ನಮ್ಮ ಪರೀಕ್ಷಾ ವ್ಯವಸ್ಥೆ ಅದೆಷ್ಟು ಭ್ರಷ್ಟವಾಗಿದೆ ಎಂಬುದನ್ನಿಂದು ಜಂತರ್ ಮಂತರ್ ಮುಂದೆ ವಿದ್ಯಾರ್ಥಿಗಳು ತಿನ್ನುತ್ತಿರುವ ಲಾಠಿ ಏಟು ಸಾರಿ ಹೇಳುತ್ತಿದೆ. ಇವತ್ತು ಉನ್ನತ ಮಟ್ಟದ ಹಂತದಲ್ಲಿಯೂ ಸಹ ನಕಲು ಮಾಡುವುದನ್ನು ಕ್ಷಮಿಸಲಾಗುತ್ತಿದೆ. ಹೀಗಾಗಿ ಪರೀಕ್ಷಾ ಮಂಡಳಿ, ಕಾಲೇಜು ಮತ್ತು ವಿ.ವಿ ಗಳು ನಡೆಸುವ ಪರೀಕ್ಷೆಗಳು ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ಅಳೆಯಲು ಸಾಧ್ಯವಾಗದೆ ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ.
ನಾನು ಬರೆದಿರುವ ಲೇಖನವನ್ನು ನೀವು ಎಂದಿಗೂ ಓದದೇ ಇರಬಹುದು ಅಥವಾ ಓದಬಹುದು. NEET-UG ಪರೀಕ್ಷೆ ರದ್ದಾದ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ವ್ಯವಸ್ಥೆಯಲ್ಲಿನ ವೈಫಲ್ಯದಿಂದ ದುಃಖಿತನಾಗಿದ್ದ ನನಗೆ ಭವಿಷ್ಯದಲ್ಲಿ ದೇಶವಾಸಿಗಳನ್ನು ಕಾಪಾಡಬೇಕಾದ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಮತ್ತು ಅವರುಗಳು ಮಾಡಿಕೊಂಡ ಆತ್ಮಹತ್ಯೆಯ ಸುದ್ದಿ ನನ್ನನ್ನು ಬೆಚ್ಚಿ ಬೀಳಿಸಿದೆ. ಇದರಿಂದಾಗಿ ದಿಗ್ಭ್ರಮೆಗೊಂಡಿದ್ದೇನೆ.
ಆದರೂ, ಅವರೊಂದಿಗೆ ಸಂಭಾಷಣೆ ನಡೆಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಹಾಗಂತ ನನಗೆ ಉತ್ತರ ಸಿಗದಿರಬಹುದು. ಆದರೆ, ಲೇಖನ ಓದುವವರಿಂದ ನಾನು ಪ್ರತಿಕ್ರಿಯೆ ಪಡೆಯುತ್ತೇನೆ. ಒಂದೊಮ್ಮೆ ಅವರಿಂದ ಅವರ ಪ್ರತಿಕ್ರಿಯೆಯಿಂದ ವ್ಯವಸ್ಥೆಯು ವಿಫಲಗೊಂಡಾಗ ಧೈರ್ಯ ಮತ್ತು ಆತ್ಮವಿಶ್ವಾಸದ ಬದಲು ಸ್ವಯಂ ವಿನಾಶವನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಯುವಜನರ ಪ್ರವೃತ್ತಿಯನ್ನು ತಡೆಯುವ ಉದ್ದೇಶವೂ ನನ್ನದಾಗಿದೆ.
ಮೇ 3 ರಂದು ನಡೆದಿದ್ದ ಮೂಲ ಪರೀಕ್ಷೆಯನ್ನು NTA ಮೇ 12 ರಂದು ರದ್ದುಗೊಳಿಸಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪದ ಮೇಲೆ ಹಾಗೂ ಪ್ರಸಾರವಾದ ಊಹಾ ಪತ್ರಿಕೆ ಮತ್ತು ಪ್ರಶ್ನೆ ಪತ್ರಿಕೆಯ ನಡುವಿನ ಅನುರೂಪತೆ ಗಮನಿಸಿದ ನಂತರ ಮರು ಪರೀಕ್ಷೆಯನ್ನು ಘೋಷಿಸಿತ್ತು.
ಮೇ 3 ರ ಪರೀಕ್ಷೆಯ ನಂತರ, ರಾಜಸ್ಥಾನದ ಸಿಕಾರ್ ತರಬೇತಿ ಕೇಂದ್ರಗಳಲ್ಲಿ ವಾಟ್ಸ್ಯಾಪ್ ಮತ್ತು ಇತರೆ ಬಗೆಯ ಮಾಧ್ಯಮಗಳ ಮೂಲಕ ಹಂಚಿಕೊಳ್ಳಲಾದ ಊಹಾ ಪತ್ರಿಕೆಯು ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಅನೇಕ ಪ್ರಶ್ನೆಗಳಿಗೆ ಬಹುತೇಕ ಹೊಂದಿಕೆಯಾಗಲಿವೆ ಎಂಬ ಆರೋಪ ಎದ್ದಿದ್ದವು.
ಸಿಕಾರ್ನ ರಸಾಯನಶಾಸ್ತ್ರ ಶಿಕ್ಷಕ ಶಶಿಕಾಂತ್ ಸುತಾರ್, ಅಧಿಕೃತ ಪರೀಕ್ಷಾ ಪತ್ರಿಕೆಯೊಂದಿಗೆ ಹೋಲಿಸಿದ ನಂತರ ಸೋರಿಕೆಯಾದ ಪ್ರಶ್ನೆಗಳ ಪ್ರಸರಣದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸುಮಾರು 140 ಪ್ರಶ್ನೆಗಳು ಅದು ಹೇಗೆ ಹೊಂದಿಕೆಯಾಗುತ್ತವೆ ಎಂದು ಪ್ರಶ್ನಿಸಿದ್ದರು. ಮೊದಲಿಗೆ ರಾಜಸ್ಥಾನ ಪೊಲೀಸ್ ವಿಶೇಷ ಕಾರ್ಯಾಚರಣೆ ಗುಂಪು ತನಿಖೆಯನ್ನು ಪ್ರಾರಂಭಿಸಿತಾದರೂ, ಹಲವರನ್ನು ಬಂಧಿಸಿದ ನಂತರ ಪ್ರಕರಣವನ್ನು ಕೇಂದ್ರ ತನಿಖಾ ದಳ, ಸಿಬಿಐಗೆ ವಹಿಸಲಾಗಿದೆ.
2026 ಮೇ 12 ರಂದು, ಎನ್.ಟಿ.ಎ ಪರೀಕ್ಷೆಯನ್ನು ಅಧಿಕೃತವಾಗಿ ರದ್ದುಗೊಳಿಸಿ ಮರು ಪರೀಕ್ಷೆ ನಡೆಸಲಾಗುವುದೆಂದು ಘೋಷಿಸಿತು. ಜೊತೆಗೆ ವಿದ್ಯಾರ್ಥಿಗಳು ಪಾವತಿಸಿರುವ ಶುಲ್ಕವನ್ನು ಹಿಂತಿರುಗಿಸಿ. ಹೊಸ ನೋಂದಣಿ ಅಥವಾ ಹೆಚ್ಚುವರಿ ಶುಲ್ಕಗಳನ್ನು ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.
ಈಗ ನನಗಿರುವ ಕೋಪ ಸೋರಿಕೆಯಾದ ಪ್ರಶ್ನೆಪತ್ರಿಕೆಯ ಬಗ್ಗೆ ಅಲ್ಲ. ಬದಲಿಗೆ ನ್ಯಾಯ, ಅರ್ಹತೆ ಮತ್ತು ಸಮಾನ ಅವಕಾಶದ ಭರವಸೆ ನೀಡಿದ ಸಂಸ್ಥೆಗಳಿಂದ ಆಗಿರುವ ದ್ರೋಹದ ಬಗ್ಗೆ ಬೇಸರವಿದೆ. ಮುಖ್ಯವಾಗಿ, ದೆಹಲಿಯಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಗೂ ದುಃಖವಿದೆ.
ಹೌದು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತೊಮ್ಮೆ ದೇಶವನ್ನು ಬೆಚ್ಚಿಬೀಳಿಸಿದೆ. ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಕೊಡಿಸುವ ಭರವಸೆ ಇಟ್ಟ ಪರೀಕ್ಷೆಯಲ್ಲಿ ರಾಜಿ ಮಾಡಿಕೊಳ್ಳುತ್ತಿರುವುದು ಇದೇ ಮೊದಲಲ್ಲ. 2024ರಲ್ಲಿ ಮತ್ತು ಇದೀಗ 2026ರಲ್ಲಿ ಇದೇ ಬಗೆಯ ಘಟನೆ ಜರುಗಿದೆ.
