ಚುನಾವಣಾ ಬಾಂಡ್ ನಿಷೇಧಿಸಿ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ನೀಡಿರುವ ತೀರ್ಪನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ಗೆ ಸೂಚಿಸಬೇಕು ಎಂದು ಕೋರಿ ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದ ಸುಪ್ರೀಂಕೋರ್ಟ್ ವಕೀಲರ ಸಂಘದ ಅಧ್ಯಕ್ಷನ ವಿರುದ್ಧ ಮುಖ್ಯ ನ್ಯಾಯಮೂರ್ತಿ ಗರಂ ಆದ ಘಟನೆ ಇಂದು ಕೋರ್ಟ್ ಕಲಾಪದ ವೇಳೆ ನಡೆದಿದೆ.
ಚುನಾವಣಾ ಬಾಂಡ್ ಅರ್ಜಿಯ ಬಗ್ಗೆ ಸೋಮವಾರ ಮತ್ತೆ ವಿಚಾರಣೆ ಕೈಗೆತ್ತಿಕೊಂಡಿದ್ದ ವೇಳೆ ಸುಪ್ರೀಂ ಕೋರ್ಟ್‌ನಲ್ಲಿ ಈ ಬೆಳವಣಿಗೆ ನಡೆದಿದೆ.
ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಸುಪ್ರೀಂಕೋರ್ಟ್ ವಕೀಲರ ಸಂಘದ ಅಧ್ಯಕ್ಷ(ಎಸ್‌ಸಿಬಿಎ) ಅಧ್ಯಕ್ಷ ಡಾ. ಆದೀಶ್ ಸಿ. ಅಗರವಾಲ್, ರಾಷ್ಟ್ರಪತಿ ಸೇರಿದಂತೆ ಸಿಜೆಐ ಡಿವೈ ಚಂದ್ರಚೂಡ್ ಅವರಿಗೂ ಪತ್ರ ಬರೆದಿದ್ದರು. ಅಲ್ಲದೇ, ಸ್ವಯಂ ಪ್ರೇರಿತ ಮರುಪರಿಶೀಲನಾ ಅರ್ಜಿಯನ್ನು ಕೂಡ ಹಾಕಿದ್ದರು.
ಇಂದು ನಡೆಯುತ್ತಿದ್ದ ಕಲಾಪದ ವೇಳೆ ಹಾಜರಾದ ಆದೀಶ್ ಸಿ. ಅಗರವಾಲ್, ತನ್ನ ಅರ್ಜಿಯನ್ನು ಪರಿಗಣಿಸುವಂತೆ ಮನವಿ ಮಾಡಿದರು.
CJI DY Chandrachud to Adish Aggarwala in the electoral bonds case#ElectoralBondsCase #ElectoralBonds pic.twitter.com/z3Stx4TLdh
— Bar & Bench (@barandbench) March 18, 2024
ಈ ವೇಳೆ ಗರಂ ಆದ ಸುಪ್ರಿಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, “ನೀವು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರು. ಅಲ್ಲದೇ, ನೀವು ಸುಪ್ರೀಂ ಕೋರ್ಟ್‌ನ ಬಾರ್ ಅಸೋಸಿಯೇಷನ್‌ನ ಅಧ್ಯಕ್ಷರು. ನೀವು ಪತ್ರ ಬರೆದಿದ್ದನ್ನು ನಾನು ಗಮನಿಸಿದ್ದೇನೆ. ಇಲ್ಲಿ ಏನೆಲ್ಲ ಕಾರ್ಯವಿಧಾನ ನಡೆದಿದೆ ಎಂಬುದು ನಿಮಗೂ ತಿಳಿದಿದೆ. ನೀವು ಪತ್ರ ಬರೆದಿರುವುದು ಪ್ರಚಾರಕ್ಕೆಂದು ನಮಗೆ ಗೊತ್ತಿದೆ. ಈ ಬಗ್ಗೆ ನಾನೇನೂ ಹೆಚ್ಚು ಹೇಳುವುದಿಲ್ಲ. ನನ್ನನ್ನು ಹೆಚ್ಚೇನೂ ಹೇಳುವಂತೆ ಮಾಡಬೇಡಿ. ಅದರಿಂದ ನಿಮಗೂ ಕೂಡ ಅಸಹ್ಯ ಎನಿಸಬಹುದು” ಎಂದು ಹೇಳುವ ಮೂಲಕ ಅವರ ಅರ್ಜಿಯನ್ನು ಮೂಲೆಗೆ ತಳ್ಳಿದರು.
