- ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಮಣಿಪುರ ಹಿಂಸಾಚಾರ
- ಬಿಜೆಪಿ ಮಹಿಳಾ ಅಧ್ಯಕ್ಷೆ ಶಾರದಾ ದೇವಿ ನಿವಾಸದ ಮೇಲೆ ದಾಳಿ
ಮಣಿಪುರ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಉದ್ರಿಕ್ತರ ಗುಂಪು ಮತ್ತೆ ದಾಳಿ ನಡೆಸುತ್ತಿದೆ. ಈ ನಡುವೆ ಭದ್ರತಾ ಪಡೆ ಹಾಗೂ ಉದ್ರಿಕ್ತರ ನಡುವೆ ಘರ್ಷಣೆ ಉಂಟಾಗಿದೆ. ಈ ವೇಳೆ ಪೊಲೀಸರ ಆಯುಧ ಕಸಿದುಕೊಳ್ಳಲು ಪ್ರಯತ್ನಿಸಿದ್ದು ಪೊಲೀಸರ ಶಸ್ತ್ರಾಸ್ತ್ರ ಕೊಠಡಿಗೆ ಬೆಂಕಿ ಹಚ್ಚಲಾಗಿದೆ.
ಮಣಿಪುರದ ನಾನಾ ಕಡೆ ಶುಕ್ರವಾರ (ಜೂನ್ 16) ರಾತ್ರಿ ಹಾಗೂ ಶನಿವಾರ (ಜೂನ್ 17) ಬೆಳಗ್ಗೆ ದಾಳಿಗಳು ನಡೆದಿವೆ. ಇಂಫಾಲ ಪಶ್ಚಿಮ ಜಿಲ್ಲೆಯ ಇರಿಂಗ್ಬಾಮ್ ಪೊಲೀಸ್ ಶಸ್ತ್ರಾಸ್ತ್ರ ಕೊಠಡಿಗೆ ಬೆಂಕಿ ಹಚ್ಚಿ ಕಟ್ಟಡವನ್ನು ಧ್ವಂಸ ಮಾಡಲಾಗಿದೆ.
ಈ ವೇಳೆ ಸೇನಾ ಪಡೆಗಳು ಧಾವಿಸಿ ಅಲ್ಲಿ ಸೇರಿದ್ದ ಉದ್ರಿಕ್ತರನ್ನು ಚದುರಿಸಿದ್ದಾರೆ. ಇದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ ಎಂದು ವರದಿಯಾಗಿದೆ.
ಬಿಷ್ಣಪುರ ಜಿಲ್ಲೆ ಕ್ವಾರ್ತಾ ಎಂಬಲ್ಲಿ ಶುಕ್ರವಾರ ರಾತ್ರಿ ಕೆಲವರು ಸ್ವಯಂ ಚಾಲಿತ ಶಸ್ತ್ರಾಸ್ತ್ರಗಳಿಂದ ದಾಳಿ ಮಾಡಿದ್ದು ಈ ಹಿಂಸಾಚಾರ ಘಟನೆಯಲ್ಲಿ ಯಾವುದೇ ಜೀವಹಾನಿಯಾದ ವರದಿಯಾಗಿಲ್ಲ. ಚುರ್ಚಾಂಡಪುರ ಜಿಲ್ಲೆಯ ಕೆಲವೆಡೆ ಘರ್ಷಣೆಗಳು ನಡೆದು ಕೆಲವರಿಗೆ ಗಾಯಗಳಾಗಿವೆ.
ಮಣಿಪುರ ವಿಶ್ವವಿದ್ಯಾನಿಲಯ ಕ್ಯಾಂಪಸ್ಸಲ್ಲೂ ಕೆಲವರು ಗಲಾಟೆ ನಡೆಸಿದ್ದಾರೆ. ಇದೇ ಆವರಣದಲ್ಲಿರುವ ಸ್ಥಳೀಯ ಶಾಸಕರ ಮನೆಯ ಮೇಲೂ ದಾಳಿ ಮಾಡುವ ಪ್ರಯತ್ನವಾಗಿದೆ. ಭದ್ರತಾ ಪಡೆಗಳು ಗುಂಪನ್ನು ಚದುರಿಸಿದ್ದಾರೆ.
ಮಣಿಪುರ ಹಿಂಸಾಚಾರ ಘಟನೆಯಲ್ಲಿ ಕೇಂದ್ರ ಸಚಿವ ಆರ್ ಕೆ ರಂಜನ್ ಸಿಂಗ್ ಅವರ ನಿವಾಸದ ಮೇಲೆ ಪೆಟ್ರೋಲ್ ಬಾಂಬ್ ಎಸೆದು ದಾಳಿ ಮಾಡಲಾಗಿತ್ತು. ಅದರ ಮರುದಿನವೇ ಬಹಳಷ್ಟು ಕಡೆ ಹಿಂಸಾಚಾರ ನಡೆದಿದೆ.
ಮಣಿಪುರದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳ ಕುರಿತು ಹಿರಿಯ ನಿವೃತ್ತ ಸೇನಾಧಿಕಾರಿಗಳು, ಪ್ರಮುಖರು ಬೇಸರ ವ್ಯಕ್ತಪಡಿಸಿದ್ಧಾರೆ.