2026ರ ನೀಟ್, ಯುಜಿ ಪರೀಕ್ಷೆಯನ್ನು ರದ್ದುಗೊಳಿಸಲು ಸರ್ಕಾರ ನಿರ್ಧಾರವನ್ನು ತೆಗೆದುಕೊಂಡಿತಾದರೂ, ಅದು ಪರಿಸ್ಥಿತಿಯನ್ನು ಸುಧಾರಿಸುವುದಿಲ್ಲ. ಕಾರಣ, ಪರೀಕ್ಷೆಗಾಗಿ ಎಲ್ಲವನ್ನೂ ತ್ಯಾಗ ಮಾಡಿದ ಲಕ್ಷಾಂತರ ವಿದ್ಯಾರ್ಥಿಗಳ ಕಠಿಣ ಪರಿಶ್ರಮವನ್ನು ತಿಂದು ಹಾಕಿದೆ.
ಇದು ಎಂದೆಂದಿಗೂ ಉದ್ಭವಿಸಬಾರದ ಪರಿಸ್ಥಿತಿ ಎಂಬುದನ್ನು ಮರೆಯಬಾರದು. ನನಗೆ ಗೊತ್ತು, ನೀಟ್ ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕಿನಲ್ಲಿ ಎದುರಾಗುವ ಪ್ರಮುಖ ಪರೀಕ್ಷೆ. ಅಲ್ಲದೆ, ಮಧ್ಯಮ ವರ್ಗದ ಜನರ ಭರವಸೆ ಮತ್ತು ಆಕಾಂಕ್ಷೆಗಳನ್ನು ಹೊತ್ತಿದೆ. ಮುಖ್ಯವಾಗಿ ದೇಶವಾಸಿಗಳ ಆರೋಗ್ಯ ಕಾಪಾಡಲು ಅಗತ್ಯವಿರುವ ಅರ್ಹ ವೈದ್ಯರನ್ನಿಂದು ಒದಗಿಸುತ್ತಿದೆ. ಕೆಲವು ಪೋಷಕರು ಲಕ್ಷಾಂತರ ಹಣವನ್ನು ವೈದ್ಯಕೀಯ ಶಿಕ್ಷಣಕ್ಕಾಗಿ ವ್ಯಯಿಸುತ್ತಿದ್ದಾರೆ . ಪ್ರಶ್ನೆ ಪತ್ರಿಕೆ ಸೋರಿಕೆಯಂತಹವು ಇಂತಹ ಭರವಸೆಯನ್ನು ನಾಶಪಡಿಸುತ್ತಿದೆ. ಇದರಿಂದಾಗಿ, ವಿದ್ಯಾರ್ಥಿ ಜೀವನ ಛಿದ್ರವಾಗುತ್ತಿದೆ. ಅವರ ಕುಟುಂಬಗಳು ಅನಿಶ್ಚಿತತೆ ಮತ್ತು ಹತಾಶೆಯಲ್ಲಿ ಸಿಲುಕುತ್ತಿವೆ. ಜೊತೆಗೆ ಭಾವನಾತ್ಮಕ ಆಘಾತ ಕೂಡ ದೊಡ್ಡದಾಗುತ್ತಿದೆ. ವಿದ್ಯಾರ್ಥಿಗಳು ಮತ್ತೆ ಮತ್ತೆ ನೀಟ್ ಪರೀಕ್ಷೆಗೆ ತಯಾರಿ ನಡೆಸುವ ಅನಿವಾರ್ಯತೆಯೂ ಇದೆ. ಹೀಗಾಗಿ ವಿದ್ಯಾರ್ಥಿ ಜೀವನದ ಅಮೂಲ್ಯ ಸಮಯವನ್ನು ಕಳೆದುಕೊಳ್ಳುತ್ತಿದ್ದಾರೆ.
ಇವೆಲ್ಲವೂ ಆಡಳಿತ ನಡೆಸುವವರಿಗೆ ಗೊತ್ತಿಲ್ಲ ಎಂದಿಲ್ಲ. ಅರಿವಿದ್ದರೂ ಇವೆಲ್ಲವೂ ಮೌನವಾಗಿ ನಡೆಯುತ್ತಿದೆ. ಇದಿಷ್ಟೇ ಅಲ್ಲದೆ, ಕರ್ನಾಟಕ ಲೋಕಸೇವಾ ಆಯೋಗ, ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪರೀಕ್ಷೆ, ಶಿಕ್ಷಕರ ನೇಮಕಾತಿ ಪರೀಕ್ಷೆ ಯೊಂದಿಗೆ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಗಳಲ್ಲಿ ಪದೇ ಪದೇ ಪ್ರಶ್ನೆ ಪತ್ರಿಕೆ ಸೋರಿಕೆ ಆಗುತ್ತಿರುವುದನ್ನು ಸಹ ನಿಲ್ಲಿಸಲಾಗುತ್ತಿಲ್ಲ.
ಇನ್ನೂ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ನಂತರ NEET 2026ನ್ನು ರದ್ದು ಪಡಿಸಿದ ನಂತರ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಇದರ ಬಗ್ಗೆ ಗಂಭೀರವಾಗಿ ಅತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಇಂತಹ ಹಗರಣ ದೇಶದ ಶಿಕ್ಷಣ ವ್ಯವಸ್ಥೆಯೊಳಗಿನ ನೈತಿಕ ಮತ್ತು ಸಾಂಸ್ಥಿಕ ಅವನತಿಯ ಕಠೋರ ಪ್ರತಿಬಿಂಬವಾಗಿದೆ.
ಇದೇನೆ ಇರಲಿ, ನಮ್ಮ ಪರೀಕ್ಷಾ ವ್ಯವಸ್ಥೆ ಅದೆಷ್ಟು ಭ್ರಷ್ಟವಾಗಿದೆ ಎಂಬುದನ್ನಿಂದು ಜಂತರ ಮಂಥರ ಮುಂದೆ ವಿದ್ಯಾರ್ಥಿಗಳು ತಿನ್ನುತ್ತಿರುವ ಲಾಠಿ ಏಟು ಸಾರಿ ಹೇಳುತ್ತಿದೆ. ಇವತ್ತು ಉನ್ನತ ಮಟ್ಟದ ಹಂತದಲ್ಲಿಯೂ ಸಹ ನಕಲು ಮಾಡುವುದನ್ನು ಕ್ಷಮಿಸಲಾಗುತ್ತಿದೆ. ಹೀಗಾಗಿ ಪರೀಕ್ಷಾ ಮಂಡಳಿ, ಕಾಲೇಜು ಮತ್ತು ವಿ.ವಿ ಗಳು ನಡೆಸುವ ಪರೀಕ್ಷೆಗಳು ವಿದ್ಯಾರ್ಥಿಗಳ ಕಾರ್ಯಕ್ರಮತೆಯನ್ನು ಅಳೆಯಲು ಸಾಧ್ಯವಾಗದೆ ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ. ಇದನ್ನು ಸರಿಪಡಿಸಲು ಸರ್ಕಾರ ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತಿಲ್ಲ. ಇದರಿಂದಾಗಿಯೇ ಕೆಲವೊಂದು ಸಂಸ್ಥೆಗಳು ತಮ್ಮದೇ ಆದ ಪ್ರವೇಶ ಪರೀಕ್ಷೆಗಳನ್ನು ಪರಿಚಯಿಸಿಕೊಂಡಿವೆ.
ನಮ್ಮ ದೇಶದಲ್ಲಿ ಲಕ್ಷಾಂತರ ಯುವವಿದ್ಯಾರ್ಥಿಗಳು ತಮ್ಮ ಜೀವಮಾನದ ಬಹು ದೊಡ್ಡ ಕನಸನ್ನು ನನಸು ಮಾಡಿಕೊಳ್ಳಲು ನಿದ್ದೆಗೆಟ್ಟು ಸಿದ್ಧರಾಗುತ್ತಾರೆ. ಇದು ಎಷ್ಟರ ಮಟ್ಟಿಗೆ ಎಂದರೆ, ದೇಶದ ಪ್ರತಿಯೊಂದು ಕುಟುಂಬ ಬಯಸುವ ವರ್ಷಗಳ ಕಾಲದ ತ್ಯಾಗ, ಕಠಿಣ ಪರಿಶ್ರಮ, ತರಬೇತಿ ತರಗತಿಗಳು, ನಿದ್ದೆಯಿಲ್ಲದ ರಾತ್ರಿಗಳನ್ನು ಮತ್ತು ಭಾವನಾತ್ಮಕ ಒತ್ತಡವನ್ನು ಅನುಭವಿಸಿರುತ್ತದೆ. ಇದಕ್ಕಾಗಿ ಪೋಷಕರು ಕೂಡಿಟ್ಟ ತಮ್ಮ ಜೀವಮಾನದ ಉಳಿತಾಯವನ್ನು ಹೂಡಿಕೆ ಮಾಡುತ್ತಾರೆ. ತರಬೇತು ಪಡೆಯುವಾಗ, ವಿದ್ಯಾರ್ಥಿಗಳು ಹಬ್ಬ, ರಜಾದಿನ ಮತ್ತು ಸಾಮಾಜಿಕ ಜೀವನವನ್ನು ಸಹ ತ್ಯಜಿಸುತ್ತಾರೆ. ಹೀಗೆ ಪಡುವ ಪ್ರಯತ್ನ ತಮ್ಮ ಭವಿಷ್ಯವನ್ನು ನ್ಯಾಯಯುತವಾಗಿ ನಿರ್ಧರಿಸುತ್ತವೆ ಎಂಬ ಭರವಸೆಯನ್ನು ಹೊತ್ತಿರುತ್ತಾರೆ.
