ಸಾಮಾನ್ಯವಾಗಿ ಪ್ರತಿಭಟನೆಗಳು ಅಥವಾ ಪ್ರತಿರೋಧಗಳು ಯುವಜನರಲ್ಲಿ ಆತ್ಮವಿಶ್ವಾಸ, ಸಾಮಾಜಿಕ ಜಾಗೃತಿ ಮತ್ತು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುವ ಧೈರ್ಯವನ್ನು ಹೆಚ್ಚಿಸುತ್ತವೆ. ಅದಕ್ಕೆ ಬಹಳ ದೊಡ್ಡ ಉದಾಹರಣೆ, ಸೋಮವಾರ ದೆಹಲಿಯಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟ.
ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ವಿರುದ್ಧ ಹಾಗೂ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟ, ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಏಕೆಂದರೆ ಈ ಹೋರಾಟ ಸತ್ಯ ಮತ್ತು ನ್ಯಾಯ ಬೇಡುತ್ತಿದೆ. ಪ್ರಶ್ನೆಗಳನ್ನು ಎತ್ತುತ್ತಿದೆ. ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಕೇಳುವುದು ಅಪರಾಧವಲ್ಲ. ಪ್ರಭುತ್ವ ಪ್ರಶ್ನಾತೀತವಲ್ಲ.
ಬರೀ ವಿದ್ಯಾರ್ಥಿಗಳೇ ಪಾಲ್ಗೊಂಡಿದ್ದ ಪ್ರತಿಭಟನೆಗೆ ಬರಹಗಾರರು, ಸಾಹಿತಿಗಳು, ಚಿಂತಕರು, ಕಲಾವಿದರು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಬೆಂಬಲಿಸಿದ್ದು, ಆನೆ ಬಲ ಬಂದಂತಾಗಿದೆ. ವಯಸ್ಸಾಗಿ ಸಾರ್ವಜನಿಕ ಹೋರಾಟದಲ್ಲಿ ಭಾಗಿಯಾಗುವುದು ಕಷ್ಟವಿದ್ದರೂ ಲೆಕ್ಕಿಸದೆ ನಟ ನಾಸಿರುದ್ದೀನ್ ಶಾ ಮತ್ತು ಶಬನಾ ಆಜ್ಮಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಹೋರಾಟಕ್ಕೊಂದು ತಾತ್ವಿಕ ನೆಲೆ ಒದಗಿಸಿದೆ. ಚಂದ್ರಶೇಖರ್ ಅಜಾದ್, ಪ್ರಕಾಶ್ ರಾಜ್, ಕಮ್ಯುನಿಸ್ಟ್ ಪಕ್ಷ, ಆಮ್ ಆದ್ಮಿ ಪಕ್ಷದ ನಾಯಕರು ವಿದ್ಯಾರ್ಥಿಗಳೊಂದಿಗೆ ಕೈ ಜೋಡಿಸಿದ್ದು, ಪ್ರತಿಭಟನೆಗೊಂದು ಹೊಸ ಆಯಾಯ ದೊರಕಿದೆ. ಇದನ್ನೆಲ್ಲ ನೋಡಿದ, ಧರ್ಮದ ಅಮಲಿನಲ್ಲಿ ತೇಲುತ್ತಿದ್ದ ದೇಶದ ಜನ, ಈಗ ಎಚ್ಚೆತ್ತಿದ್ದಾರೆ. ತಮ್ಮ ಮಕ್ಕಳ ಭವಿಷ್ಯ ಬರಿದು ಮಾಡುತ್ತಿರುವ ಕೇಂದ್ರ ಸರ್ಕಾರದ ಶಿಕ್ಷಣ ನೀತಿ ವಿರುದ್ಧ ಮಾತನಾಡುತ್ತಿದ್ದಾರೆ.
ಇದಕ್ಕಿಂತ ದೊಡ್ಡ ಜಯ ಇನ್ನೊಂದಿದೆಯೇ?
ಕಳೆದ ಒಂದು ತಿಂಗಳಿನಿಂದ ಕಾಕ್ರೋಚ್ ಪಾರ್ಟಿ ನೇತೃತ್ವದಲ್ಲಿ ನಡೆಯುತ್ತಿದ್ದ ವಿದ್ಯಾರ್ಥಿಗಳ ಹೋರಾಟಕ್ಕೆ ಶಿಕ್ಷಣ ತಜ್ಞ, ಪರಿಸರ ಚಿಂತಕ ಸೋನಂ ವಾಂಗ್ಚುಕ್ ಬೆಂಬಲ ನೀಡಿ, ಉಪವಾಸ ಸತ್ಯಾಗ್ರಹ ಕೈಗೊಂಡರು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಯುವಜನರು ಸೋಮವಾರ ಸಂಸತ್ ಪ್ರವೇಶಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡರು.