ಬಿಜೆಪಿ ನಾಯಕರ ಮನೆಗೆ ಬೆಂಕಿ ಹಚ್ಚುವ ಪ್ರಯತ್ನ ವಿಫಲ
ಮಣಿಪುರ ಹಿಂಸಾಚಾರ ಮತ್ತೆ ಹೆಚ್ಚಾಗಿದ್ದು ರಾಜ್ಯದ ರಾಜಧಾನಿ ಇಂಫಾಲದಲ್ಲಿ ಶುಕ್ರವಾರ ರಾತ್ರಿ ಉದ್ರಿಕ್ತ ಗುಂಪುಗಳು ಬಿಜೆಪಿ ನಾಯಕರ ಮನೆಗಳಿಗೆ ಬೆಂಕಿ ಹಚ್ಚಲು ಪ್ರಯತ್ನಿಸಿವೆ. ಜತೆಗೆ ಭದ್ರತಾ ಪಡೆಗಳೊಂದಿಗೆ ಘರ್ಷಣೆಗೆ ಇಳಿದ ಪರಿಣಾಮವಾಗಿ ಘಟನೆಯಲ್ಲಿ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ.
ಮಣಿಪುರದ ಬಿಷ್ಣುಪುರ್ ಜಿಲ್ಲೆಯ ಕ್ವಾಕ್ವಾ ಮತ್ತು ಚುರಾಚಂದ್ಪುರ ಜಿಲ್ಲೆಯ ಕಾಂಗೈನಲ್ಲಿ ರಾತ್ರಿಯಿಡೀ ಗುಂಡಿನ ದಾಳಿಗಳು ವರದಿಯಾಗಿವೆ.
ಪಶ್ಚಿಮ ಇಂಫಾಲದ ಇರಿಂಗ್ಬಾಮ್ ಪೊಲೀಸ್ ಠಾಣೆಯನ್ನು ಲೂಟಿ ಮಾಡಲು ಪ್ರಯತ್ನಗಳು ನಡೆದವು. ಆದರೆ, ಯಾವುದೇ ಆಯುಧಗಳು ಕಳವಾಗದಂತೆ ಪೊಲೀಸರು ಎಚ್ಚರ ವಹಿಸಿದರು ಎಂದು ವರದಿಯಾಗಿದೆ.
ಮಣಿಪುರ ಹಿಂಸಾಚಾರ ತಡೆಯುವ ಪ್ರಯತ್ನವಾಗಿ ಸೇನೆ, ಅಸ್ಸಾಂ ರೈಫಲ್ಸ್ ಮತ್ತು ಮಣಿಪುರ ಕ್ಷಿಪ್ರ ಕಾರ್ಯಾಚರಣಾ ಪಡೆಗಳು ರಾಜ್ಯ ರಾಜಧಾನಿಯಲ್ಲಿ ಮಧ್ಯರಾತ್ರಿಯವರೆಗೆ ಜಂಟಿ ಕವಾಯತು ನಡೆಸಿ ಗಲಭೆಕೋರರನ್ನು ಹಿಮ್ಮೆಟ್ಟಿಸುವ ಪ್ರಯತ್ನ ನಡೆಸಿದರು.
ಸರಿಸುಮಾರು ಸಾವಿರ ಜನರ ಗುಂಪೊಂದು ಕಟ್ಟಡಗಳನ್ನು ಸುಡಲು ಪ್ರಯತ್ನಿಸಿತು. ಗುಂಪನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಮತ್ತು ರಬ್ಬರ್ ಬುಲೆಟ್ ಗಳನ್ನು ಸಿಡಿಸಿದವು. ಮತ್ತೊಂದು ಗುಂಪು ಶಾಸಕ ಬಿಸ್ವಜೀತ್ ಮನೆಗೆ ಬೆಂಕಿ ಹಚ್ಚಲು ಯತ್ನಿಸಿತು. ಈ ಪ್ರಯತ್ನವನ್ನು ತಡೆಯಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಮಧ್ಯರಾತ್ರಿಯ ನಂತರ ಸಂಜೆಮೈ ಪ್ರದೇಶದಲ್ಲಿರುವ ಬಿಜೆಪಿ ಕಚೇರಿಯನ್ನು ಗುಂಪೊಂದು ಸುತ್ತುವರೆಯಿತು. ಆದರೆ ಭದ್ರತಾ ಪಡೆಗಳು ಗುಂಪನ್ನು ಚದುರಿಸಿದ ಕಾರಣ ಯಾವುದೇ ಹಾನಿ ಸಂಭವಿಸಲಿಲ್ಲ.
ಈ ಸುದ್ದಿ ಓದಿದ್ದೀರಾ? ನೆಹರು ಸ್ಮಾರಕದ ಮರುನಾಮಕರಣ : ಕೇಂದ್ರದ ವಿರುದ್ಧ ಕಾಂಗ್ರೆಸ್ ಕಿಡಿ
ಮಣಿಪುರ ಹಿಂಸಾಚಾರ ಭಾಗವಾಗಿ ಇಂಫಾಲದ ಪೊರಂಪೇಟೆ ಬಳಿಯ ಬಿಜೆಪಿ ಮಹಿಳಾ ಅಧ್ಯಕ್ಷೆ ಶಾರದಾ ದೇವಿ ಅವರ ಮನೆಯನ್ನು ಮಧ್ಯರಾತ್ರಿ ಧ್ವಂಸ ಮಾಡಲು ದಾಳಿಕೋರರು ಯತ್ನಿಸಿದರು. ಭದ್ರತಾ ಪಡೆಗಳು ಅವರನ್ನು ಚದುರಿಸುವಲ್ಲಿ ಯಶಸ್ವಿಯಾದವು.
ಕಳೆದ ಒಂದು ತಿಂಗಳಿಂದ ರಾಜ್ಯದಲ್ಲಿ ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿ ವಿಚಾರವಾಗಿ ಮೇತೀ ಸಮುದಾಯ ಮತ್ತು ಕುಕಿ ಬುಡಕಟ್ಟುಗಳ ನಡುವೆ ಹಿಂಸಾಚಾರ ನಡೆಯುತ್ತಿದೆ.