ನನ್ನ ಮಗ ಮನೋಜ್ ಕೂಡ ಇಂತಹದ್ದೇ ಪ್ರಕ್ರಿಯೆಯ ಮೂಲಕ ವಿಫಲಗೊಂಡಿದ್ದರಿಂದ, ವಿದ್ಯಾರ್ಥಿಗಳು ಎದುರಿಸಬಹುದಾದ ಒತ್ತಡ ಮತ್ತು ಆತಂಕದ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ.
ಇಂತಹ ಪರೀಕ್ಷಾ ಪತ್ರಿಕೆಗಳನ್ನು ಯಾವುದೇ ಶ್ರಮ ಇಲ್ಲದೆ, ಸುಲಭವಾಗಿ ಪಡೆದಿದ್ದು ನಿಜಕ್ಕೂ ಅನಮಾನಕರ ಸಂಗತಿ. ಇಂತಹ ಕೃತ್ಯಗಳು ನಡೆಯುವ ಮೂಲಕ ವ್ಯವಸ್ಥೆಯ ಸಿಂಧುತ್ವದ ಬಗ್ಗೆ ಗಂಭೀರ ಅನುಮಾನಗಳನ್ನು ಸೃಷ್ಟಿಸಿದೆ. ಹೀಗಾಗಿಯೇ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಪೋಷಕರು ಮತ್ತು ವಂಚನೆಗೊಳಗಾದ ವಿದ್ಯಾರ್ಥಿಗಳು ದೆಹಲಿಗೆ ದಂಡೆತ್ತಿ ಹೊಗಿದ್ದಾರೆ.
ನನ್ನದೊಂದು ಪ್ರಶ್ನೆ ಇದೆ. ಅದು ವಿದ್ಯಾರ್ಥಿಗಳೇ, ನಿಮ್ಮದಲ್ಲದ ತಪ್ಪಿಗೆ ನೀವು ನಿಮ್ಮ ಜೀವನವನ್ನು ಕೊನೆಗೊಳಿಸಲು ಕಾರಣವೇನು? ನಿಮ್ಮ ಬಹು ವರ್ಷಗಳ ಕಠಿಣ ಪರಿಶ್ರಮ ವ್ಯರ್ಥವಾಯಿತು ಎಂಬುದು ನಮಗೆಲ್ಲರಿಗೂ ಅರ್ಥವಾಗಿದೆ. ನಿಮ್ಮ ಕನಸುಗಳು ಚೂರುಚೂರಾಗಿ ಛಿದ್ರವಾಗುತ್ತಿದೆ. ಇದ್ದಕ್ಕಿದ್ದಂತೆ ನೀವು ಕತ್ತಲೆಯಲ್ಲಿ ಸಿಲುಕಿಕೊಂಡಂತೆ ಭಾಸವಾಗುತ್ತಿದೆಯೇ? ನೀಟ್ ನಿಂದಾಚೆಗೂ ಬದುಕಿಲ್ಲ ಎಂದು ನಿಮಗೆ ಯಾರು ಹೇಳಿದರು? ಇದೇ ಬದುಕಿನ ಪಯಣದ ಅಂತ್ಯ ಎಂದು ಯಾರು ನಿಮ್ಮ ಮನವೊಲಿಸಿದರು?
ನಾನು ಆಗಾಗ್ಗೆ ಆತ್ಮಹತ್ಯೆ ಮಾಡಿಕೊಳ್ಳುವುದರ ಹಿಂದಿನ ತರ್ಕವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇನೆ. ಅಂಕಿಅಂಶಗಳು ಸೂಚಿಸುವಂತೆ ಪ್ರತಿ ವರ್ಷ ವಿಶ್ವಾದ್ಯಂತ ಸುಮಾರು 14 ರಿಂದ 15 ಮಿಲಿಯನ್ ಆತ್ಮಹತ್ಯಾ ಪ್ರಯತ್ನಗಳು ನಡೆಯುತ್ತಿವೆ. ಅವುಗಳಲ್ಲಿ ಸುಮಾರು 7,20,000 ಸಾವುಗಳು ಜರಗುವ ಮೂಲಕ ಕೊನೆಗೊಳ್ಳುತ್ತಿವೆ.
ಜೀವನದ ಪಯಣ ದೊಡ್ಡದಿರುವಾಗ ಸಾವನ್ನು ಆರಿಸಿಕೊಳ್ಳುವುದು ಎಂದಿಗೂ ಉಚಿತವಲ್ಲ . ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ “ಯಶಸ್ಸು” ಗಳಿಸಿದರೆಂದು ಹೇಳಲು ಹೋಗುವುದಿಲ್ಲ. “ಭವಿಷ್ಯ” ಕತ್ತಲೆಯಾಗಿ ಕಾಣಿಸಿಕೊಂಡರೂ, ಅದನ್ನು ಎದುರಿಸಿ, ಜೀವನದ ಹೊರೆಗಳನ್ನು ಸಹಿಸಿಕೊಳ್ಳುವುದನ್ನು ಕಲಿಯಬೇಕು. “ಸಾವು” ಸುಲಭವೆಂದು ಅದರ ಮೊರೆ ಹೋಗಬೇಡಿ. ಕಾಲ ಕಳೆದಂತೆ, ಭವಿಷ್ಯ ಮತ್ತಷ್ಟು ಕಠಿಣ ಹಾದಿಯಿಂದ ಕೂಡಿರಬಹುದು. ಹಾಗಂತ ಹತಾಶೆಯಲ್ಲಿ ಮುಳಗಬೇಡಿ. ಸದ್ಯ ನೀವು ನಡೆಸುತ್ತಿರುವ ಹೋರಾಟಗಳೇ ನಿಮ್ಮನ್ನು ಬಲಿಷ್ಠ ಮತ್ತು ಬುದ್ಧಿವಂತ ಮನುಷ್ಯರನ್ನಾಗಿ ರೂಪಿಸುತ್ತವೆ.
ಗೊತ್ತಿರಲಿ, ನೀಟ್-ಯುಜಿ 2024, ಯುಜಿಸಿ-ನೆಟ್ 2024 ಮತ್ತು ಜೆಇಇ-ಮೇನ್ 2021ರಲ್ಲಿಯೂ ಪ್ರಶ್ನೆಪತ್ರಿಕೆ ಸೋರಿಕೆಯ ಗಂಭೀರ ಸಮಸ್ಯೆಗಳು ಕಂಡುಬಂದಿತ್ತು. 2024ರ ಪ್ರಶ್ನೆಪತ್ರಿಕೆ ಸೋರಿಕೆಯ ಪ್ರಕರಣವನ್ನು ಕೇಂದ್ರ ತನಿಖಾ ದಳ ತನಿಖೆ ನಡೆಸಿತ್ತಾದರೂ. ಇದುವರೆಗೂ, ತಪ್ಪಿತಸ್ಥರಿಗೆ ಏನಾಗಿದೆ. ಎಷ್ಟು ಜನರಿಗೆ ಶಿಕ್ಷೆಯನ್ನು ನೀಡಲಾಗಿದೆ ಎಂಬುದರ ಬಗ್ಗೆ ಪೋಷಕರು ಮತ್ತು ಸಾರ್ವಜನಿಕರಿಗೂ ಗೊತ್ತಿಲ್ಲ. 2026ರ ಪ್ರಶ್ನೆಪತ್ರಿಕೆ ಸೋರಿಕೆಗೂ ಸಿಬಿಐ ಮತ್ತೆ ಅದೇ ಕಸರತ್ತು ನಡೆಸುತ್ತಿದೆ. ಮಾಧ್ಯಮ ವರದಿಗಳು ಇದರ ಹಿಂದಿರುವ ಪಿತೂರಿಯನ್ನು ಸ್ವಲ್ಪ ಮಟ್ಟಿಗೆ ಬಯಲು ಮಾಡಿವೆ.
