800 ರೂಪಾಯಿ ಶುಲ್ಕ ಬಾಕಿಯಿದ್ದ ಕಾರಣ ಶಾಲಾಡಳಿತವು ಪರೀಕ್ಷೆ ಬರೆಯಲು ಅವಕಾಶ ನೀಡದ ಕಾರಣ ಮನನೊಂದು ಒಂಬತ್ತನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಪ್ರತಾಪ್‌ಘಡದಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಕಮಲ ಶರಣ್ ಯಾದವ್ ಇಂಟರ್ ಕಾಲೇಜು ವಿದ್ಯಾರ್ಥಿನಿ ರಿಯಾ ಪ್ರಜಾಪತಿ (17) ಎಂದು ಗುರುತಿಸಲಾಗಿದೆ. ಶಾಲಾಡಳಿತವು ಶಾಲಾ ಶುಲ್ಕ ಬಾಕಿಯಿರುವ ಕಾರಣಕ್ಕೆ ವಿದ್ಯಾರ್ಥಿನಿಗೆ ವಾರ್ಷಿಕ ಪರೀಕ್ಷೆ ಬರೆಯಲು ಅವಕಾಶ ನೀಡದಿರುವುದು ಮಾತ್ರವಲ್ಲದೇ ಆಕೆಯನ್ನು ಅವಮಾನಿಸಿದೆ ಎಂದು ಪೊಲೀಸರು ಶನಿವಾರ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಬಾಕಿ ಶುಲ್ಕ ಪಾವತಿಸಿಲ್ಲವೆಂದು ಮಗುವಿನ ಮೇಕೆ ಹಲ್ಲೆ
ಈ ಬಗ್ಗೆ ಮೃತ ವಿದ್ಯಾರ್ಥಿನಿಯ ತಾಯಿ ಪೂನಮ್ ದೇವಿ ದೂರು ನೀಡಿದ್ದಾರೆ. 800 ರೂಪಾಯಿ ಶುಲ್ಕ ಪಾವತಿಸಿಲ್ಲವೆಂದು ದಾಖಲಾತಿ ಪತ್ರವನ್ನು ನೀಡಿಲ್ಲ ಎಂದು ದೂರಿದ್ದಾರೆ. ಹಾಗೆಯೇ ಕಾಲೇಜು ಮ್ಯಾನೇಜರ್ ಸಂತೋಷ್ ಕುಮಾರ್ ಯಾದವ್, ಪ್ರಾಂಶುಪಾಲ ರಾಜ್‌ಕುಮಾರ್ ಯಾದವ್, ಸಿಬ್ಬಂದಿಗಳಾದ ದೀಪಕ್ ಸರೋಜ್, ಧನಿರಾಮ್ ಮತ್ತು ಶಿಕ್ಷಕರೋರ್ವರು ತನ್ನ ಮಗಳಿಗೆ ಶುಲ್ಕ ಬಾಕಿ ವಿಚಾರದಲ್ಲಿ ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ತಾಯಿ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದುರ್ಗೇಶ್ ಜುಮಾರ್ ಸಿಂಗ್, “ವಿದ್ಯಾರ್ಥಿನಿಗೆ ವಾರ್ಷಿಕ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಮನೆಗೆ ವಾಪಸ್ ಹೋಗುವಂತೆ ಆಕೆಗೆ ಹೇಳಲಾಗಿದೆ. ಈ ಅವಮಾನದಿಂದಾಗಿ ನೊಂದು ರಿಯಾ ಮನೆಗೆ ಹೋಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ” ಎಂದು ಮಾಹಿತಿ ನೀಡಿದ್ದಾರೆ.
ಸದ್ಯ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ದೇಹ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.
