- 2010ರಲ್ಲಿ ಮೊದಲಿಗೆ ಬಂಧನವಾಗಿದ್ದ ಲಾರೆನ್ಸ್ ಬಿಷ್ಣೋಯಿ ಸಹಚರ
- 2022ರಲ್ಲಿ ಕಾರುಗಳ್ಳತನ ಆರೋಪದಲ್ಲಿ ದೆಹಲಿ ಪೊಲೀಸರಿಂದ ಬಂಧನ
ದೆಹಲಿಯ ತಿಹಾರ್ ಜೈಲಿನಲ್ಲಿ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಮತ್ತು ಆತನ ವಿರೋಧಿಯ ಎರಡು ಗುಂಪುಗಳ ನಡುವೆ ಶುಕ್ರವಾರ (ಏಪ್ರಿಲ್ 14) ಸಂಜೆ ಘರ್ಷಣೆ ನಡೆದಿದೆ.
ಪರಿಣಾಮ ಲಾರೆನ್ಸ್ ಆಪ್ತ ಸಹಚರನನ್ನು ವಿರೋಧಿ ಗುಂಪಿನ ಸದಸ್ಯರು ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ (ಏಪ್ರಿಲ್ 15) ತಿಳಿಸಿದ್ದಾರೆ.
33 ವರ್ಷದ ಪ್ರಿನ್ಸ್ ತೆವಾಟಿಯಾ ಹತ್ಯೆಗೀಡಾದ ಕೈದಿ. ಈತ ವಿಚಾರಣಾಧೀನ ಕೈದಿಯಾಗಿದ್ದ. 380 ಕೈದಿಗಳಿರುವ ಸಂಖ್ಯೆ 3ರ ಕೇಂದ್ರ ಕಾರಾಗೃಹದ 6ನೇ ವಾರ್ಡ್ನಲ್ಲಿ ತೆವಾಟಿಯಾನನ್ನು ಇರಿಸಲಾಗಿತ್ತು.
ಶುಕ್ರವಾರ ಸಂಜೆ 5.30ರ ಸುಮಾರಿಗೆ ವಿರೋಧಿ ಗುಂಪಿನ ಅತ್ತತೂರ್ ರೆಹಮಾನ್ ಜೊತೆ ತೆವಾಟಿಯಾ ಜಗಳ ಮಾಡಿಕೊಂಡಿದ್ದಾನೆ. ಎರಡೂ ಬಣಗಳ ಸದಸ್ಯರು ಘರ್ಷಣೆಯಲ್ಲಿ ತೊಡಗಿದ್ದಾರೆ. ಈ ಸಂದರ್ಭ ಲಾರೆನ್ಸ್ ಬಿಷ್ಣೋಯಿ ಅವರ ಸಹಚರ ತೆವಾಟಿಯಾ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗಾಯಗೊಂಡಿದ್ದ ತೆವಾಟಿಯಾ ಮತ್ತು ರೆಹಮಾನ್ ಸೇರಿ ನಾಲ್ವರನ್ನು ದೀನ್ ದಯಾಳ್ ಉಪಾಧ್ಯಾಯ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೂವರು ಸ್ಥಿತಿ ಸ್ಥಿರವಾಗಿದ್ದು, ತೆವಾಟಿಯಾ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ತೆವಾಟಿಯಾ ವಿರುದ್ಧ ಕೊಲೆ ಹಾಗೂ ಕೊಲೆ ಯತ್ನ ಸೇರಿದಂತೆ 16 ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಜಪಾನ್ | ಭಾಷಣದ ವೇಳೆ ಬಾಂಬ್ ಸ್ಫೋಟ; ಪಾರಾದ ಪ್ರಧಾನಿ ಫ್ಯೂಮಿಯೋ, ಶಂಕಿತನ ಬಂಧನ
2022ರ ಡಿಸೆಂಬರ್ನಲ್ಲಿ ಕಾರುಗಳ್ಳತನ ಪ್ರಕರಣದ ಆರೋಪದಲ್ಲಿ ಲಾರೆನ್ಸ್ ಬಿಷ್ಣೋಯಿ ಆಪ್ತ ಸಹಚರ ತೆವಾಟಿಯಾನನ್ನು ದೆಹಲಿ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು.
ವ್ಯಕ್ತಿಗೆ ಗುಂಡು ಹಾರಿಸಿದ ಪ್ರಕರಣದಲ್ಲಿ ತೆವಾಟಿಯಾನನ್ನು 2018ಲ್ಲಿ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. 2019ರಲ್ಲಿ ಪೆರೋಲ್ ಮೇಲೆ ಹೊರಬಂದ ಆತ ತಪ್ಪಿಸಿಕೊಂಡಿದ್ದ. ಈ ವೇಳೆ ಈತ ಹಲವು ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ ಎಂದು ಪೊಲೀಸರು ಹೇಳಿದ್ದರು.
ತೆವಾಟಿಯಾನನ್ನು ಮೊದಲಿಗೆ 2010ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಬಂಧಿಸಲಾಗಿತ್ತು.