ಇವೆಲ್ಲವನ್ನೂ ಕಂಡ ನಂತರವಾದರೂ, ಶಾಲೆಯಿಂದ ಕಾಲೇಜಿನವರೆಗೂ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ವಿಪರ್ಯಾಸ ಎಂದರೆ, ಇವತ್ತು ವೃತ್ತಿಗಳಿಂದು, ವೃತ್ತಿಪರರಿಂದಾಗಿಯೇ ಧಕ್ಕೆಗೊಳಗಾಗುತ್ತಿದೆ. ಬಹುಪಾಲು ನಿಯಂತ್ರಕ ಸಂಸ್ಥೆಗಳು ವಿಶ್ವಾಸಾರ್ಹತೆಯ ಬಿಕ್ಕಟ್ಟನ್ನು ಎದುರಿಸುತ್ತಿದೆ.
ಇದೇನೆ ಇರಲಿ, 2026ರ ಮೇ 3ಕ್ಕೆ ನಿಗದಿಯಾಗಿದ್ದ ನೀಟ್ ಪರೀಕ್ಷಾ ಪತ್ರಿಕೆ ಸೋರಿಕೆಯಾಗಿ, ವಿದ್ಯಾರ್ಥಿಗಳನ್ನು ಮಾತ್ರವಲ್ಲದೆ ಪೋಷಕರನ್ನು ಆತಂಕಕ್ಕೆ ದೂಡಿದೆ. ಹೀಗಾಗಿಯೇ ದೆಹಲಿಯ ಜಂತರ್ ಮಂತರ್ ಮುಂದೆ ವಾಂಗ್ ಚುಕ್ ಮುಂದಾಳತ್ವದಲ್ಲಿ ಸೇರಿದ್ದಾರೆ. ಪೊಲೀಸರಿಂದ ಲಾಠಿ ಪ್ರಹಾರಕ್ಕೂ ಒಳಗಾಗಿದ್ದಾರೆ. ಇದರ ಬಗ್ಗೆ ಮತ್ತೊಮ್ಮೆ ಅಭಿವ್ಯಕ್ತಿಸುವುವೆ. 22.7ಲಕ್ಷ ಯುವ ಆಕಾಂಕ್ಷಿಗಳ ಸ್ಥಿತಿ ನಿಜಕ್ಕೂ ಆಘಾತಕಾರಿಯಾಗಿದೆ. ದೆಹಲಿಯಲ್ಲಿ, ಅನ್ನ, ನೀರು ನಿದ್ರೆ ಬಿಟ್ಟು ಪ್ರತಿಭಟನೆಯಲ್ಲಿ ತೊಡಗಿಕೊಂಡವರು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆದು ಓದುವ ಕನಸನ್ನು ಊಹಿಸದವರು. ಪಾಪದ ಪೋಷಕರು, ತಮ್ಮ ಮಕ್ಕಳು ಬೋಧನಾ ಕೇಂದ್ರದ ಮೂಲಕ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳನ್ನು ಬರೆದು ಪರಿಣತಿ ಪಡೆಯಲೆಂಬ ಮಹಾದಾಸೆ ಹೊತ್ತಿರುತ್ತಾರೆ.
ನಮ್ಮಲ್ಲಿನ ನೀಟ್-ಯುಜಿ ವಿಶ್ವದ ಅತಿದೊಡ್ಡ ಪ್ರವೇಶ ಪರೀಕ್ಷೆಗಳಲ್ಲಿ ಒಂದಾಗಿದೆ. ನೀಟ್-ಯುಜಿ 2026ನ್ನು 551ಕ್ಕೂ ಹೆಚ್ಚು ನಗರಗಳಲ್ಲಿ ಮತ್ತು 14 ಕಡೆ ವಿದೇಶಗಳಲ್ಲಿ, 5,400 ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿದೆ. ಸುಮಾರು 22.8 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡರೆ, 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ನಮ್ಮಲ್ಲಿ 800 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಲ್ಲಿ 1.28 ಲಕ್ಷಕ್ಕೂ ಅಧಿಕ ಎಂಬಿಬಿಎಸ್ ಸೀಟುಗಳಿವೆ. ಇದಲ್ಲದೆ, ದಂತ ಮತ್ತು ಆಯುಷ್ ಕಾಲೇಜುಗಳಲ್ಲಿ ಸಾವಿರಾರು ಸೀಟುಗಳಿವೆ. ದೇಶವಾಸಿಗಳನ್ನು ಕಾಪಾಡಬೇಕಾದ ಆರೋಗ್ಯ ರಕ್ಷಣಾ ಕಾರ್ಯಪಡೆ ಇದೇ ಪರೀಕ್ಷೆಯ ಮೂಲಕ ರಚನೆಯಾಗುತ್ತದೆ. ನೀಟ್ ನಂತಹ ಪರೀಕ್ಷೆ ಪ್ರಾಮಾಣಿಕತೆ, ಅರ್ಹತೆ, ಶಿಸ್ತು ಮತ್ತು ಸಮಾನ ಅವಕಾಶಗಳನ್ನು ಪ್ರತಿಬಿಂಬಿಸಬೇಕು. ವಿದ್ಯಾರ್ಥಿಗಳು ಕೂಡ ತಾವು ಪಡುವ ಪ್ರಯತ್ನಗಳಿಗೆ ಮೌಲ್ಯವಿದೆ ಎಂಬುದನ್ನು ನಂಬಬೇಕು.
ಇತ್ತೀಚಿನ ಕೆಲವು ವರ್ಷಗಳಿಂದ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ವಂಚನೆಗೆ ಸಂಬಂಧಿಸಿದ ಆರೋಪಗಳು ಪದೇ ಪದೇ ಕಳವಳಗಳನ್ನು ಹುಟ್ಟುಹಾಕಿರುವುದು ಸುಳ್ಳಲ್ಲ. ಸೋರಿಕೆ ಪ್ರಕರಣ ಸಾಬೀತಾಗಿರಲಿ ಅಥವಾ ತನಿಖೆ ನಡೆಯುತ್ತಿರಲಿ, ಸಾರ್ವಜನಿಕರ ನಂಬಿಕೆಯನ್ನಂತೂ ಹಾನಿ ಮಾಡಿದೆ. ಅದರಲ್ಲೂ ಪೊಲೀಸರ ದರ್ಪ ದೌರ್ಜನ್ಯ ವಿದ್ಯಾರ್ಥಿಗಳ ಭಾವನಾತ್ಮಕತೆಗೆ ಬಹುದೊಡ್ಡ ಹಾನಿಯಾಗಿದೆ. ಮಕ್ಕಳ ಮೇಲಿನ ಹಲ್ಲೆ ಕಂಡು ಪೋಷಕರು ಸಹ ಒಳಗೊಳಗೆ ಮೌನ ರೋಧನೆ ಅನುಭವಿಸುತ್ತಿದ್ದಾರೆ.
ಇನ್ನೂ ವೈದ್ಯಕೀಯ ಪದವಿಗೆ ತಯಾರಿ ನಡೆಸಬೇಕಾದ ವಿದ್ಯಾರ್ಥಿ ವೈದ್ಯಕೀಯ ಪದವಿ ಆಭ್ಯಸಿಸುವ ಮೊದಲೇ, ಖಿನ್ನತೆಯ ಭಾವನೆಯನ್ನು ಹೊರಬಾರದು. ಅಲ್ಲದೆ ವ್ಯವಸ್ಥೆಯ ಮೇಲೆ ಸಹ ನಂಬಿಕೆ ಕಳೆದಿದುಕೊಳ್ಳಬಾರದು.
ನಿಜ, ಇಷ್ಟೊಂದು ದೊಡ್ಡ ಪ್ರಮಾಣದ ಪರೀಕ್ಷೆಯನ್ನು ನಡೆಸುವುದು ಸುಲಭವಲ್ಲ. ಸಾವಿರಾರು ಕೇಂದ್ರಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಬೇಕೆಂದರೆ, ಅದಕ್ಕೆ ಅಪಾರವಾದ ಸಮನ್ವಯ, ಮಾನವಶಕ್ತಿ ಮತ್ತು ಭದ್ರತೆಯ ಅಗತ್ಯವಿರುತ್ತದೆ. ಪರೀಕ್ಷೆ ಸುಗಮವಾಗಿ ನಡೆಯಬೇಕೆಂದು ಪ್ರಮಾಣಿಕವಾಗಿ ತಮ್ಮ ಕೈಲಾದಷ್ಟು ಹತ್ತಾರು ಅಧಿಕಾರಿಗಳು, ಶಿಕ್ಷಕರು, ಆಡಳಿತಾಧಿಕಾರಿಗಳು ಶ್ರಮಿಸಿರುತ್ತಾರೆ. ಅವರ ಪ್ರಯತ್ನಗಳನ್ನು ನಾನಿಲ್ಲಿ ಮರೆಯುತ್ತಿಲ್ಲ.
