ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಮೇಘಸ್ಫೋಟವಾಗಿದೆ. ಭಾರೀ ಮಳೆಯಿಂದ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಸದ್ಯಕ್ಕೆ ತಿಳಿದುಬಂದಿದೆ.
ಬಹುತೇಕ ಎಲ್ಲ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನಗರ ಮತ್ತು ಇತರೆಡೆ ಹಲವಾರು ತಗ್ಗು ಪ್ರದೇಶಗಳು ಮತ್ತು ರಸ್ತೆಗಳು ಮುಳುಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 24ಕ್ಕೂ ಹೆಚ್ಚು ಮನೆಗಳು ಹಾಗೂ ಸೇತುವೆಗಳು ಕೊಚ್ಚಿ ಹೋಗಿವೆ.
ಗುಡ್ಡಗಾಡು ರಾಜ್ಯಗಳಲ್ಲಿ ನಿರಂತರ ಮಳೆಯಿಂದಾಗಿ ಸಾಮಾನ್ಯ ಜನಜೀವನ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ. ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ನದಿಗಳಿಂದ ಭಾರಿ ಪ್ರಮಾಣದ ನೀರು ಹರಿದಿದ್ದು, ಪಂಜಾಬ್‌ನ ಹಲವಾರು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ.
ನಿರಂತರ ಮಳೆಯಿಂದ ಉಂಟಾದ ಭೂಕುಸಿತಗಳು ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರಾಖಂಡದಾದ್ಯಂತ ಪ್ರಮುಖ ರಸ್ತೆಗಳು ಮತ್ತು ಹೆದ್ದಾರಿ ನಿರ್ಬಂಧಿಸಿವೆ. ಭಾರಿ ಮಳೆಯ ಎಚ್ಚರಿಕೆ ಜಾರಿಯಲ್ಲಿದೆ. ಹಿಮಾಚಲ ಪ್ರದೇಶದಲ್ಲಿ, ಪವಿತ್ರ ಮಣಿಮಹೇಶ್ ಯಾತ್ರೆಯಲ್ಲಿದ್ದಾಗ ಆಮ್ಲಜನಕದ ಕೊರತೆಯಿಂದ ಪಂಜಾಬ್‌ನ ಮೂವರು ಯಾತ್ರಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಜಮ್ಮು ಪ್ರಾಂತ್ಯದ ಹಲವು ಭಾಗಗಳಲ್ಲಿ ಪರಿಸ್ಥಿತಿ “ಸಾಕಷ್ಟು ಗಂಭೀರವಾಗಿದೆ” ಮತ್ತು ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಲು ಶ್ರೀನಗರದಿಂದ ಜಮ್ಮುವಿಗೆ ಭೇಟಿ ನೀಡುವುದಾಗಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಮಳೆ ಮತ್ತು ಭೂಕುಸಿತದ ಕಾರಣ ಮಣಿಮಹೇಶ್ ಯಾತ್ರೆ ಸ್ಥಗಿತಗೊಂಡಿದೆ. ಮಣಿಮಹೇಶ್ ಯಾತ್ರೆಯನ್ನು ಮತ್ತೆ ಮಳೆ ಮತ್ತು ಭೂಕುಸಿತದ ಕಾರಣ ಸ್ಥಗಿತಗೊಳಿಸಲಾಗಿದೆ ಎಂದು ಭರ್ಮೌರ್ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕುಲದೀಪ್ ಸಿಂಗ್ ರಾಣಾ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಇದರ ಪರಿಣಾಮವಾಗಿ ನೂರಾರು ಭೂಕುಸಿತಗಳು ಸಂಭವಿಸಿವೆ. ಹೆಚ್ಚುವರಿಯಾಗಿ, ಹಲವಾರು ರಸ್ತೆಗಳು ಮುಚ್ಚಿಹೋಗಿವೆ ಮತ್ತು ನದಿಗಳು ಮತ್ತು ತೊರೆಗಳು ಉಕ್ಕಿ ಹರಿಯುತ್ತಿವೆ. ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ತೀವ್ರ ಮಳೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ನಾಲ್ಕು ದಿನ ಮಳೆ
ರಾಷ್ಟ್ರ ರಾಜಧಾನಿ ದೆಹಲಿ-ಎನ್‌ಸಿಆರ್‌ನ ಹಲವಾರು ಪ್ರದೇಶಗಳಲ್ಲಿ ಮಳೆಯಾಗಿದ್ದು ಮುಂದಿನ ನಾಲ್ಕೈದು ದಿನಗಳ ಕಾಲ ಬಾರಿ ಮಳೆಯಾಗುವ ಸಾಧ್ಯತೆ ಇದೆ. ಇದರ ಜೊತೆಗೆ ದೇಶದ ಹಲವು ಭಾಗಗಳಲ್ಲಿಯೂ ಕೂಡ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.