ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ದೆಹಲಿಯಲ್ಲಿ ನಡೆಯುತ್ತಿರುವ ‘ಕಾಕ್‌ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದ್ದು, ಬಿಕ್ಕಟ್ಟು ಶಮನಕ್ಕಾಗಿ ಕೇಂದ್ರ ಸರ್ಕಾರ ನೀಡಿದ ನಾಲ್ಕನೇ ಆಹ್ವಾನವನ್ನೂ ಪ್ರತಿಭಟನಾಕಾರರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರ ನಿವಾಸ ಅಥವಾ ಕಚೇರಿಯಲ್ಲಿ ಮಾತುಕತೆ ನಡೆಸಲು ಸಿಜೆಪಿ ನಾಯಕರು ನಿರಾಕರಿಸಿದ್ದು, ನಾಳೆ (ಜು.24) ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಹಾಗೂ ಜೆ.ಪಿ. ನಡ್ಡಾ ಅವರು ಗುರುವಾರ ಜಂಟಿಯಾಗಿ ಮಾತುಕತೆಯ ಪ್ರಸ್ತಾಪ ಮುಂದಿಟ್ಟಿದ್ದಾರೆ. “ಬುಧವಾರ ಮಧ್ಯಾಹ್ನದಿಂದ ಈವರೆಗೆ ಮಾತುಕತೆಗೆ ಬರುವಂತೆ ಸಿಜೆಪಿ ಪ್ರತಿನಿಧಿಗಳಿಗೆ ನಾಲ್ಕು ಬಾರಿ ಅಧಿಕೃತ ಪ್ರಸ್ತಾವನೆಗಳನ್ನು ಕಳುಹಿಸಲಾಗಿದೆ. ಸರ್ಕಾರದ ಬಾಗಿಲು ಯಾವಾಗಲೂ ತೆರೆದಿರುತ್ತದೆ. ಯುವಮಿತ್ರರು ತಮಗೆ ಅನುಕೂಲವಾಗುವ ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಲ್ಲಿ ಮಾತುಕತೆಗೆ ಬರಬಹುದು. ನಾವಿಲ್ಲಿ ಪ್ರತಿಷ್ಠೆಯ ಪ್ರಶ್ನೆ ಮಾಡುತ್ತಿಲ್ಲ,” ಎಂದು ಡಾ. ಜಿತೇಂದ್ರ ಸಿಂಗ್ ಮನವಿ ಮಾಡಿದ್ದಾರೆ. ಮಾತುಕತೆಯ ವೇಳೆ ತಾವೂ ಹಾಗೂ ಜೆ.ಪಿ. ನಡ್ಡಾ ಅವರು ಉಪಸ್ಥಿತರಿರುವುದಾಗಿ ಅವರು ತಿಳಿಸಿದ್ದಾರೆ.
ಪಿಟಿಐ ಸುದ್ದಿಸಂಸ್ಥೆ ಪ್ರಕಾರ, ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಮಾತನಾಡಿ, “ಸಿಜೆಪಿ ಪ್ರತಿನಿಧಿಗಳು ತಮ್ಮ ನಿವಾಸ ಅಥವಾ ಕಚೇರಿಗೆ ಬಂದು ಮುಕ್ತವಾಗಿ ಚರ್ಚಿಸಬಹುದು, ಅವರಿಗೆ ಸ್ವಾಗತವಿದೆ,” ಎಂದು ಆಹ್ವಾನ ನೀಡಿದ್ದಾರೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಮತ್ತು ನೀಟ್ ಅಕ್ರಮದ ಹೊಣೆಗಾರಿಕೆ ಹೊರಬೇಕೆಂದು ಪಟ್ಟು ಹಿಡಿದಿರುವ ಪ್ರತಿಭಟನಾಕಾರರು, ಸರ್ಕಾರದ ಈ ಪ್ರಸ್ತಾವನೆಯನ್ನು ತಳ್ಳಿಹಾಕಿದ್ದಾರೆ. ಜೆ.ಪಿ. ನಡ್ಡಾ ಅವರ ನಿವಾಸ ಅಥವಾ ಕಚೇರಿಗೆ ತೆರಳಿ ತಾವು ಮಾತುಕತೆ ನಡೆಸುವುದಿಲ್ಲ ಎಂದು ಸಿಜೆಪಿ ನಾಯಕರು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಸರ್ಕಾರಕ್ಕೆ ಮಾತುಕತೆಯ ನೈಜ ಇಚ್ಛಾಶಕ್ತಿ ಇದ್ದರೆ, ಜಂತರ್ ಮಂತರ್‌ನಲ್ಲಿ ಅಥವಾ ಪ್ರತಿಭಟನಾ ಸ್ಥಳದ ಸಮೀಪದ ಯಾವುದಾದರೂ ‘ತಟಸ್ಥ ಸ್ಥಳದಲ್ಲಿ’ ಸಭೆ ನಡೆಸಬೇಕು ಎಂದು ಷರತ್ತು ವಿಧಿಸಿದ್ದಾರೆ. ಇದೇ ವೇಳೆ, 24ನೇ ತಾರೀಖಿನಂದು ದೇಶಾದ್ಯಂತ ಬೃಹತ್ ಪ್ರತಿಭಟನೆ ನಡೆಸುವುದಾಗಿ ಸಂಘಟನೆ ಘೋಷಿಸಿದೆ.
ಸಿಜೆಪಿ ಪ್ರತಿಭಟನೆಯ ಕಾವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯ ಪ್ರಮುಖ ವಾಣಿಜ್ಯ ಕೇಂದ್ರವಾದ ‘ಕನ್ನಾಟ್ ಪ್ಲೇಸ್’ (Connaught Place) ಗುರುವಾರ ಸಂಜೆ 6.30ಕ್ಕೇ ಸಂಪೂರ್ಣ ಬಂದ್ ಆಗಲಿದೆ. ಪ್ರತಿಭಟನೆಯ ತೀವ್ರತೆ ಹಾಗೂ ಕಾನೂನು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ನವದೆಹಲಿ ಮುನ್ಸಿಪಲ್ ಕೌನ್ಸಿಲ್ (NDMC) ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ನೀಡಿದ ಸಲಹೆಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ನವದೆಹಲಿ ವರ್ತಕರ ಸಂಘ (NDTA) ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಸಂಜೆ 6.30ರ ವೇಳೆಗೆ ಕನ್ನಾಟ್ ಪ್ಲೇಸ್‌ನ ಎಲ್ಲಾ ಅಂಗಡಿ-ಮುಂಗಟ್ಟುಗಳು, ವಾಣಿಜ್ಯ ಕಚೇರಿಗಳು ಹಾಗೂ ರೆಸ್ಟೋರೆಂಟ್‌ಗಳನ್ನು ಮುಚ್ಚುವಂತೆ ಸೂಚನೆ ನೀಡಿದೆ.