ಆದರೂ, ನಮ್ಮ ದೇಶ ಐಟಿ ರಾಷ್ಟ್ರ ನಮ್ಮಲ್ಲಿನ ಬ್ಯಾಂಕಿಂಗ್ ವ್ಯವಸ್ಥೆ, ಡಿಜಿಟಲ್ ಪಾವತಿ ವ್ಯವಸ್ಥೆ ಮತ್ತು ರಾಷ್ಟ್ರೀಯ ದತ್ತಸಂಚಯಗಳನ್ನು ಸುರಕ್ಷಿತವಾಗಿ ಇಡಬಹುದಾದರೆ. ಪರೀಕ್ಷಾ ವ್ಯವಸ್ಥೆಯನ್ನು ಸಹ ಸುಧಾರಿಸಬಹುದಾಗಿತ್ತು.
ವಿದ್ಯಾರ್ಥಿಗಳ ಉತ್ತರಗಳಲ್ಲಿನ ವೈಪರೀತ್ಯಗಳನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಶ್ಲೇಷಣೆಯನ್ನು ಸಹ ಬಳಸಬಹುದಾಗಿತ್ತು. ವಿದ್ಯಾರ್ಥಿಗಳ ಅಸಹಜ ಉತ್ತರಗಳ ಹೋಲಿಕೆಗಳನ್ನು ಕಂಡ ತಕ್ಷಣವೇ ತನಿಖೆಗೆ ಫ್ಲ್ಯಾಗ್ ಮಾಡಬಹುದಿತ್ತು. ಇದರಿಂದ ಸಂಘಟಿತ ವಂಚನೆ ಜಾಲಗಳನ್ನು ಮೊದಲೇ ಪತ್ತೆಹಚ್ಚಲು ಸಹಾಯ ಆಗುತ್ತಿತ್ತು. ಆಗ ವಿದ್ಯಾರ್ಥಿಗಳು ದೂರದ ದೆಹಲಿಯಲ್ಲಿ ಲಾಠಿಯೇಟಿಗೆ ಒಳಗಾಗುವುದು ತಪ್ಪುತ್ತಿತ್ತು.
ಇವತ್ತು ದೇಶದ ಉದ್ದಗಲ ಇರುವ ನೀಟ್ ಪರೀಕ್ಷಾ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ದೃಢೀಕರಣವನ್ನು ಬಲಪಡಿಸುವ ಮತ್ತು ಅದನ್ನು ಪ್ರಮಾಣೀಕರಿಸುವ ಅವಶ್ಯಕತೆಯಿದೆ. ಅಲ್ಲದೇ ಮುಖ ಗುರುತಿಸುವಿಕೆ, ಫಿಂಗರ್ ಪ್ರಿಂಟ್ ಸ್ಕಾನಿಂಗ್ ಮತ್ತು ಲೈವ್ ಪರಿಶೀಲನೆ ಮಾಡುವ ಅವಶ್ಯಕತೆ ಇದೆ. ಆಗ ವಿದ್ಯಾರ್ಥಿಗಳು ನಕಲಿ ಪ್ರವೇಶಾತಿಯನ್ನು ತಡೆಗಟ್ಟಬಹುದು. ಜೊತೆಗೆ ಪ್ರಶ್ನೆ ಪತ್ರಿಕೆಯ ಚಲನೆಯನ್ನು ಸಂಪೂರ್ಣವಾಗಿ ಎನ್ಕ್ರಿಪ್ಟ್ ಮಾಡಿರುವುದನ್ನು ಡಿಜಿಟಲ್ ಆಗಿ ಪತ್ತೆಹಚ್ಚಬಹುದನ್ನು ಸಹ ಖಚಿತಪಡಿಸಿಕೊಳ್ಳಬಹುದು.
ಇಷ್ಟಲ್ಲದೆ, ಮುದ್ರಣದಿಂದ ಹಿಡಿದು ಪತ್ರಿಕೆಗಳ ಸಾಗಣೆ ಸಂಗ್ರಹಣೆ ಮತ್ತು ವಿತರಣೆಯವರೆಗಿನ ಎಲ್ಲಾ ಹಂತಗಳನ್ನು ಸೂಕ್ತ ಹೊತ್ತಲ್ಲಿ ಡಿಜಿಟಲ್ ಆಗಿ ಟ್ರ್ಯಾಕ್ ಮಾಡುವಂತಾಗಬೇಕು.
ಇನ್ನೂ ಪರೀಕ್ಷಾ ಕೇಂದ್ರಗಳನ್ನು ಮೇಲ್ವಿಚಾರಣೆ ಮಾಡುವಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತದೆ. ಎಐ-ಸಕ್ರಿಯಗೊಳಿಸಿದ ಸಿಸಿಟಿವಿ ವ್ಯವಸ್ಥೆಗಳು ಅನುಮಾನಾಸ್ಪದ ಚಟುವಟಿಕೆಯನ್ನು ಪತ್ತೆ ಮಾಡಬಹುದು. ಇದರೊಂದಿಗೆ ಕೇಂದ್ರ ನಿಯಂತ್ರಣ ಕೊಠಡಿಯಿಂದ ನೇರ ಮೇಲ್ವಿಚಾರಣೆ ನಡೆಸಿದರೆ ಪಾರದರ್ಶಕತೆಯನ್ನು ಸಹ ಸುಧಾರಿಸಬಹುದು. ಪರೀಕ್ಷಾ ಸಂಸ್ಥೆಗಳಿಗೆ ಸೈಬರ್ ಭದ್ರತೆಯು ಆದ್ಯತೆಯಾಗಿರಬೇಕು. ಪ್ರತಿ ಪ್ರಮುಖ ರಾಷ್ಟ್ರೀಯ ಪರೀಕ್ಷೆಯ ಮೊದಲು ಬಲವಾದ ಸೈಬರ್ ಆಡಿಟ್ಗಳನ್ನು, ನೈತಿಕ ಹ್ಯಾಕಿಂಗ್ ಪರೀಕ್ಷೆಗಳನ್ನು ಮತ್ತು ಸ್ವತಂತ್ರ ತಂತ್ರಜ್ಞಾನ ವಿಮರ್ಶೆಗಳನ್ನು ಕಡ್ಡಾಯವಾಗಿ ಮಾಡಿರಬೇಕು.
ಇವೆಲ್ಲದಕಿಂತಲೂ, ನಮಗೆ ಸಾಂಸ್ಥಿಕ ಹೊಣೆಗಾರಿಕೆಯೂ ಬೇಕು. ಪರೀಕ್ಷಾ ಅಕ್ರಮಗಳ ಕುರಿತ ತನಿಖಾ ಪ್ರಕ್ರಿಯೆಯು ತ್ವರಿತ, ಪಕ್ಷಪಾತವಿಲ್ಲದ ಮತ್ತು ನ್ಯಾಯಯುತವಾಗಿರಬೇಕು. ವದಂತಿಗಳಿಂದ ಅವ್ಯವಸ್ಥೆ ಸೃಷ್ಟಿಯಾಗುವ ಬದಲು ಸಂಬಂಧಿಸಿದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಕ್ಷಣವೇ ತಲುಪಿಸಬೇಕು. ತಲುಪಿಸದಿದ್ದರೆ ವಿಳಂಬತೆಯು ಭೀತಿಯನ್ನು ಹೆಚ್ಚಿಸುತ್ತದೆ. ಪ್ರಶ್ನೆಪತ್ರಿಕೆಗಳು ಸೋರಿಕೆ ಆದಾಗ, ವ್ಯವಸ್ಥೆಯ ವಿರುದ್ಧದ ಕೃತ್ಯವನ್ನು ಪ್ರಚಾರ ಪಡಿಸಬೇಕು. ದುಷ್ಟರು ಸೋರಿಕೆ ಮಾಡುವುದರಿಂದ ಪ್ರಾಮಾಣಿಕ ವಿದ್ಯಾರ್ಥಿಗಳ ಅವಕಾಶಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಕಠಿಣ ಕಾನೂನು ಕ್ರಮವು ದುಷ್ಕೃತ್ಯಗಳಲ್ಲಿ ತೊಡಗಿರುವವರಲ್ಲಿ ಭಯವನ್ನು ಹುಟ್ಟುಹಾಕುತ್ತದೆ. ನಮ್ಮ ದೇಶವು ವಿಶಾಲ ಮತ್ತು ವೈವಿಧ್ಯಮಯ ರಾಷ್ಟ್ರ ನಮ್ಮಲ್ಲಿ ಕೌನ್ಸೆಲಿಂಗ್, ಮೇಲ್ವಿಚಾರಣೆ ಮತ್ತು ಪರೀಕ್ಷೆಗಳನ್ನು ನಡೆಸುವಲ್ಲಿ ಸಕ್ರಿಯ ಪಾತ್ರವನ್ನು ವಹಿಸಬೇಕು. ಮುಖ್ಯವಾಗಿ, ಮೂರೇ ಮೂರು ಗಂಟೆಗಳ ಪರೀಕ್ಷೆಯು ವಿದ್ಯಾರ್ಥಿಯ ಮೌಲ್ಯ ಅಥವಾ ಭವಿಷ್ಯವನ್ನು ಸಂಪೂರ್ಣವಾಗಿ ವ್ಯಾಖ್ಯಾನಿಸಬಾರದು.