ವಿದ್ಯಾರ್ಥಿಗಳ ಈ ಪ್ರತಿಭಟನೆಯನ್ನು ಬಹಳ ಲಘುವಾಗಿ ಪರಿಗಣಿಸಿದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ, ಮೊದಲಿಗೆ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ನಿರ್ಲಕ್ಷಿಸಿತು. ಆನಂತರ, ಉಪವಾಸನಿರತ ಸೋನಂ ವಾಂಗ್ಚುಕ್ ರನ್ನು ಬಲವಂತವಾಗಿ ಹೊತ್ತೊಯ್ದ, ಆಸ್ಪತ್ರೆಗೆ ದಾಖಲಿಸಿತು. ವಿದ್ಯಾರ್ಥಿಗಳ ಸಂಸತ್ ಪ್ರವೇಶಕ್ಕೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ, ಪ್ರತಿಭಟನೆಯನ್ನು ಹತ್ತಿಕ್ಕಲು ಹವಣಿಸಿತು.
ಈ ಲೇಖನ ಓದಿದ್ದೀರಾ?: ಬಿಜೆಪಿಗೆ ಬಿಸಿತುಪ್ಪವಾದ ಪರೀಕ್ಷಾ ಹಗರಣ, ವಾಂಗ್ಚುಕ್, ರಾಮಮಂದಿರ, ಎಥೆನಾಲ್!
ವಿದ್ಯಾರ್ಥಿಗಳ ಪ್ರತಿರೋಧವನ್ನು ಆಳುವ ಸರ್ಕಾರ ನಿರ್ಲಕ್ಷಿಸಿದಂತೆಲ್ಲ ಅದು ಬೆಟ್ಟದಂತೆ ಬೆಳೆಯತೊಡಗಿತು. ದಶದಿಕ್ಕುಗಳಿಂದ ಯುವಸಮೂಹ ಸಂಸತ್ ನತ್ತ ಹರಿಯತೊಡಗಿತು. ಇತ್ತೀಚಿನ ದಿನಗಳಲ್ಲಿ ಕಾಣದಿದ್ದ ಇಂತಹ ಜನಸಾಗರದಿಂದ ಬೆಚ್ಚಿಬಿದ್ದ ಪ್ರಧಾನಿ ನರೇಂದ್ರ ಮೋದಿ, ಸಂಸತ್ ಕಲಾಪವನ್ನು ಮೊಟಕುಗೊಳಿಸಿದರು. ಪ್ರತಿಪಕ್ಷಗಳ ಪ್ರಶ್ನೆಗೆ ಉತ್ತರಿಸಲಾಗದೆ ಸಂಸತ್ತಿನಿಂದ ನಿರ್ಗಮಿಸಿದರು. ಇತ್ತ ಸಂಸತ್ ಪ್ರವೇಶಿಸಲು ಯತ್ನಿಸಿದ ಶಾಂತಿಯುತ ಮೆರವಣಿಗೆಯ ಮೇಲೆ ಮೋದಿಯವರ ಪೊಲೀಸ್ ಸಿಬ್ಬಂದಿ ಕ್ರೌರ್ಯ ಮೆರೆಯಿತು. ತಮ್ಮದೇ ಮಕ್ಕಳ ವಯಸ್ಸಿನ ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸಿ, ಭಯ ಬಿತ್ತಿ ಓಡಿಸಲು ನೋಡಿತು.
ಅಷ್ಟಕ್ಕೂ ಪ್ರಧಾನಿ ಮೋದಿಯವರನ್ನು ಮಕ್ಕಳು ಕೇಳಿದ್ದೇನು? ನೀಟ್ ಪ್ರಶ್ನೆ ಪತ್ರಿಕೆ ಬಹಿರಂಗವಾಗಿ ನಮ್ಮ ಭವಿಷ್ಯ ಬರಿದಾಗಿದೆ. ಹದಿನೇಳಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಆಘಾತಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಕ್ಷಣ ವ್ಯವಸ್ಥೆ ಭ್ರಷ್ಟಗೊಂಡಿದೆ, ಹದಗೆಟ್ಟಿದೆ. ಅದರ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಬೇಕು. ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಬೇಕು. ನಮ್ಮ ಭವಿಷ್ಯವನ್ನು ಉತ್ತಮಗೊಳಿಸಬೇಕು ಎಂದು.
