“ನಿಜವಾದ ನಿಸ್ವಾರ್ಥಿ ಮಾತ್ರ ಸೈನಿಕನಾಗಲು ಸಾಧ್ಯ. ಸೈನಿಕ ನಿಜವಾದ ಸರ್ವಸಂಗಪರಿತ್ಯಾಗಿ. ಯುದ್ದ ಭೂಮಿ, ಗಡಿ ರಕ್ಷಣೆಯಲ್ಲಿ ಪ್ರಾಣಪಕ್ಷಿ ಹಾರಿಹೋಗುತ್ತದೆ ಎಂಬ ಸತ್ಯ ಅರಿವಿದ್ದರೂ ಇದೇ ವೃತ್ತಿ ಆಯ್ಕೆ ಮಾಡಿಕೊಳ್ಳುವ ಜವಾಬ್ದಾರಿಯೇ ಯೋಧ. ದೇಶಪ್ರೇಮದ ಪರಮೋಚ್ಚ ಸ್ಥಾನವೇ ಸೈನಿಕ. “ಇಂದು ದೇಶದ ಪ್ರತಿಯೊಬ್ಬ ಪ್ರಜೆ ನೆಮ್ಮದಿಯ ಬದುಕು ಸಾಗಿಸುತ್ತಿದ್ದಾನೆ ಎಂದರೆ ಅದಕ್ಕೆ ದೇಶವನ್ನು ಹಗಲಿರುಳು ಕಾಯುತ್ತಿರುವ ಸೈನಿಕರೇ ಕಾರಣ. ಸೈನಿಕರನ್ನು ಯಾರೂ ಕಡೆಗಣಿಸದೆ ಗೌರವದಿಂದ ಕಾಣಬೇಕು” ಎಂದು ಚಿತ್ರದುರ್ಗ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು ಕಾರ್ಗಿಲ್ ವಿಜಯೋತ್ಸವ ಆಚರಣೆಯಲ್ಲಿ ಹೆಮ್ಮೆ ವ್ಯಕ್ತಪಡಿಸಿದರು.

ಚಿತ್ರದುರ್ಗ ಹೊರವಲಯದ ಎಸ್ ಜೆ ಎಸ್ ಸಮೂಹ ವಿದ್ಯಾಸಂಸ್ಥೆಗಳು, ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನದಲ್ಲಿ ಹಮ್ಮಿಕೊಂಡ ಕಾರ್ಗಿಲ್ ವಿಜಯೋತ್ಸವ ದಿನಾಚರಣೆಯ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು “ಕಾರ್ಗಿಲ್ ವಿಜಯ್ ದಿನವು ಭಾರತ ಮಾತೆಯ ವೀರ ಪುತ್ರರ ಧೈರ್ಯವನ್ನು ನೆನಪಿಸಿಕೊಳ್ಳಬೇಕು. ಅವರು ದೇಶದ ಗೌರವ ಕಾಪಾಡಲು ತಮ್ಮ ಪ್ರಾಣವನ್ನೇ ಅರ್ಪಿಸಿದರು. ತಮ್ಮ ಪ್ರಾಣವನ್ನೇ ತ್ಯಾಗ ಮಾಡಲು ಸಿದ್ಧರಿದ್ದ ಆ ವೀರರ ತ್ಯಾಗವು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಅವರ ದೇಶಭಕ್ತಿ ಎಲ್ಲರಿಗೂ ಮಾದರಿಯಾಗಿದೆ” ಎಂದು ಸ್ಮರಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ಶ್ರೀಗಳ ಪಟ್ಟಾಭಿಷೇಕ ಮಹೋತ್ಸವ ಹಾಗೂ ಭೋವಿ ಜನೋತ್ಸವ
“ವ್ಯಕ್ತಿ, ವಸ್ತು ಹಾಗೂ ಮನೆಗಿಂತಲೂ ಮಿಗಿಲು ದೇಶ ಎನ್ನುವ ಅಚಲ ವಿಶ್ವಾಸಾರ್ಹತೆಯ ಬದ್ದತೆ ತೋರಿಸುವವರೇ ಯೋಧರು. ದೇಶ ರಕ್ಷಣೆ ಹಾಗೂ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡುವ ಸ್ಪಷ್ಟ ನಿಲುವು ಹೊಂದಿಯೇ ಸೈನ್ಯಕ್ಕೆ ಸೇರ್ಪಡೆಗೊಳ್ಳುವ ಯೋಧರೇ ನಮ್ಮ ಪಾಲಿನ ದೇವರು” ಎಂದು ಹೇಳಿದರು.

“ಸೈನಿಕನ ಜೀವನವು ಸಾಹಸ ಮತ್ತು ಅಪಾಯಗಳಿಂದ ತುಂಬಿರುತ್ತದೆ. ಸೈನಿಕರು ಯಾವುದೇ ಪರಿಸ್ಥಿತಿಯಲ್ಲಿಯೂ ತಮ್ಮ ತಾಯ್ನಾಡನ್ನು ರಕ್ಷಿಸಲು ಪ್ರತಿಜ್ಞೆ ಮಾಡುತ್ತಾರೆ. ಅವರು ಎಂದಿಗೂ ಕರ್ತವ್ಯದಿಂದ ಹೊರಗುಳಿಯುವುದಿಲ್ಲ, ದೇಶಕ್ಕಾಗಿ ಅವರು ಎರಡನೇ ಆಲೋಚನೆಯಿಲ್ಲದೆ ತಮ್ಮ ಪ್ರಾಣವನ್ನೇ ಅರ್ಪಿಸಬಹುದು. ಇದು ಅವರ ಧೈರ್ಯ ಮತ್ತು ಇಚ್ಛಾಶಕ್ತಿಯ ಬಗ್ಗೆ ಬಹಳಷ್ಟು ಹೇಳುತ್ತದೆ. ನಾವು ನಮ್ಮ ಕುಟುಂಬಗಳೊಂದಿಗೆ ಪ್ರತಿ ಸಂದರ್ಭವನ್ನು ಶಾಂತಿಯುತವಾಗಿ ಆಚರಿಸಲು ಅವರು ವರ್ಷಪೂರ್ತಿ ತಮ್ಮ ಕುಟುಂಬಗಳಿಂದ ದೂರವಿರುತ್ತಾರೆ. ಯಾವುದೇ ತುರ್ತು ಪರಿಸ್ಥಿತಿ ಅಥವಾ ವಿಪತ್ತಿನಿಂದ ಬದುಕುಳಿಯುವ ತ್ರಾಣ ಮತ್ತು ದೃಢಸಂಕಲ್ಪವನ್ನು ಅವರು ಹೊಂದಿದ್ದಾರೆ” ಎಂದು ಶ್ಲಾಘಿಸಿದರು.
ಈ ಸುದ್ದಿ ಓದಿದ್ದೀರಾ ? ದಾವಣಗೆರೆ ಚಿತ್ರದುರ್ಗ | ಮಡಿವಾಳ ಮಾಚಿದೇವ ಸೇನಾ ಪಡೆಯಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಶಾಲಾ ವಿದ್ಯಾರ್ಥಿಗಳು ಸೈನಿಕರ ಸಮವಸ್ತ್ರ ಧರಿಸಿ ಆಶುಭಾಷಣ, ಕಿರು ನಾಟಕ, ದೇಶ ಭಕ್ತಿ ಪ್ರಸ್ತುತ ಪಡಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರು ಪೋಷಕರು ಉಪಸ್ಥಿತರಿದ್ದರು.