ಇದೇನೆ ಇರಲಿ, ವರ್ಷದಿಂದ ವರ್ಷಕ್ಕೆ ಇಂತಹ ಅನೈತಿಕ ಮಾರ್ಗಗಳು ಗೋಚರಿಸುತ್ತಿದ್ದರೂ ತಪ್ಪಿತಸ್ಥರನ್ನು ಶಿಕ್ಷಿಸುವಲ್ಲಿ ನಮ್ಮ ವ್ಯವಸ್ಥೆ ಇನ್ನೂ ಸಫಲವಾಗಿಲ್ಲ. ಹೀಗಾಗಿಯೇ ತರಬೇತಿ ಸಂಸ್ಥೆಗಳ ಮೇಲಿನ ಅವಲಂಬನೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ಇದಲ್ಲದೆ, ನಮ್ಮಲ್ಲಿ ಸಾರ್ವಜನಿಕ ತೆರಿಗೆ ದುಡ್ಡಿನ ಮೇಲೆ ನಡೆಯುತ್ತಿರುವ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಕೊರತೆ ಇದೆ. ಹೀಗಾಗಿಯೇ ಖಾಸಗಿ ಶಾಲೆಗಳಿಂದು ತರಬೇತಿ ಉದ್ಯಮಗಳಾಗಿ ಬದಲಾಗುತ್ತಿವೆ. ನಮ್ಮವರು ಮರೆತಿರಬಹುದು, ಸ್ವಾತಂತ್ರ್ಯದ ನಂತರದ ಮೊದಲ ಎರಡು ಅಥವಾ ಮೂರು ದಶಕಗಳಲ್ಲಿ ಬಂದಪೀಳಿಗೆ ಅತಿಹೆಚ್ಚು ಬದ್ಧತೆ, ಕಕ್ಕುಲಾತಿ, ಆಸಕ್ತಿಯಿಂದ ಕೂಡಿತ್ತು. ಇವರ ಹಿಂದಿನ ತಲೆಮಾರಿನವರು ದಾಸ್ಯಮುಕ್ತರಾಗಲು ಅಪಾರವಾದ ತ್ಯಾಗ ಮತ್ತು ಯಾತನೆಗಳನ್ನು ಅನುಭವಿಸಿದ್ದನ್ನು ಮರೆತಿರಲಿಲ್ಲ. 1950 ಮತ್ತು 1960ರ ದಶಕದಲ್ಲಿ ಯುವಕರಾಗಿದ್ದವರು ಸರ್ಕಾರಗಳು ಘೋಷಿಸಿದ್ದ ಹಲವು ಬಗೆಯ ಪಿಂಚಣಿ ಯೋಜನೆಗಳನ್ನು ಸಹ ಅಪ್ಪಿಕೊಳ್ಳದೆ ಹಾಗೆಯೇ ಉಳಿದಿದ್ದರು.
ಆಗ ನಿಜಕ್ಕೂ ಈಗಿನಂತೆ ಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ಸೋರಿಕೆಯಾಗುವ ಆತಂಕ ಇರಲಿಲ್ಲ. ಟ್ಯೂಷನ್ಗಳನ್ನು ಮೂಲಭೂತ ಸೌಕರ್ಯಗಳೆಂದು ಪರಿಗಣಿಸಲಾಗುತ್ತಿತ್ತು. ಕ್ರಮೇಣ ತಲೆಮಾರುಗಳು ಬದಲಾದವು. ಗಾಂಧಿವಾದಿ ಮೌಲ್ಯಗಳು ಹಿನ್ನೆಲೆಗೆ ಸಾಗಿದವು, ಅಧಿಕಾರದ ರುಚಿ ಹಿಡಿದ ಚುನಾಯಿತ ಪ್ರತಿನಿಧಿಗಳು, ವಿನಾಯಿತಿಗಳನ್ನು ಹೊರತುಪಡಿಸಿ, ತಮ್ಮದೇ ಆದ ಮೌಲ್ಯ ಮತ್ತು ರೂಢಿಗಳನ್ನು ಜಾರಿಗೆ ತಂದರು. ಕೆಲವು ಶಿಕ್ಷಕರು ಟ್ಯೂಷನ್ ತರಗತಿಗಳನ್ನು ನಡೆಸುತ್ತಾ ಅಡ್ಡ ವ್ಯವಹಾರಗಳಲ್ಲಿ ತೊಡಗಿಸಿಕೊಂಡರು.
ಆದರೀಗ, ಪರೀಕ್ಷಾ ಮಾಫಿಯಾಗಳು, ರಾಜಕೀಯ ಸಂಪರ್ಕಗಳು, ಸ್ಥಳೀಯ ರಕ್ಷಕರು ಮತ್ತು ಸಂಸ್ಥೆಗಳೊಳಗಿನ ಒಳಗಿನವರೊಂದಿಗೆ ಸಂಘಟಿತ ಅಪರಾಧ ಜಾಲಗಳಾಗಿ ವಿಕಸನಗೊಂಡಿದ್ದಾರೆ. ಅತ್ಯಾಧುನಿಕ ಡಿಜಿಟಲ್ ತಂತ್ರಗಳನ್ನು ಬಳಸಿಕೊಂಡವರು ಕೋಟ್ಯಂತರ ರೂಪಾಯಿಗಳನ್ನು ಗಳಿಸುತ್ತಿದ್ದಾರೆ. ಆದರೂ ತನಿಖೆ ಎಂಬುದು ಹೆಚ್ಚಾಗಿ ಸಣ್ಣ ಮಧ್ಯವರ್ತಿಗಳ ಬಂಧನದೊಂದಿಗೆ ಕೊನೆಗೊಳ್ಳುತ್ತಿವೆ. ಆದರೂ ಇದರಲ್ಲಿ ಭಾಗಿಯಾದ ಮಾಸ್ಟರ್ಮೈಂಡ್ಗಳನ್ನು ಮುಟ್ಟದೆ ಬಿಟ್ಟಿದ್ದಾರೆ. ಅದರಲ್ಲೂ ಶಿಕ್ಷೆ ಕಡಿತದ ಸಂಸ್ಕೃತಿ ಮತ್ತಷ್ಟು ಆತಂಕಕಾರಿಯಾಗಿದೆ. ಇದರಿಂದಾಗಿ ಸಾರ್ವಜನಿಕ ವಿಶ್ವಾಸವು ನಿಧಾನವಾಗಿ ಕುಸಿಯುತ್ತಿದೆ. ಸೋರಿಕೆ ಪ್ರಕರಣಗಳಲ್ಲಿ ಕಿಡಿಗೇಡಿಗಳನ್ನು ಬಂಧಿಸಿದರೆ ಪರಿಹಾರ ದೊರೆತಂತೆ ಆಗುವುದಿಲ್ಲ. ಮೇಲ್ವಿಚಾರಣೆಯಲ್ಲಿ ವಿಫಲರಾದ ಅಧಿಕಾರಿಗಳನ್ನು ಗುರುತಿಸಬೇಕು. ತರಬೇತಿ ಕೇಂದ್ರಗಳೊಂದಿಗೆ ಇವರು ಹೊಂದಿರುವ ಸಂಬಂಧಗಳನ್ನು ಹೊರಗೆಡವಬೇಕು. ಹಣದ ಹರಿವಿನ ಹಾದಿಗಳನ್ನು ಪತ್ತೆಹಚ್ಚಬೇಕು. ನೈಜ ಅಪರಾಧಿಗಳಿಗೆ ತ್ವರಿತವಾಗಿ ಶಿಕ್ಷೆ ಕೊಡಿಸಬೇಕು. ಒಟ್ಟಾರೆ ಕಿಂಗ್ಪಿನ್ಗಳಿಗೆ ಶಿಕ್ಷೆಯಾಗಲೇಬೇಕು. ಜೊತೆಗೆ ಪ್ರತಿಭಟನಾಕಾರರು ಆಗ್ರಹಿಸಿರುವಂತೆ ಸೋನಂ ವಾಂಗ್ಚುಕ್ ಅವರನ್ನು ಬಿಡುಗಡೆ ಮಾಡಬೇಕು. ಸಚಿವರ ರಾಜೀನಾಮೆ ಪಡೆಯಬೇಕು. ಆತ್ಮಹತ್ಯೆ ಮಾಡುಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ ಒಂದು ಕೋಟಿ ಪರಿಹಾರ ಮಂಜೂರು ಮಾಡಬೇಕು. ಇಲ್ಲದಿದ್ದರೆ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಹೊಸ ರೂಪಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಲೇ ಇರುತ್ತವೆ.