ವಿದ್ಯಾರ್ಥಿಗಳು ಪ್ರಶ್ನಿಸಿದ್ದು ಅಪರಾಧವೇ? ಅವರ ಶಾಂತಿಯುತ ಸಂಸತ್ ಚಲೋ ಮೇಲೆ ಪೊಲೀಸರನ್ನು ಛೂ ಬಿಟ್ಟು, ತಪ್ಪು ಮಾಡದ ವಿದ್ಯಾರ್ಥಿಗಳ ಮೇಲೆ ಲಾಠಿ ಏಟು, ಟಿಯರ್ ಗ್ಯಾಸ್ ಪ್ರಯೋಗಿಸಿದ್ದು ನ್ಯಾಯವೇ? ಸಂಸತ್ ಚಲೋ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳು ನಿರಾಯುಧರಾಗಿದ್ದರು. ಅಕ್ರಮದ ವಿರುದ್ಧ ಸ್ಲೋಗನ್ ಕೂಗುತ್ತಿದ್ದರು. ಪ್ರಧಾನಿ ಮೌನವಾಗಿರುವುದನ್ನು ಪ್ರಶ್ನಿಸುತ್ತಿದ್ದರು. ಅಂತಹ ಅಮಾಯಕರಿಗೆ ಲಾಠಿಯಿಂದ ರಕ್ತ ಸುರಿಯುವಂತೆ ಹೊಡೆದರೆ, ಅಕ್ರಮ ನಡೆದಿಲ್ಲ ಎಂದಾಗುತ್ತದೆಯೇ?
ಮಕ್ಕಳು ಎಲ್ಲರಿಗೂ ಮಕ್ಕಳೇ. ಅವರನ್ನು ದಂಡಿಸುವ ಅಧಿಕಾರ ಯಾವ ಕಾನೂನಿಗೂ ಇಲ್ಲ, ಸಂವಿಧಾನವೂ ಹೇಳುವುದಿಲ್ಲ. ಇನ್ನು ನೀವು- ಸಂಘಪರಿವಾರ ಮತ್ತು ಬಿಜೆಪಿಯವರು ಎಲ್ಲದಕ್ಕೂ ಗುರಾಣಿಯಂತೆ ಬಳಸುವ ಧರ್ಮಗ್ರಂಥಗಳು ಕೂಡ ಮಕ್ಕಳನ್ನು ಹಿಂಸಿಸಲು ಹೇಳುವುದಿಲ್ಲ. ನೀಟ್ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಶಿಕ್ಷಣ ಸಚಿವ, ಪ್ರಧಾನಮಂತ್ರಿಗಳು ಮತ್ತು ಕೇಂದ್ರ ಸರ್ಕಾರ ಅಪರಾಧಿ ಸ್ಥಾನದಲ್ಲಿ ನಿಂತಿದೆ. ವಿದ್ಯಾರ್ಥಿಗಳಿಗೆ ತುಂಬಲಾರದ ನಷ್ಟವಾಗಿದೆ, ಅನ್ಯಾಯವಾಗಿದೆ. ಆ ಅನ್ಯಾಯದ ವಿರುದ್ಧ ದನಿ ಎತ್ತಿದ್ದಾರೆ, ಪ್ರಭುತ್ವವನ್ನು ಪ್ರಶ್ನಿಸುತ್ತಿದ್ದಾರೆ. ಪ್ರಶ್ನೆಗಳನ್ನು ಸಾವಧಾನದಿಂದ ಆಲಿಸಬೇಕು, ಉತ್ತರಿಸಬೇಕು, ಪರಿಹಾರ ದೊರಕಿಸಿಕೊಡಬೇಕು. ಅದು ನಿಮ್ಮ ಜಬಾವ್ದಾರಿ, ಅರಿತು ತಿದ್ದಿಕೊಳ್ಳಿ. ಇಲ್ಲದಿದ್ದರೆ, ಯುವಸಮೂಹ ಎದ್ದು ನಿಂತಿದೆ, ಭಯದಿಂದ ಮುಕ್ತವಾಗಿದೆ. ನಿಮ್ಮ ಭವಿಷ್ಯವನ್ನು ಬರಿದು ಮಾಡಲಿದೆ.




