ಇತ್ತೀಚಿನ ಸಮೀಕ್ಷೆಗಳಲ್ಲಿ ಎನ್ಡಿಎ ಮತದಾರರೇ ಆಡಳಿತರೂಢ ಸರ್ಕಾರದ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸರ್ಕಾರ ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ.
ನೀಟ್ ಪರೀಕ್ಷೆಯ ಹಗರಣದಿಂದಾಗಿ ಆಡಳಿತರೂಢ ಎನ್ಡಿಎ ಸರ್ಕಾರದ ಅಸಮರ್ಥತೆ ಬಯಲಾಯಿತು. 22 ಲಕ್ಷ ನೀಟ್ ಆಕಾಂಕ್ಷಿಗಳ ಭವಿಷ್ಯದ ಜೊತೆ ಆಟವಾಡಿದ ಸರ್ಕಾರದಲ್ಲಿ ಯಾವುದೇ ಬದಲಾವಣೆಯೂ ಕಂಡುಬರಲಿಲ್ಲ.
ಜಡ್ಡುಗಟ್ಟಿ ನಿಂತಿರುವ ವ್ಯವಸ್ಥೆಯನ್ನು ಸ್ವಲ್ಪವಾದರೂ ಅಲುಗಾಡಿಸುತ್ತೇನೆ ಎಂದು ಹೊರಟ, ಪರಿಸರ ಹೋರಾಟಗಾರ, ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಸೋನಮ್ ವಾಂಗ್ಚುಕ್ ಅವರು ದೆಹಲಿಯ ಜಂತರ್ ಮಂತರ್ ನಲ್ಲಿ ಉಪವಾಸ ಸತ್ಯಾಗ್ರಹ ಕುಳಿತು ಹದಿನಾರು ದಿನಗಳಾಗಿವೆ. ಅವರು ಕೇಳುತ್ತಿರುವುದು ಇಷ್ಟೇ: “ಈ ದೇಶದ ಯುವಜನರ ಬದುಕಿನ ಜೊತೆ ಆಟವಾಡಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಕೊಡಬೇಕು. ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿರುವ ಸಂಬಂಧ ಸಮಗ್ರ ತನಿಖೆ ನಡೆಸಬೇಕು, ಪರೀಕ್ಷಾ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರಬೇಕು, ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಬೇಕು”- ಇದ್ಯಾವುದಕ್ಕೂ ಸರ್ಕಾರ ಉತ್ತರಕೊಡಲು ಸಿದ್ಧವಿಲ್ಲ. ಧರ್ಮೇಂದ್ರ ಪ್ರಧಾನ್ ಕುರ್ಚಿಯೂ ಅಲುಗಾಡಲಿಲ್ಲ. ಆದರೆ ಪರಿಸ್ಥಿತಿ ಬಿಗಡಾಯಿಸಿದಷ್ಟು ಸರ್ಕಾರದ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. ಸೋನಮ್ ಅವರ ಪ್ರತಿಭಟನೆಯತ್ತ ಜನರು ಗಮನ ಹರಿಸಲು ಆರಂಭಿಸಿದ್ದಾರೆ.
“ಸರಿಯಾಗಿ ಒಂದು ಪರೀಕ್ಷೆಯನ್ನು ನಡೆಸಿ, ಫಲಿತಾಂಶವನ್ನು ನೀಡುವುದಕ್ಕೆ ಸಾಧ್ಯವಾಗದಷ್ಟು ಕೇಂದ್ರ ಸರ್ಕಾರ ಅಸಮರ್ಥವಾಗಿದೆಯೇ?” ಎಂಬ ಗಂಭೀರ ಪ್ರಶ್ನೆಯನ್ನು ಜನರು ಕೇಳಲಾರಂಭಿಸಿದ್ದಾರೆ. ನೀಟ್ ಪರೀಕ್ಷಾ ಅಕ್ರಮಗಳ ಹೊತ್ತಿನಲ್ಲಿ ಹುಟ್ಟಿಕೊಂಡ `ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಅಭಿಯಾನ ಯುವಜನರ ದನಿಯಾಗಿಯೂ ಹೊಮ್ಮಿದೆ. ಸಿಜೆಪಿ ನಡೆಸಿದ ಚಳವಳಿಗೆ ಬೆಂಬಲವಾಗಿ ಬಂದು ಉಪವಾಸ ಕುಳಿತ ಸೋನಮ್ ಅವರು ಸರ್ಕಾರದ ದಾಡಸಿತನವನ್ನು ಬಟಾಬಯಲು ಮಾಡಿದ್ದಾರೆ. ಅವರ ಜೀವ ಸಾವಿನ ಕದವನ್ನು ತಟ್ಟುತ್ತಿದ್ದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿದ್ದ ಸರ್ಕಾರ, ವಾಗ್ಚುಕ್ ಅವರನ್ನು ಹೊತ್ತೊಯ್ದು ಆಸ್ಪತ್ರೆಗೆ ದಾಖಲಿಸಿದೆ.
