ಜಮ್ಮು ಕಾಶ್ಮೀರದಲ್ಲಿ ಮತ್ತೆ ಮೇಘಸ್ಫೋಟ ಸಂಭವಿಸಿದೆ. ರಂಬನ್ ಜಿಲ್ಲೆಯ ದೂರದ ಹಳ್ಳಿಯಲ್ಲಿ ಮೇಘಸ್ಫೋಟವಾಗಿದ್ದು ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಇಬ್ಬರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಪರ್ವತ ಗ್ರಾಮವಾದ ರಾಜ್‌ಗಢದಲ್ಲಿ ಬೆಳಗಿನ ಜಾವ ಮೇಘಸ್ಫೋಟ ಸಂಭವಿಸಿದೆ. ಇದರಿಂದಾಗಿ ಹಠಾತ್ ಪ್ರವಾಹ ಉಂಟಾಗಿ ಹಲವಾರು ಮಂದಿ ಸಾವನ್ನಪ್ಪಿದರು.
ಇದನ್ನು ಓದಿದ್ದೀರಾ? ಜಮ್ಮು ಕಾಶ್ಮೀರ | ಮೇಘಸ್ಫೋಟ: ಮೃತರ ಸಂಖ್ಯೆ 60ಕ್ಕೆ ಏರಿಕೆ, ನೂರಾರು ಮಂದಿ ನಾಪತ್ತೆ
ರಕ್ಷಣಾ ತಂಡಗಳು ನಂತರ ಇಬ್ಬರು ಮಹಿಳೆಯರು ಸೇರಿದಂತೆ ಮೂವರ ಶವಗಳನ್ನು ಪತ್ತೆಹಚ್ಚಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಪತ್ತೆಯಾದವರನ್ನು ಹುಡುಕಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಉತ್ತರ ಭಾರತದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಹಲವು ರಾಜ್ಯಗಳಲ್ಲಿ ಎಚ್ಚರಿಕೆ ನೀಡಲಾಗಿದೆ. ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ನಿರಂತರ ಮಳೆಯಿಂದಾಗಿ ಆಸ್ತಿ-ಪಾಸ್ತಿಗೆ ತೀವ್ರ ಹಾನಿಯಾಗಿದೆ.
ಮುಂದಿನ ನಾಲ್ಕೈದು ದಿನಗಳಲ್ಲಿ ಹಲವು ಬೆಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
