“ಬಡತನ, ನಿರುದ್ಯೋಗ ಮತ್ತು ಅನಕ್ಷರತೆಗಳು ಮಾನವ ಕಳ್ಳ ಸಾಗಣೆಯ ಪ್ರಮುಖ ಅಂಶವಾಗಿದ್ದು , ಮಾನವ ಕಳ್ಳ ಸಾಗಣೆಯಂತಹ ಅಪರಾಧಗಳಿಂದ ದುರ್ಬಲ ವರ್ಗದ ಜನರನ್ನು ರಕ್ಷಿಸಲು. ಅನಾಮದೇಯರು ನೀಡುವ ಆಸೆ ಆಮಿಷಗಳಿಗೆ ಬಲಿಯಾಗದಂತೆ ಜಾಗೃತಿ ಮೂಡಿಸಬೇಕಿದೆ” ಎಂದು ಚಿತ್ರದುರ್ಗದ ಕಾರ್ಯಕ್ರಮದಲ್ಲಿ ಆಶ್ರಿತ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಎಸ್. ನಾಗರಾಜ್ ತಿಳಿಸಿದರು.

ಆಶ್ರಿತ ಸಂಸ್ಥೆ ಚಿತ್ರದುರ್ಗ, ಭಾರತೀಯ ರೈಲ್ವೆ ಇಲಾಖೆ. ರೈಲ್ವೆ ಪೊಲೀಸ್ ಇಲಾಖೆ. ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಇವರ ಸಂಯುಕ್ತಾಶ್ರಯದಲ್ಲಿ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ರೈಲು ನಿಲ್ದಾಣದಲ್ಲಿ ನಡೆದ ವಿಶ್ವಮಾನವ ಕಳ್ಳ ಸಾಗಣಿಕೆ ವಿರೋಧಿ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯವಾಗಿ ಅಪರಿಚಿತರು ನೀಡುವ ಉದ್ಯೋಗ ಮತ್ತು ಹಣದ ಆಮಿಷಕ್ಕೆ ಬಲಿಯಾಗಿ, ಹೆಣ್ಣು ಮಕ್ಕಳು ಮತ್ತು ಮಕ್ಕಳು ದೇಶ ವಿದೇಶಗಳಲ್ಲಿ ಮಾರಾಟವಾಗುತ್ತಿದ್ದಾರೆ. ಇದರ ನಿರ್ಬಂಧನೆಗಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕರೆ ನೀಡಿದರು.

ಚಿತ್ರದುರ್ಗ ಜಿಲ್ಲಾ ಸಮನ್ವಯಾಧಿಕಾರಿ ಡಿ.ಓ.ಮುರಾರ್ಜಿ ಮಾತನಾಡಿ “ಮಾನವ ಕಳ್ಳ ಸಾಗಣೆಯಲ್ಲಿ ವ್ಯಕ್ತಿಯನ್ನು ಮಾನಸಿಕ ಖಿನ್ನತೆಗೆ ಒಳಪಡಿಸಿ. ಲೈಂಗಿಕ ಶೋಷಣೆ ಅಥವಾ ಬಲವಂತದ ಮೂಲಕ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳುವುದು ನಡೆಯುತ್ತಿದೆ. ಇದರಲ್ಲಿ ಪ್ರಜ್ಞಾವಂತರ ಜಾಲದ ಕೈವಾಡವು ಇದೆ. ಅದನ್ನು ಕಾನೂನು ರೀತಿಯಲ್ಲಿ ನಿರ್ಬಂಧಿಸಬೇಕಿದೆ” ಎಂದು ಎಚ್ಚರಿಸಿದರು.

“ಈ ಶೋಷಣೆಯಲ್ಲಿ ಬಲವಂತದ ಕಾರ್ಮಿಕ, ಲೈಂಗಿಕ ಗುಲಾಮಗಿರಿ ಅಥವಾ ಇತರ ರೀತಿಯ ವಾಣಿಜ್ಯ ಲೈಂಗಿಕ ಶೋಷಣೆ ಒಳಗೊಂಡಿರಬಹುದು. ಇದನ್ನು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆ ಮತ್ತು ಆಧುನಿಕ ಗುಲಾಮಗಿರಿಯ ಒಂದು ರೂಪವೆಂದು ಪರಿಗಣಿಸಲಾಗುತ್ತದೆ. ಮಾನವ ಕಳ್ಳಸಾಗಣೆ ವಿರುದ್ಧ ಹೋರಾಡುವ ಪ್ರಯತ್ನಗಳು ಅಂತರರಾಷ್ಟ್ರೀಯ ಕಾನೂನುಗಳು, ರಾಷ್ಟ್ರೀಯ ನೀತಿಗಳು ಮತ್ತು ಸರ್ಕಾರೇತರ ಸಂಸ್ಥೆಗಳನ್ನು ಒಳಗೊಂಡಿದ್ದು ಇದಕ್ಕೆ ಸಾರ್ವಜನಿಕರ ಸಹಕಾರದ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಜಾತಿ ಗಣತಿ ಸಮೀಕ್ಷೆ ಮಂಡಿಸಿ, ಅಧಿವೇಶನದಲ್ಲಿ ಒಳಮೀಸಲಾತಿ ಜಾರಿಗೊಳಿಸಿ; ದಲಿತ ಸಂಘರ್ಷ ಸಮಿತಿ
ಕಾರ್ಯಕ್ರಮದಲ್ಲಿ ರೈಲ್ವೆ ಇಲಾಖೆಯ ನಿಲ್ದಾಣ ವ್ಯವಸ್ಥಾಪಕ ವಿ ನಾಗಪ್ರತಾಪು, ರೈಲ್ವೆ ಪೊಲೀಸ್ ಇಲಾಖೆಯ ಪಿಎಸ್ಐ ಚಂದ್ರಶೇಖರ, ಹೆಡ್ ಕಾನ್ಸ್ಟೇಬಲ್ ಎಂಎಸ್ ಮಂಜುನಾಥ್, ಆಶ್ರಿತ ಸಂಸ್ಥೆಯ ತಿಪ್ಪೇಸ್ವಾಮಿ, ದೇವಿರಮ್ಮ, ಎಸ್ ಚಂದ್ರಣ್ಣ, ಮತ್ತು ರೈಲ್ವೆ ಇಲಾಖೆಯ ಸಿಬ್ಬಂದಿ ಹಾಗೂ ಪ್ರಯಾಣಿಕರು ಹಾಜರಿದ್ದರು.