ಪರೀಕ್ಷಾ ಹಗರಣ ಮತ್ತು ವಾಂಗ್ಚುಕ್ ಅವರ ಚಳವಳಿ ಜೊತೆಗೆ ಬಿಜೆಪಿಗೆ ಮತ್ತೆರಡು ಸಂಕಷ್ಟಗಳು ಸುತ್ತಿಕೊಂಡಿವೆ. ಒಂದು ರಾಮಮಂದಿರ ಹುಂಡಿ ಹಗರಣ, ಮತ್ತೊಂದು ಇ20 (ಎಥೆನಾಲ್ 20) ಬಿಕ್ಕಟ್ಟು.
ರಾಮಮಂದಿರ ಹುಂಡಿ ಹಗರಣ
ಹಿಂದೆಲ್ಲ ಬಿಜೆಪಿಯ ಕೋಮು ರಾಜಕಾರಣವನ್ನು ವಿರೋಧಿಸಿದರೆ, ಸುಲಭವಾಗಿ ದೇಶದ್ರೋಹಿ ಎಂಬ ಪಟ್ಟವನ್ನು ದಯಪಾಲಿಸಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಧರ್ಮದ ಮುಸುಕು ಹೊದ್ದು, ಎದುರಾಳಿಯನ್ನು ದೇಶದ್ರೋಹದ ಕಟಕಟೆಯಲ್ಲಿ ನಿಲ್ಲಿಸಲಾಗದಷ್ಟು ನೈತಿಕವಾಗಿ ಬಿಜೆಪಿ ಮತ್ತು ಸಂಘಪರಿವಾರ ಬೆತ್ತಲಾಗಿವೆ.
ಸಂಘಪರಿವಾರದ ಬಹುದೊಡ್ಡ ರಾಜಕೀಯ ಯೋಜನೆಯಾಗಿದ್ದ ಅಯೋಧ್ಯೆ ರಾಮಮಂದಿರ ವಿಚಾರವೀಗ ಬಿಜೆಪಿಗೆ ಮುಳುವಾಗುವುದು ದಟ್ಟವಾಗುತ್ತಿದೆ. ರಾಮಮಂದಿರದೊಂದಿಗೆ ಬೆರೆತ ರಾಜಕೀಯದೊಳಗೆ ಎದ್ದುಬಂದ ಬಿಜೆಪಿ, ಈಗ ಅದೇ ಭಾವನಾತ್ಮಕ ಸುಳಿಗೆ ಸಿಲುಕಿದೆ. ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪಿನ ಅನ್ವಯ ರಾಮಮಂದಿರ ನಿರ್ಮಾಣವಾದ ಮೇಲೆ, ಕೋರ್ಟ್ ಸೂಚನೆಯ ಭಾಗವಾಗಿ ರಾಮಮಂದಿರ ಟ್ರಸ್ಟ್ ರಚನೆಯಾಯಿತು. ಆ ಟ್ರಸ್ಟ್ನಲ್ಲಿ ಸಂಘಪರಿವಾರದ ಕಟ್ಟಾಳುಗಳೇ ಇದ್ದರು. ಈಗ ಕೋಟ್ಯಂತರ ಹಣವನ್ನು ಲೂಟಿ ಮಾಡಿರುವ ಗಂಭೀರ ಆರೋಪವನ್ನು ಸಂಘಪರಿವಾರದ ನಾಯಕರು ಎದುರಿಸುತ್ತಿದ್ದಾರೆ. ಇದರ ನೇರ ಪರಿಣಾಮ ಬಿಜೆಪಿಯ ಮೇಲಾಗುತ್ತದೆ. 2027ರಲ್ಲಿ ನಡೆಯಲಿರುವ ಉತ್ತರಪ್ರದೇಶ ವಿಧಾನಸಭಾ ಚುಣಾವಣೆಯಲ್ಲಿ ರಾಮಮಂದಿರ ಹುಂಡಿ ಹಗರಣವನ್ನೇ ಪ್ರಮುಖ ಅಸ್ತ್ರವನ್ನಾಗಿ ಬಳಸಲು ಪ್ರತಿಪಕ್ಷಗಳು ಸಜ್ಜಾಗಿವೆ. ಜನರ ನಂಬಿಕೆಯ ಜೊತೆ ಆಟವಾಡಿ ಉಳಿಯುವುದು ಕಷ್ಟವೆಂದು ಬಿಜೆಪಿಗೂ ಗೊತ್ತಿದೆ.
ಬಿಜೆಪಿ ಎದುರಿಸುತ್ತಿರುವ ಬಿಕ್ಕಟ್ಟು ಎಂತಹದ್ದೆಂದು ಇತ್ತೀಚೆಗೆ ಸಿ-ವೋಟರ್ ನಡೆಸಿರುವ ಸಮೀಕ್ಷೆ ಅನಾವರಣ ಮಾಡಿದೆ. ರಾಮಮಂದಿರ ಹುಂಡಿ ಹಗರಣ ಪ್ರಕರಣ ಬಹಳ ಗಂಭೀರವಾದದ್ದು ಎಂದು ಶೇ. 86ರಷ್ಟು ಜನರು ಸರ್ವೇಯಲ್ಲಿ ಹೇಳಿದ್ದಾರೆ. ಇದರಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿ ಇದೆ. ರಾಮಮಂದಿರ ಹಗರಣದಿಂದ ತಮ್ಮ ನಂಬಿಕೆ ಮತ್ತು ವಿಶ್ವಾಸಕ್ಕೆ ಧಕ್ಕೆಯಾಗಿದೆ ಎಂದು ಶೇ. 53.7ರಷ್ಟು ಎನ್ಡಿಎ ಬೆಂಬಲಿಗರು ಅಭಿಪ್ರಾಯಪಟ್ಟಿದ್ದಾರೆ. “ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರು ತ್ವರಿತವಾಗಿ ಮತ್ತು ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳುತ್ತಾರೆ” ಎಂದೂ ಅವರು ಹೇಳಿಕೊಂಡಿದ್ದಾರೆ. ಆದರೆ ರಾಮಮಂದಿರ ಹಗರಣ ಸುರುಳಿ ಸುರುಳಿಯಂತೆ ಬಿಚ್ಚಿಕೊಳ್ಳುತ್ತಲೇ ಇದೆ. ದೊಡ್ಡದೊಡ್ಡ ತಿಮಿಂಗಿಲಗಳು ಬಚಾವಾಗಿ, ಸಣ್ಣಮೀನುಗಳನ್ನು ಬಲೆಗೆ ಬೀಳಿಸಲಾಗುತ್ತಿದೆ ಎಂಬ ಅಭಿಪ್ರಾಯ ದಟ್ಟವಾಗುತ್ತಿದೆ. ಇದೊಂದು ಸಾವಿರಾರು ಕೋಟಿ ರೂ.ಗಳ ಹಗರಣ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.
ನೀಟ್ ಸ್ಕ್ಯಾಮ್ ಮೂಲಕ ಯುವಜನರ ಕನಸುಗಳೊಂದಿಗೆ ಆಟವಾಡಿರುವ ಆಕ್ರೋಶ ಒಂದು ಕಡೆಯಾದರೆ, ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸಿದ ಸಿಟ್ಟು ಮತ್ತೊಂದು ಕಡೆ ಹೊಮ್ಮಿದೆ. ಇಂತಹ ಸನ್ನಿವೇಶದಲ್ಲಿ ಜನರ ನಿತ್ಯ ಬದುಕಿನ ಮೇಲೆ ಪರಿಣಾಮ ಬೀರುವ ಎಥೆನಾಲ್ ಇಂಧನ ಮಿಶ್ರಣ ವಿವಾದ ತೀವ್ರ ಸ್ವರೂಪ ಪಡೆಯುತ್ತಿದೆ. ಬಿಜೆಪಿ ಸರ್ಕಾರ ಎಥೆನಾಲ್ ಬಳಕೆಯನ್ನು ಪ್ರೋತ್ಸಾಹಿಸಿದಷ್ಟೂ ಜನರ ವಿರೋಧ ಹೆಚ್ಚಾಗುವ ಪರಿಸ್ಥಿತಿ ಉದ್ಭವಿಸಿದೆ.
ಸಕ್ಕರೆ ಅಥವಾ ಪಿಷ್ಟಭರಿತ ಕೃಷಿ ಉತ್ಪನ್ನಗಳಾದ ಕಬ್ಬಿನ ಕಾಕಂಬಿ, ಕಬ್ಬಿನ ರಸ, ಜೋಳ, ಗೋಧಿ ಮತ್ತು ಅಕ್ಕಿಯ ಮೂಲಕ ತಯಾರಿಸಲ್ಪಟ್ಟ ಎಥೆನಾಲ್ ಅನ್ನು ಪೆಟ್ರೊಲ್ನಲ್ಲಿ ಶೇ.20ರಷ್ಟು ಬೆರೆಸುವ ಯೋಜನೆಯನ್ನು ಸರ್ಕಾರ ಈಗಾಗಲೇ ಜಾರಿಗೆ ತಂದಿದೆ. ಎಥೆನಾಲ್ ಬಳಕೆಯನ್ನು ಶೇ.100ರಷ್ಟು ಹೆಚ್ಚಿಸುವ ಯೋಜನೆಗೆ ಕೈಹಾಕಿರುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ಘೋಷಿಸಿದ್ದಾರೆ.
ಸರ್ಕಾರವು ನೇರವಾಗಿ ಎಥೆನಾಲ್ ಖರೀದಿಸುವುದಿಲ್ಲ. ಬದಲಾಗಿ ಎಥೆನಾಲ್ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳಿಂದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನಂತಹ ತೈಲ ಕಂಪನಿಗಳು ಇದನ್ನು ಖರೀದಿಸಿ ಪೆಟ್ರೋಲ್ನಲ್ಲಿ ಮಿಶ್ರಣ ಮಾಡಿ ಗ್ರಾಹಕರಿಗೆ ಮಾರಾಟ ಮಾಡುತ್ತವೆ. ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂಬ ವಾದವನ್ನು ಮೊದಲಿನಿಂದಲೂ ಬಿಜೆಪಿ ನಾಯಕರು ಹೇಳುತ್ತಾ ಬಂದಿದ್ದಾರೆ. ಆದರೆ ಇದರ ಹಿಂದೆ ಸ್ವಹಿತಾಸಕ್ತಿಗಳು ಇವೆ ಎಂದು ವಿಶ್ಲೇಷಣೆ ಬರುತ್ತಿವೆ.
2020 ರಿಂದೀಚೆಗೆ, ಎಥೆನಾಲ್ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳಿಗೆ ಕೇಂದ್ರ ಸರ್ಕಾರ ಸಾಲ ಮತ್ತು ಬಡ್ಡಿ ಸಬ್ಸಿಡಿಯಂತಹ ಸೌಲಭ್ಯಗಳನ್ನು ನೀಡುತ್ತಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಪುತ್ರರಾದ ಸಾರಂಗ್ ಮತ್ತು ನಿಖಿಲ್ ಗಡ್ಕರಿ ಅವರ ‘ಮಾನಸ್’ ಮತ್ತು ‘ಸಿಯಾನ್ ಆಗ್ರೋ ಇಂಡಸ್ಟ್ರೀಸ್’ ಕಂಪನಿಗಳು ಈ ಸೌಲಭ್ಯಗಳನ್ನು ಧಾರಾಳವಾಗಿ ಪಡೆದಿವೆ. ಎಥೆನಾಲ್ ಪ್ರೋತ್ಸಾಹದಿಂದಾಗಿ ಗಡ್ಕರಿ ಫ್ಯಾಮಿಲಿಗೆ ಅನುಕೂಲವಾಗುತ್ತಿರುವ ಆರೋಪ ಬಂದಿದೆ.
ಫೆಬ್ರವರಿ 2024ರಲ್ಲಿ ನಿಖಿಲ್ ಗಡ್ಕರಿ ಅವರ ಸಿಯಾನ್ ಆಗ್ರೋ ಇಂಡಸ್ಟ್ರೀಸ್ ಎಥೆನಾಲ್ ವಲಯಕ್ಕೆ ಕಾಲಿರಿಸಿತು. ಆ ಸಮಯದಲ್ಲಿ ಆ ಕಂಪನಿಯ ಷೇರು ಬೆಲೆ 41 ರೂಪಾಯಿಗಳಷ್ಟಿತ್ತು ಮತ್ತು ಎಥೆನಾಲ್ ಮೂಲಕ ಬಂದ ವಾರ್ಷಿಕ ಆದಾಯ 17 ಕೋಟಿ ರೂಪಾಯಿಗಳಾಗಿತ್ತು. ನಂತರ, ಜುಲೈ 2025ರ ವೇಳೆಗೆ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಸರ್ಕಾರ ಶೇ. 19ಕ್ಕೆ ಹೆಚ್ಚಿಸಿತು. ಈ ಬದಲಾವಣೆಯ ಬೆನ್ನಲ್ಲೇ, ನಿಖಿಲ್ ಗಡ್ಕರಿ ಅವರ ಕಂಪನಿಯು ಕೇವಲ ಒಂದು ವರ್ಷದಲ್ಲಿ 17 ಕೋಟಿ ರೂಪಾಯಿಯಿಂದ 510 ಕೋಟಿ ರೂಪಾಯಿಯಷ್ಟು ಆದಾಯವನ್ನು ದಾಖಲಿಸಿ, ಒಟ್ಟಾರೆ ವಾರ್ಷಿಕ ವಹಿವಾಟನ್ನು 2,061 ಕೋಟಿ ರೂಪಾಯಿಗೆ ಏರಿಸಿಕೊಂಡಿತು.
ಈ ಬೆಳವಣಿಗೆಗಳನ್ನು ನೋಡಿದರೆ ಯಾವುದೇ ರೀತಿಯ ಸ್ವಜನಪಕ್ಷಪಾತ, ಅಧಿಕಾರ ದುರುಪಯೋಗ ಅಥವಾ ಭ್ರಷ್ಟಾಚಾರ ನಡೆದಿಲ್ಲ ಎಂದು ನಂಬಲಾದೀತೆ? ಇಷ್ಟೇ ಅಲ್ಲದೆ ಎಥೆನಾಲ್ ಬಗ್ಗೆ ಈ ದೇಶದ ಜನರಲ್ಲಿ ವಿಶ್ವಾಸ ಮೂಡಿಲ್ಲ. ಎಥೆನಾಲ್ಗೆ ಹೊಂದಿಕೆಯಾಗುವ ಎಂಜಿನ್ಗಳು ಇನ್ನೂ ಚಾಲ್ತಿಗೆ ಬಂದಿಲ್ಲ. ಈ ಮಿಶ್ರಿತ ಎಥೆನಾಲ್ನಿಂದಾಗಿ ಮೈಲೇಜ್ ಕಡಿಮೆಯಾಗುತ್ತಿದೆ, ಯಂತ್ರವು ಬೇಗ ರಿಪೇರಿಗೆ ಬರುತ್ತಿವೆ ಎಂಬ ಆತಂಕಗಳು ಮನೆಮಾಡಿವೆ. ಆದರೆ ಈ ವಾದದಲ್ಲಿ ಹುರುಳಿಲ್ಲ ಎಂದು ಸಮರ್ಥಿಸುವ ಕೆಲಸಕ್ಕೆ ಸರ್ಕಾರ ಕೈ ಹಾಕಿದೆ. ಸರ್ಕಾರದ ವಾದವನ್ನು ಜನ ನಂಬಲು ಸಿದ್ಧರಿಲ್ಲ ಎಂಬ ಅಂಶವನ್ನು ಸಿ ವೋಟರ್ ಸಮೀಕ್ಷೆ ತೆರೆದಿಟ್ಟಿದೆ.
ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಮತ ಹಾಕಿದವರಲ್ಲಿ ಸುಮಾರು 53% ರಷ್ಟು ಜನರು ಇ20 ಇಂಧನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇಂಜಿನ್ ಹಾಳಾಗುವ ಭೀತಿ, ಇಂಧನ ದಕ್ಷತೆಯಲ್ಲಿನ ಅನುಮಾನವೇ ಇದಕ್ಕೆ ಕಾರಣ.
ಈ ಲೇಖನ ಓದಿದ್ದೀರಾ?: ಸೆನೆಗಲ್ ಪ್ರಕರಣ | ಯಾವ ಪರಿಸ್ಥಿತಿ ತಾಯಿಯೊಬ್ಬಳನ್ನು ʼಅಂತಹʼ ನಿರ್ಧಾರಕ್ಕೆ ತಳ್ಳಿರಬಹುದು?
ಎಥೆನಾಲ್-ಪೆಟ್ರೋಲ್ ಮಿಶ್ರಣ ಕಾರ್ಯಕ್ರಮದ ಮೇಲಿನ ಬೆಂಬಲದಿಂದ ಹಿಡಿದು ಅದರ ಆರ್ಥಿಕ ಮತ್ತು ತೈಲ ನೀತಿಯ ಪರಿಣಾಮಗಳವರೆಗೆ 12 ಪ್ರಶ್ನೆಗಳನ್ನು ಜನರಿಗೆ ಸಿ-ವೋಟರ್ ಕೇಳಿದೆ. ಎಥೆನಾಲ್ ಮಿಶ್ರಣವನ್ನು ಬೆಂಬಲಿಸುತ್ತೀರಾ ಎಂದು ನೇರವಾಗಿ ಕೇಳಿದಾಗ, ಸಮೀಕ್ಷೆಯಲ್ಲಿ ಪಾಲ್ಗೊಂಡ 52% ರಷ್ಟು ಜನರು `ಇಲ್ಲ’ ಎಂದು ಉತ್ತರಿಸಿದರೆ, 25.9% ರಷ್ಟು ಜನರು ತಮಗೆ ಖಚಿತವಿಲ್ಲ ಎಂದು ಹೇಳಿದ್ದಾರೆ. ಕೇವಲ 22% ಜನರು ಮಾತ್ರ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪಕ್ಷಾತೀತವಾಗಿ ನೋಡಿದಾಗ, ಸುಮಾರು 60% ರಷ್ಟು ಜನರು ಈ ಕಾರ್ಯಕ್ರಮವನ್ನು ವಿರೋಧಿಸಿದ್ದಾರೆ. ಸೂಕ್ತ ಸಂಶೋಧನೆಯಿಲ್ಲದೆ ಅವಸರದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದರ ಮುಂದುವರಿದ ಭಾಗವಾಗಿ, 76% ರಷ್ಟು ಜನರು ಎಥೆನಾಲ್ ಮಿಶ್ರಿತ ಪೆಟ್ರೋಲ್ ಮತ್ತು ಸಾಮಾನ್ಯ ಪೆಟ್ರೋಲ್ ಎರಡನ್ನೂ ಏಕಕಾಲದಲ್ಲಿ ಮಾರಾಟ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕಡಿಮೆ ಬೆಲೆಗೆ ಮಾರಾಟ ಮಾಡಿದರೂ, ಕೇವಲ 40.8% ರಷ್ಟು ಜನರು ಮಾತ್ರ ಮಿಶ್ರಿತ ಇಂಧನವನ್ನು ಖರೀದಿಸುವುದಾಗಿ ಹೇಳಿದ್ದಾರೆ. ಈ ಆತಂಕಗಳನ್ನು ಗಮನಿಸಿದರೆ, 56.3% ರಷ್ಟು ಜನರು (ಇದರಲ್ಲಿ 49.2% ಬಿಜೆಪಿ ಮತದಾರರೂ ಸೇರಿದ್ದಾರೆ), E20 ಅನ್ನು ಕಡ್ಡಾಯಗೊಳಿಸುವುದರಿಂದ ಹಳೆಯ ವಾಹನಗಳ ಮಾಲೀಕರಿಗೆ ಅನ್ಯಾಯವಾಗುತ್ತದೆ, ಇಂತಹ ವಾಹನಗಳು ಮಿಶ್ರಿತ ಇಂಧನಕ್ಕೆ ತಕ್ಕಂತೆ ವಿನ್ಯಾಸಗೊಂಡಿರುವುದಿಲ್ಲ ಎಂದಿದ್ದಾರೆ.
ಈ ಎಲ್ಲ ಅಂಕಿ-ಅಂಶಗಳು ಹೇಳುವುದೇನೆಂದರೆ- ಸರ್ಕಾರ ಸ್ಪಷ್ಟವಾಗಿ ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತಿದೆ, ಜನರ ನಂಬಿಕೆಗಳ ಮೇಲೆ ಸವಾರಿ ಮಾಡಲಾಗಿದೆ, ಬದುಕು ಮತ್ತು ಭವಿಷ್ಯದ ಮೇಲೆ ಹಲ್ಲೆ ನಡೆಸಲಾಗಿದೆ.