ಇನ್ನೂ ವೃತ್ತಿ ಸಮಾಲೋಚನೆಯೂ ಮುಖ್ಯ. ನೀಟ್ಗೆ ಅರ್ಹತೆ ಪಡೆಯದಿರುವುದನ್ನೇ ವೈಫಲ್ಯವೆಂದು ಕಾಣಬಾರದು. ನಮ್ಮ ದೇಶಕ್ಕೆ ನರ್ಸಿಂಗ್, ಭೌತಚಿಕಿತ್ಸೆ, ಮನೋವಿಜ್ಞಾನ, ಸಾರ್ವಜನಿಕ ಆರೋಗ್ಯ, ಜೈವಿಕ ತಂತ್ರಜ್ಞಾನ, ಸಂಶೋಧನೆ ಮತ್ತು ಸಂಬಂಧಿತ ವಿಜ್ಞಾನಗಳಂತಹ ಅನೇಕ ಆರೋಗ್ಯ ರಕ್ಷಣಾ ಕ್ಷೇತ್ರಗಳಲ್ಲಿ ನುರಿತ ವೃತ್ತಿಪರರು ಬೇಕಾಗಿದ್ದಾರೆ. ಸಮಾಜವು ಎಂಬಿಬಿಎಸ್ ಪದವಿಗಳನ್ನು ಮಾತ್ರ ಅತಿ ದೊಡ್ಡದೆಂದು ಮನಗಾಣುವುದನ್ನು ಕೂಡ ನಿಲ್ಲಿಸಬೇಕು.
ಇಂತಹ ಬಿಕ್ಕಟ್ಟಿನ ಹೊತ್ತಲ್ಲಿ, ಪೋಷಕರು ಸಹ ಬಹಳ ಮುಖ್ಯವಾದ ಪಾತ್ರವನ್ನು ವಹಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಒತ್ತಡ ಹೇರುವ ಬದಲುಭಾವನಾತ್ಮಕ ಬೆಂಬಲದ ಕೊಡಬೇಕು.
ಅಂಕಗಳು ಮತ್ತು ಶ್ರೇಯಾಂಕಗಳಿಗಿಂತ ಮಾನವೀಯತೆ ಹೆಚ್ಚು ಮೌಲ್ಯಯುತವಾಗಿದೆ ಎಂಬ ಭರವಸೆಯನ್ನು ಪೋಷಕರು ಕೂಡ ಬಿತ್ತಬೇಕು.
ಜೀವನದ ಕಠಿಣತೆಯಿಂದ ತಪ್ಪಿಸಿಕೊಳ್ಳುವ ಆಲೋಚನೆಗಳು ಅಸಾಮಾನ್ಯವಲ್ಲ. ನಮ್ಮಲ್ಲಿ ಬಹುತೇಕರು ನಂಬಿಕೆಯೊಂದಿಗೆ ಮುನ್ನೆಡೆಸುತ್ತಾರೆ. ಹಿನ್ನಡೆಗಳು ತಾತ್ಕಾಲಿಕ. ಜೊತೆಗೆ ಬದುಕು ಸಾಗುತ್ತಿದ್ದಂತೆ, ಒಂದಕ್ಕಿಂತ ಹೆಚ್ಚು ಮಾರ್ಗಗಳನ್ನು ಗೋಚರಿಸುತ್ತವೆ ಎಂಬ ನಂಬಿಕೆಯಿಂದ ವಿದ್ಯಾರ್ಥಿಗಳಿಂದು ಸಾಗುವ ಅಗತ್ಯವಿದೆ.
ಹೀಗಾಗಿ “ಹಿನ್ನಡೆ” ಶಾಶ್ವತ ಎಂಬುದನ್ನು ಮರೆಯಿರಿ. ಗೊತ್ತಿರಲಿ, ವೈದ್ಯನಾಗುವುದನ್ನು ಮೀರಿಯೂ ಜೀವನ ಇದೆ ಎಂಬುದನ್ನು ಕೂಡ ಮರೆಯಬೇಡಿ. ವಿದ್ಯಾರ್ಥಿಗಳೇ, ನಿಮ್ಮ ಸಂಪೂರ್ಣ ಭವಿಷ್ಯವನ್ನು ಎಂದಿಗೂ ವೈದ್ಯಕೀಯ ಪದವಿ ಒಂದೇ ನಿರ್ಧರಿಸಲು ಸಾಧ್ಯವಿಲ್ಲ. ನೀವು ಏನಾಗಬೇಕೆಂದು ಒಂದು “ಪರೀಕ್ಷೆ” ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಒಬ್ಬರ ಕನಸುಗಳನ್ನು ನನಸಾಗಿಸಲು ಲೆಕ್ಕವಿಲ್ಲದಷ್ಟು ಮಾರ್ಗಗಳಿವೆ. ಇದನ್ನು ಅನುಸರಿಸಲು ಯೋಗ್ಯವಾದ ಅನೇಕ ಕನಸುಗಳಿವೆ. ಜೀವನ ಎಂಬುದು ಎಂದಿಗೂ ಯಶಸ್ಸಿಗೆ ಒಂದೇ ಒಂದು ಮಾರ್ಗವನ್ನು ಕೊಟ್ಟಿರುವುದಿಲ್ಲ
ಇಲ್ಲಿ ವಿಷಾದ ಎಂದರೆ, ಯಾರೂ ನಿಮಗೆ ಇದನ್ನು ಹೇಳಿರಲಿಕ್ಕಿಲ್ಲ. ನಿಮ್ಮ ಪೋಷಕರು, ಶಿಕ್ಷಕರು ಆಗಾಗ “ಆತ್ಮಹತ್ಯೆ” ಪರಿಹಾರವಲ್ಲ ಎಂದು ಹೇಳಿರುತ್ತಾರೆ. ಯಾವುದೇ ಕಾರಣಕ್ಕೂ ನೀವು ನಿಮ್ಮನ್ನು ಆವರಿಸಿದ್ದ ನೋವು ಮತ್ತು ಅವಮಾನದಿಂದ ತಪ್ಪಿಸಿಕೊಳ್ಳಲು ಜೀವಕಳೆದುಕೊಳ್ಳಬೇಡಿ. ನೆನಪಿರಲಿ, ನೀವು ವಿಫಲರಾಗಿಲ್ಲ. ವ್ಯವಸ್ಥೆ ವಿಫಲವಾಗಿದೆ. ಬೇರೊಬ್ಬರ ವೈಫಲ್ಯಕ್ಕಾಗಿ ನಿಮ್ಮ ಜೀವನವನ್ನು ಧಾರೆ ಎರೆಯಬೇಡಿ. ಭವಿಷ್ಯದ ಪೀಳಿಗೆಗೆ ನೀವು ಭರವಸೆಯ ಸಂಕೇತಗಳಾಗಬೇಕು. ಅದು ಬಿಟ್ಟು ಹತಾಶೆಯ ಜ್ಞಾಪನೆಗಳಾಗಬಾರದು.
ನಮ್ಮವರಿಗೆ ಎರಡನೇ ಮಹಾಯುದ್ಧದ ನಂತರ ಜಪಾನ್ನ ಪುನರ್ನಿರ್ಮಾಣದ ಕಥೆ ನಮ್ಮವರಿಗೆ “ಮಾದರಿ’ ಆಗಬೇಕು ಇದನ್ನು ಪರಿಣಾಮಕಾರಿಯಾಗಿ ಬಿತ್ತಬೇಕಾದ ಶಾಲೆ-ಕಾಲೇಜುಗಳು ವಿಫಲವಾಗಿವೆ. ಹೀಗಾಗಿ ಸರ್ಕಾರ ಮತ್ತು ಸಮಾಜ ಎರಡೂ ತಮ್ಮ ಪಾತ್ರಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಅಗತ್ಯವಿದೆ. ಶಾಲೆಗಳಿಂದು ತುರ್ತಾಗಿ ಶಿಕ್ಷಕ-ವಿದ್ಯಾರ್ಥಿ ಅನುಪಾತ ಮತ್ತು ಸಮರ್ಪಕವಾಗಿ ತರಬೇತಿ ಪಡೆದ ಶಿಕ್ಷಕರನ್ನು ಹೊಂದುವ ಅಗತ್ಯವಿದೆ. ಹಾಗೆಯೇ ವಿದ್ಯಾರ್ಥಿಗಳಿಗೆ ತಾವೇ ನಿಜವಾದ ಪಠ್ಯ ಪುಸ್ತಕ ಎಂಬ ಗಟ್ಟಿತನವನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕು. ಸ್ವತಂತ್ರ ಭಾರತದಲ್ಲಿ ಇದಿನ್ನೂ ಸಾಧ್ಯವಾಗಿಲ್ಲ.
ಒಟ್ಟಾರೆ ನೀಟ್ ಮತ್ತು ಇತರೆ ಬಗೆಯ ಪ್ರವೇಶ ಪರೀಕ್ಷೆಗಳನ್ನು ಸ್ವಚ್ಛವಾಗಿ ನಡೆಸಲು ಉತ್ತಮ ಮಾರ್ಗಗಳನ್ನು ಮತ್ತು ವಿಧಾನಗಳನ್ನು ಕಂಡುಕೊಳ್ಳುವ ಜವಾಬ್ದಾರಿ ಆಡಳಿತಾಧಿಕಾರಿಗಳ ಮೇಲಿದೆ ಇದಕ್ಕಾಗಿ, ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪ್ಯಾರಾಗ್ರಾಫ್ 15.2ರ ಪರಿಣಾಮ ಮತ್ತು ಕಡ್ಡಾಯಗಳನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡುವ ಅಗತ್ಯ ಸಹ ಇದೆ. ಸುಪ್ರೀಂ ಕೋರ್ಟ್ ರಚಿಸಿದ ನ್ಯಾಯಮೂರ್ತಿ ಜೆ.ಎಸ್ ವರ್ಮಾ ಆಯೋಗ 2012ರ ಪ್ರಕಾರ, ಬಹುಪಾಲು ತಾಂತ್ರಿಕ ಕಾಲೇಜುಗಳು 10,000ಕ್ಕೂ ಹೆಚ್ಚು ಕಾಲೇಜುಗಳು ಸೂಕ್ತ ಶಿಕ್ಷಣ ನೀಡಲು ಪ್ರಯತ್ನಿಸುತ್ತಿಲ್ಲ. ಆದರೆ ಪದವಿಗಳನ್ನಷ್ಟೇ ಮಾರಾಟ ಮಾಡುತ್ತಿರುವುದನ್ನು ಹೇಳಿದೆ.
ಹೀಗಾಗಿ ವೈದ್ಯಕೀಯ ಭವಿಷ್ಯವು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದಲ್ಲಿದೆ ಎಂದು ನಾನು ದೃಢವಾಗಿ ನಂಬಿದ್ದೇನೆ. ಒತ್ತಡಕ್ಕೊಳಗಾದ. ದಣಿದ ಮತ್ತು ಭಾವನಾತ್ಮಕವಾಗಿ ಹಾನಿಗೊಳಗಾದ ವಿದ್ಯಾರ್ಥಿ ಸಹಾನುಭೂತಿಯ ವೈದ್ಯನಾಗಲು ಸಾಧ್ಯವೇ ಇಲ್ಲ. ನೀಟ್ ಪರೀಕ್ಷಾ ವ್ಯವಸ್ಥೆಯು ಭವಿಷ್ಯದ ವೈದ್ಯರನ್ನು ಮಾತ್ರ ಆಯ್ಕೆ ಮಾಡುವುದಲ್ಲದೆ, ಭಾರತೀಯ ಆರೋಗ್ಯ ರಕ್ಷಣೆಯ ಭವಿಷ್ಯದ ಸಂಸ್ಕೃತಿಯನ್ನು ರೂಪಿಸುತ್ತದೆ.
ನೀಟ್ ಪರೀಕ್ಷಾ ವ್ಯವಸ್ಥೆಯನ್ನು ಹೆಚ್ಚು ಸುರಕ್ಷಿತ ಮತ್ತು ಪಾರದರ್ಶಕವಾಗಿಸಲು ನಮ್ಮ ದೇಶ ಪ್ರತಿಭೆ, ತಂತ್ರಜ್ಞಾನ ಮತ್ತು ಆಡಳಿತಾತ್ಮಕ ಶಕ್ತಿಯನ್ನು ಹೊಂದಿದೆ. ಇದೀಗ ಬೇಕಾಗಿರುವುದು ನಿರಂತರ ಸುಧಾರಣೆ, ರಾಜಕೀಯ ಇಚ್ಛಾಶಕ್ತಿ, ಸಾಂಸ್ಥಿಕ ಜವಾಬ್ದಾರಿ ಬೇಕಾಗಿದೆ. ಇವತ್ತು ಲಕ್ಷಾಂತರ ವಿದ್ಯಾರ್ಥಿಗಳು ಅಂಕಗಳನ್ನು ಕೇಳುತ್ತಿಲ್ಲ. ಬದಲಿಗೆ ಕೇವಲ ನ್ಯಾಯವನ್ನು ಕೇಳುತ್ತಿದ್ದಾರೆ. ಇವರುಗಳಿಗೆ ನ್ಯಾಯ ಕೊಡುವುದು ಯುವ ಕನಸಿಗೆ ಕೊಡುವ ಕನಿಷ್ಠ ಮೌಲ್ಯವಾಗಿದೆ.
ಹೀಗೆ ನಮ್ಮ ಪರೀಕ್ಷಾ ವ್ಯವಸ್ಥೆ ಪದೇ ಪದೇ ಕುಸಿಯುತ್ತಿರುವಾಗಲೂ “ವಿಶ್ವ ಗುರು” ಮತ್ತು “ಜಾಗತಿಕ ಜ್ಞಾನ ಶಕ್ತಿ” ಕೇಂದ್ರ ನಮ್ಮದೆಂದು ಬೀಗುವ ಔದಾರ್ಯವನ್ನು ತೋರಬೇಕಿದೆ. ಸ್ಪರ್ಧಾತ್ಮಕ ಪರೀಕ್ಷೆಗಳು ಅಸಮಾನವಾಗಿರುವ ಸಮಾಜದಲ್ಲಿ ಸಮಾನತೆ ಮೂಡಿಸುವಂತಿರಬೇಕು. ಅವು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಾಗ, ಸಾಮಾಜಿಕ ನಂಬಿಕೆಯೇ ಕ್ಷೀಣಿಸಲು ಪ್ರಾರಂಭಿಸುತ್ತದೆ. ಮತ್ತೊಮ್ಮೆ ಹೇಳುವೆ, ನಮ್ಮ ದೇಶಕ್ಕೆ ತುರ್ತಾಗಿ ಪರೀಕ್ಷಾ ಭದ್ರತೆಯ ಸಂಪೂರ್ಣ ಪರಿಷ್ಕರಣೆಯ ಅಗತ್ಯವಿದೆ. ಬಲವಾದ ಡಿಜಿಟಲ್ ಸುರಕ್ಷತೆ, ಎನ್ಕ್ರಿಪ್ಟ್ ಮಾಡಿದ ಕಾಗದ ವಿತರಣೆ, ಬಿಗಿಯಾದ ಮೇಲ್ವಿಚಾರಣೆ ಮತ್ತು ಸುರಕ್ಷಿತ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಕಡೆಗೆ ಹಂತಹಂತವಾಗಿ ಪರಿವರ್ತನೆಗೊಳಿಸುವುದರಿಂದ ಸರ್ಕಾರವು ಯುವಜನರಲ್ಲಿ ಅವರ ಹಿತಾಸಕ್ತಿಗಳನ್ನು ರಕ್ಷಿಸಲು ಬದ್ಧವಾಗಿದೆ ಎಂಬ ವಿಶ್ವಾಸವನ್ನು ತುರ್ತಾಗಿ ಮೂಡಿಸಬೇಕಿದೆ. ಮರೆಯದಿರಿ, ಜೀವನ ಪ್ರತಿದಿನ ಹೊಸ ಅವಕಾಶಗಳೊಂದಿಗೆ ತನ್ನನ್ನು ತಾನು ನವೀಕರಿಸಿಕೊಳ್ಳುತ್ತದೆ ಎಂಬುದನ್ನು ಮೊದಲು ಅರಿಯಿರಿ. ನಿಮ್ಮ ಜೀವನವು ಅಮೂಲ್ಯವಾದದ್ದು. ಅದು ಸುಖ-ಸಂತೋಷದಿಂದ ಕೂಡಿರಲಿ. ನೀವು ಅದನ್ನು ನೋಡಬೇಕು, ಸವಿಯಬೇಕು. ಸಾಧ್ಯವಾಗದಿದ್ದರೆ ಅದಕ್ಕಿಂತಲೂ ದೊಡ್ಡ ದುರಂತ ಮತ್ತೊಂದಿಲ್ಲ. ನೀವು ಜೀವನದ ಕೊನೆಯ ಹಂತವನ್ನು ತಲುಪಿಲ್ಲ. ಹೀಗಾಗಿ ಪರದೆಯನ್ನು “ಗೋಡೆ” ಎಂದು ತಪ್ಪಾಗಿ ಭಾವಿಸಿ ನಡೆಯಬೇಡಿ.





