196 ರ ಕಾನ್‌ಸ್ಟೆಬಲ್ ದೇವೇಂದ್ರ ಕುಮಾರ್ (32) ಅವರು ಕಾರ್ಯನಿರ್ವಹಿಸುತ್ತಿದ್ದಾಗ ಮೊದಲ ಘಟನೆ ನಡೆದಿದೆ.
ಇದನ್ನು ಓದಿದ್ದೀರಾ? ಮೊದಲ ಹಂತದ ಮತದಾನ | ಪಶ್ಚಿಮ ಬಂಗಾಳ ಬಿಜೆಪಿ ನಾಯಕನ ಮನೆಯಲ್ಲಿ ಬಾಂಬ್ ಪತ್ತೆ, ಮಣಿಪುರದಲ್ಲೂ ಹಿಂಸಾಚಾರ
ಸ್ಫೋಟದ ನಂತರ, ಇದು ಆಕಸ್ಮಿಕ ಎಂದು ಅಧಿಕಾರಿಗಳು ಹೇಳಿದ್ದಾರೆ. ಗಂಭೀರವಾಗಿ ಗಾಯಗೊಂಡ ಕುಮಾರ್ ಅವರನ್ನು ಬಸ್ತಾರ್ ಜಿಲ್ಲೆಯ ಜಗದಲ್ಪುರ ನಗರಕ್ಕೆ ಕರೆದೊಯ್ಯಲಾಗಿದ್ದು ಜಗದಲ್ಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಲ್ಲಿ ಅವರು ಮೃತರಾಗಿದ್ದಾರೆ.
ದೇವೇಂದ್ರ ಕುಮಾರ್ ಅವರು ಬಸ್ತಾರ್‌ನ ಧೋಬಿಗುಡಾ ನಿವಾಸಿಯಾಗಿದ್ದು, ಅವರ ತಾಯಿಯನ್ನು ಅಗಲಿದ್ದಾರೆ. ದೇವೇಂದ್ರ ಕುಮಾರ್ ಅವಿವಾಹಿತರಾಗಿದ್ದರು. ರಾಜ್ಯ ಸರಕಾರ ಕುಮಾರ್ ಕುಟುಂಬಕ್ಕೆ 30 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
ಸ್ಫೋಟ ಸಂಭವಿಸಿದ ಪ್ರದೇಶವು ಸರಿಯಾದ ರಸ್ತೆ ಸಂಪರ್ಕವನ್ನು ಹೊಂದಿಲ್ಲ. ಆದ್ದರಿಂದ ವಾಯುಪಡೆಯ ವಿಮಾನದಲ್ಲಿ ದೇವೇಂದ್ರ ಕುಮಾರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ| ಅರುಣಾಚಲ ಬಿಜೆಪಿ ನಾಯಕನನ್ನು ಅಪಹರಿಸಿದ ಬಂಡುಕೋರರು!
ಬಿಜಾಪುರದ ಚಿಹಾಕಾ ಪ್ರದೇಶದ ಮನ್ನು ಎಂಬಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ, ಐಇಡಿ ಸ್ಫೋಟಗೊಂಡಾಗ ಸಿಆರ್‌ಪಿಎಫ್ ಸಹಾಯಕ ಕಮಾಂಡೆಂಟ್ ಗಂಭೀರ ಗಾಯಗೊಂಡಿದ್ದಾರೆ. ಅವರೊಂದಿಗಿದ್ದ ಇತರ ಯೋಧರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಬಸ್ತಾರ್ ಲೋಕಸಭಾ ಕ್ಷೇತ್ರಕ್ಕೆ ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದು ಸಂಜೆ 5 ಗಂಟೆಗೆ ಬಸ್ತಾರ್‌ನಲ್ಲಿ 63.41% ಮತದಾನವಾಗಿದೆ. ಛತ್ತೀಸ್‌ಗಢದ ಇತರ 10 ಕ್ಷೇತ್ರಗಳಿಗೆ ಮುಂದಿನ ಎರಡು ಹಂತಗಳಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಚುನಾವಣೆ ನಡೆಯಲಿದೆ.