ಚಲಿಸುತ್ತಿದ್ದ ಬಸ್‌ನಲ್ಲಿಯೇ ಗರ್ಭಿಣಿಯೊಬ್ಬರಿಗೆ ಹೆರಿಯಾಗಿದ್ದು, ಮಗು ಜನಿಸಿದ ಕೂಡಲೇ ಮಗುವನ್ನು ತಾಯಿ ಮತ್ತು ಆಕೆಯ ಪತಿ ಕಿಟಕಿಯಿಂದ ಹೊರಗೆಸೆದಿರುವ ಹೃದಯವಿದ್ರಾವಕ, ಅಮಾನವೀಯ ಘಟನೆ ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯಲ್ಲಿ ನಡೆದಿದೆ.
ಪರ್ಭಾನಿ ಜಿಲ್ಲೆಯಲ್ಲಿ ಪತ್ರಿ-ಸೇಲು ರಸ್ತೆಯಲ್ಲಿ ಘಟನೆ ನಡೆದಿದೆ. ಆರೋಪಿ ತಂದೆ-ತಾಯಿಯನ್ನು ಅಲ್ತಾಫ್ ಶೇಖ್ ಮತ್ತು ರಿತಿಕಾ ಧೇರೆ ಎಂದು ಹೆಸರಿಸಲಾಗಿದ್ದು, ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಂಪತಿಗಳು ಸ್ಲೀಪರ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ, ಗರ್ಭಿಣಿ ರಿತಿಕಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಬಸ್‌ನಲ್ಲಿಯೇ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ, ಮಗು ಜನಿಸಿದ ಕೂಡಲೇ ಮಗುವನ್ನು ಬಟ್ಟೆಯಲ್ಲಿ ಸುತ್ತಿ, ಕಿಟಕಿಯಿಂದ ಹೊರಗೆಸಿದ್ದಾರೆ ಎಂದು ವರದಿಯಾಗಿದೆ.
ಬಸ್‌ನ ಕಿಟಕಿಯಿಂದ ಬಟ್ಟೆಯಲ್ಲಿ ಸುತ್ತಿದ್ದ ರೀತಿಯಲ್ಲಿ ಹೊರಬಿದ್ದುದ್ದನ್ನು ಗಮನಿಸಿದ ಬಸ್ ಸಿಬ್ಬಂದಿ, ದಂಪತಿಗಳನ್ನು ಪ್ರಶ್ನಿಸಿದ್ದಾರೆ. ಆದರೆ, ಪತ್ನಿ ವಾಂತಿ ಮಾಡಿಕೊಂಡರು. ವಾಂತಿಯ ಕವರ್‌ಅನ್ನು ಎಸೆದಿದ್ದಾಗಿ ಅಲ್ತಾಫ್ ಹೇಳಿದ್ದಾರೆ. ಆದಾಗ್ಯೂ, ರಸ್ತೆ ಬದಿಯಲ್ಲಿ ಬಟ್ಟೆಯಲ್ಲಿ ಸುತ್ತಿದ ರೀತಿಯಲ್ಲಿ ಬಿದ್ದಿದ್ದ ಶಿಶುವನ್ನು ದಾರಿಹೋಕರು ಗಮನಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಲೇಖನ ಓದಿದ್ದೀರಾ?: ಶಿಕ್ಷಣ ಸ್ಪೆಷಲ್ | ಸಮಾನ ಶಿಕ್ಷಣ, ಭಾಷಾ ನೀತಿ ಮತ್ತು ಪ್ರಭುತ್ವದ ಮುಸುಕಿನ ಆಟ
ಗಸ್ತು ತಿರುಗುತ್ತಿದ್ದ ಪೊಲೀಸರು ಬಸ್‌ಅನ್ನು ಅಡ್ಡಗಟ್ಟಿ, ವಿಚಾರಣೆ ನಡೆಸಿದ್ದಾರೆ. ಈ ವೇಳೆ, ಮಗುವನ್ನು ಬೆಳೆಸಲು ತಮ್ಮ ಆರ್ಥಿಕ ಪರಿಸ್ಥಿತಿ ಕಷ್ಟಕರವಾಗಿದೆ ಎಂಬ ಕಾರಣಕ್ಕಾಗಿ ತಾವೇ ಮಗುವನ್ನು ಎಸೆದಿದ್ದಾಗಿ ದಂಪತಿಗಳು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ದಂಪತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದಂಪತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 94(3), 94(5) ಅಡಿಯಲ್ಲಿ ಪತ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ.