ಸುಪ್ರೀಂ ಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಅವರು ನವಂಬರ್ 10, 2024 ರಂದು ನಿವೃತ್ತರಾಗಲಿದ್ದು, ಅವರ ಮುಂದಿನ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕೇಂದ್ರದ ಅನುಮೋದನೆಯ ಮೇರೆಗೆ ಖನ್ನಾ ಅವರು 51ನೇ ಮುಖ್ಯ ನ್ಯಾಯಮೂರ್ತಿಗಳಾಗಲಿದ್ದಾರೆ.
ಡಿ ವೈ ಚಂದ್ರಚೂಡ್ ಅವರು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ಮುಂದಿನ ತಮ್ಮ ಉತ್ತರಾಧಿಕಾರಿ ಎಂದು ಶಿಫಾರಸ್ಸು ಮಾಡಿದ್ದಾರೆ. ಸಂಜೀವ್ ಖನ್ನಾ ಅವರು ಮುಖ್ಯ ನ್ಯಾಯಮೂರ್ತಿಗಳಾಗಿ ಮೇ 13, 2025ರವರೆಗೆ ಇರಲಿದ್ದಾರೆ.
ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿದ್ದ ಸಂಜೀವ್ ಖನ್ನಾ ಅವರು ಜನವರಿ 2019 ರಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಲಾಗಿತ್ತು. 1983ರಲ್ಲಿ ವಕೀಲರಾಗಿ ದೆಹಲಿಯಲ್ಲಿ ವೃತ್ತಿ ಆರಂಭಿಸಿದ ಖನ್ನಾ ಅವರು ದೆಹಲಿ ನ್ಯಾಯಾಂಗ ಅಕಾಡೆಮಿ, ದೆಹಲಿಯ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಮತ್ತು ಜಿಲ್ಲಾ ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರಗಳಂತಹ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಹಾರಾಷ್ಟ್ರ, ಝಾರ್ಖಂಡ್ ಚುನಾವಣೆ- ಬಿಜೆಪಿ ಪಾಲಿಗೆ ವರವೇ ಅಥವಾ ಶಾಪವೇ?
ಸಂಜೀವ್ ಖನ್ನಾ ಅವರು ಪ್ರಸ್ತುತ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಭೋಪಾಲ್‌ನ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯ ಆಡಳಿತ ಮಂಡಳಿಯ ಸದಸ್ಯರಾಗಿದ್ದಾರೆ.
ಸಂವಿಧಾನದ 370 ನೇ ವಿಧಿಯ ರದ್ದತಿಯನ್ನು ಎತ್ತಿಹಿಡಿದ ತೀರ್ಪು ಮತ್ತು ಚುನಾವಣಾ ಬಾಂಡ್‌ಗಳ ಯೋಜನೆಯನ್ನು ರದ್ದುಪಡಿಸಿದ ಸಾಂವಿಧಾನಿಕ ಪೀಠಗಳ ಭಾಗವಾಗಿ ಸಂಜೀವ್ ಖನ್ನಾ ತೀರ್ಪು ನೀಡಿದ್ದರು.
