ಛತ್ತೀಸ್‌ಗಢದ ಸಾರಂಗಢ-ಬಿಲೈಗಢ ಜಿಲ್ಲೆಯಲ್ಲಿ ಯುವತಿಯೊಬ್ಬಳು ತನ್ನ ಮದುವೆಯ ಪ್ರಸ್ತಾಪವನ್ನು ನಿರಾಕರಿಸಿದ ಕಾರಣಕ್ಕೆ 30 ವರ್ಷದ ವ್ಯಕ್ತಿಯೊಬ್ಬ ಯುವತಿಯ ಕುಟುಂಬದ ಐದು ವರ್ಷದ ಬಾಲಕ ಸೇರಿದಂತೆ ಐವರನ್ನು ಕೊಂದು ತಾನೂ ಕೂಡಾ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಥರಗಾಂವ್ ಗ್ರಾಮದಲ್ಲಿ ನಡೆದಿದೆ.
ಆರೋಪಿಯನ್ನು ಮನೋಜ್ ಸಾಹು ಎಂದು ಗುರುತಿಸಲಾಗಿದೆ. ಹೇಮಲಾಲ್ ಸಾಹು (55), ಅವರ ಪತ್ನಿ ಜಗಮೋತಿ ಸಾಹು (50), ಅವರ ಪುತ್ರಿಯರಾದ ಮೀರಾ ಸಾಹು (30) ಮತ್ತು ಮಮತಾ ಸಾಹು (35) ಮತ್ತು ಮೀರಾ ಅವರ ಮಗ ಆಯುಷ್‌ನನ್ನು (5) ಮನೋಜ್ ಸಾಹು ಕೊಲೆ ಮಾಡಿದ್ದಾನೆ.
ಇದನ್ನು ಓದಿದ್ದೀರಾ? ಬೆಂಗಳೂರು | ಹೆಣ್ಣು ಮಕ್ಕಳಿಬ್ಬರನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ದಂಪತಿ
ಟೈಲರ್ ಆಗಿದ್ದ ಮನೋಜ್ ರಾತ್ರಿ ವೇಳೆ ಮೀರಾ ಸಾಹು ಮನೆಯ ಗೋಡೆಯನ್ನು ಹಾರಿ ಬಂದಿದ್ದಾನೆ. ಒಳಗೆ ಬಂದವನು ಮೊದಲು ಹಾಲ್‌ನಲ್ಲಿ ಮಲಗಿದ್ದ ಹೇಮಲಾಲ್, ಜಗಮೋತಿ ಅವರನ್ನು ಕೊಂದಿದ್ದಾನೆ. ಬಳಿಕ ಕೋಣೆಯಲ್ಲಿ ಮಲಗಿದ್ದ ಮಮತಾ ಮತ್ತು ಆಕೆಯ ಮಗ ಆಯುಷ್, ಮೀರಾ ಅವರನ್ನು ಕೊಂದಿದ್ದಾನೆ ಎನ್ನಲಾಗಿದೆ. ಅದಾದ ನಂತರ ಮತ್ತೊಂದು ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದಾನೆ.
ಶನಿವಾರ ಬೆಳಿಗ್ಗೆ ಸಂಬಂಧಿಕರು ಮೀರಾ ಕುಟುಂಬಕ್ಕೆ ಕರೆ ಮಾಡಿದ್ದು ಯಾರೂ ಕೂಡಾ ಉತ್ತರಿಸದೆ ಇದ್ದಾಗ ಸಂಬಂಧಿಕರು ನೆರೆ ಮನೆಯವರಿಗೆ ಕರೆ ಮಾಡಿದ್ದಾರೆ. ನೆರೆ ಮನೆಯವರು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಇದನ್ನು ಓದಿದ್ದೀರಾ? ಮಂಡ್ಯ | ಕೌಟುಂಬಿಕ ಕಲಹದಿಂದ ಮಹಿಳೆ ಆತ್ಮಹತ್ಯೆ; ಪತಿಯ ವಿರುದ್ಧ ಕೊಲೆ ಆರೋಪ
ಇದಕ್ಕೂ ಮೊದಲು, ಮೀರಾ ತನ್ನ ಮದುವೆ ಪ್ರಸ್ತಾಪವನ್ನು ನಿರಾಕರಿಸಿದ್ದರಿಂದ, ಕೋಪಗೊಂಡ ಮನೋಜ್, ಮೀರಾ ಮತ್ತು ಅವಳ ಸಹೋದರಿಯ ಮೇಲೆ ಹಲ್ಲೆ ನಡೆಸಿದ್ದನು ಎಂದು ವರದಿಯಾಗಿದೆ.
“2017ರಲ್ಲಿ, ಮೀರಾ ಮನೋಜ್ ವಿರುದ್ಧ ಅತಿಕ್ರಮಣ ಮತ್ತು ಹಲ್ಲೆ ದೂರು ದಾಖಲಿಸಿದ್ದಾರೆ, ಎಫ್ಐಆರ್ ದಾಖಲಿಸಲಾಗಿದೆ. ಪ್ರಕರಣದ ವಿಚಾರಣೆ ನಡೆಯುತ್ತಿದೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ಪುಷ್ಕರ್ ಶರ್ಮಾ ತಿಳಿಸಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.