ರಾಷ್ಟ್ರಪತಿಗೆ ಪತ್ರ ಬರೆದಿದ್ದ ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷ
ರಾಜಕೀಯ ಪಕ್ಷಗಳಿಗೆ ವ್ಯಕ್ತಿಗಳು ಮತ್ತು ಸಂಸ್ಥೆಗಳು ನೀಡುವ ದೇಣಿಗೆ ಮತ್ತು ಈ ರೀತಿ ಹಣ ನೀಡಿದ ಮಂದಿಯ ಹೆಸರು ಮತ್ತು ಅವರು ನೀಡಿದ ಮೊತ್ತವನ್ನು ಗೌಪ್ಯವಾಗಿಡುವ ಕೇಂದ್ರ ಸರ್ಕಾರದ ‘ಚುನಾವಣಾ ಬಾಂಡ್ ಯೋಜನೆ’ಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಕಳೆದ ಫೆ.15ರಂದು ರದ್ದುಗೊಳಿಸುವ ಮೂಲಕ ಐತಿಹಾಸಿಕ ತೀರ್ಪು ನೀಡಿತ್ತು. ಈ ತೀರ್ಪಿನ ವೇಳೆ ಸುಪ್ರೀಂಕೋರ್ಟ್, ಇದು ‘ಅಸಂವಿಧಾನಿಕ’ ಎಂದು ಕೂಡ ಉಲ್ಲೇಖಿಸಿತ್ತು. ಅಲ್ಲದೇ, ಎಲ್ಲ ವಿವರಗಳನ್ನು ಎಸ್‌ಬಿಐ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ತಿಳಿಸಿತ್ತು.
ಈ ತೀರ್ಪಿನ ಬಳಿಕ, ಈ ತೀರ್ಪನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ಗೆ ಸೂಚಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್ ವಕೀಲರ ಸಂಘದ (ಎಸ್‌ಸಿಬಿಎ) ಅಧ್ಯಕ್ಷ ಆದೀಶ್ ಸಿ. ಅಗರವಾಲ್, ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದರು. ಅಲ್ಲದೇ, ಸಿಜೆಐ ಅವರಿಗೂ ಪತ್ರವನ್ನು ಕಳುಹಿಸಿದ್ದರು.
ಈ ಪತ್ರದಲ್ಲಿ, ವಿವಿಧ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ಕಾರ್ಪೊರೇಟ್ ಸಂಸ್ಥೆಗಳು, ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸುವುದರಿಂದ ಅವರು ಬಲಿಪಶುಗಳಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದರು.
“ದೇಣಿಗೆ ನೀಡಿದವರ ಹೆಸರು ಮತ್ತು ಅವರು ವಿವಿಧ ರಾಜಕೀಯ ಪಕ್ಷಗಳಿಗೆ ನೀಡಿದ ಮೊತ್ತವನ್ನು ಬಹಿರಂಗಪಡಿಸಿದರೆ, ಅವರಿಂದ ಕಡಿಮೆ ದೇಣಿಗೆ ಪಡೆದ ಪಕ್ಷಗಳು ಕಿರುಕುಳ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ದೇಣಿಗೆ ಪಡೆಯುವಾಗ ಹೆಸರು ಬಹಿರಂಗಪಡಿಸುವುದಿಲ್ಲ ಎಂಬ ಮಾತು ಕೊಡಲಾಗಿತ್ತು. ಹೆಸರು ಬಹಿರಂಗಪಡಿಸಿದರೆ ವಚನ ಭಂಗ ಮಾಡಿದಂತೆ ಆಗುತ್ತದೆ” ಎಂದಿದ್ದರು.
ಇದನ್ನು ಓದಿದ್ದೀರಾ? ಚುನಾವಣಾ ಬಾಂಡ್ | ಯಾವುದನ್ನೂ ಮುಚ್ಚಿಡದೆ ಎಲ್ಲ ಮಾಹಿತಿ ಬಹಿರಂಗಗೊಳಿಸಿ: SBIಗೆ ಸುಪ್ರೀಂ ಕೋರ್ಟ್ ತಪರಾಕಿ
ಇಡೀ ವಾದ ಪ್ರತಿವಾದ ಪ್ರಕ್ರಿಯೆಯನ್ನು ಮತ್ತೊಮ್ಮೆ ಅಲಿಸುವಂತೆ ಸುಪ್ರೀಂ ಕೋರ್ಟ್‌ಗೆ ಸೂಚಿಸಬೇಕು. ಹಾಗಾದಲ್ಲಿ ‘ದೇಶದ ಸಂಸತ್ತು, ರಾಜಕೀಯ ಪಕ್ಷಗಳು, ಕಾರ್ಪೊರೇಟ್ ಸಂಸ್ಥೆಗಳು ಮತ್ತು ಸಾಮಾನ್ಯ ಪ್ರಜೆಗಳಿಗೆ’ ಪರಿಪೂರ್ಣ ನ್ಯಾಯ ದೊರೆತಂತೆ ಆಗಲಿದೆ ಎಂದು ತಿಳಿಸಿದ್ದರು.
