ಆಗಸ್ಟ್ 15ರ ಸಂಜೆ ದೇಶಾದ್ಯಂತ ಎಲ್ಲ ರಾಜ್ಯಗಳಲ್ಲಿಯೂ ರಾಜ್ಯಪಾಲರ ಕಚೇರಿ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಲಿದೆ. ಅಂತೆಯೇ, ತಮಿಳುನಾಡು ರಾಜ್ಯಪಾಲರ ಕಚೇರಿಯಲ್ಲಿಯೂ ಕಾರ್ಯಕ್ರಮ ನಡೆಯಲಿದ್ದು, ಆ ಕಾರ್ಯಕ್ರಮವನ್ನು ಬಹಿಷ್ಕರಸಲು ತಮಿಳು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ನಿರ್ಧರಿಸಿದ್ದಾರೆ.
ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ತಮಿಳುನಾಡು ವಿರೋಧಿ ಧೋರಣೆ ಹೊಂದಿದ್ದಾರೆ. ಅದರಂತೆಯೇ ನಡೆದುಕೊಳ್ಳುತ್ತಿದ್ದಾರೆ ಎಂದು ಆಡಳಿತಾರೂಢ ಡಿಎಂಕೆ ನಿರಂತರವಾಗಿ ಆರೋಪಿಸುತ್ತಲೇ ಇದೆ. ಅದೇ ಕಾರಣಕ್ಕಾಗಿ, ರಾಜ್ಯಪಾಲರ ಕಚೇರಿಯ ಬಳಿ ನಡೆಯಲಿರುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಸ್ಟಾಲಿನ್ ಬಹಿಷ್ಕರಿಸುತ್ತಿದ್ದಾರೆ. ಇದು, ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷದ ತೀವ್ರತೆಯನ್ನು ಸೂಚಿಸಿದೆ.
ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರದ ನಡುವಿನ ಬಿಕ್ಕಟ್ಟು ಆರಂಭವಾಗಿದ್ದು, ದಿ. ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ಗೌರವಾರ್ಥವಾಗಿ ಕಲೈನಾರ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಮಸೂದೆಯನ್ನು ವಿಧಾನಸಭೆ ಅಂಗೀಕರಿಸಿತ್ತು. ಆದರೆ, ಆ ಮಸೂದೆಗೆ ಸಹಿ ಹಾಕದ ರಾಜ್ಯಪಾಲ ರವಿ ಅವರು ಮಸೂದೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅಂಗೀಕಾರ ಪಡೆಯಲು ಉಲ್ಲೇಖಿಸಿದ್ದರು. ಇದನ್ನು, ಡಿಎಂಕೆ ಸರ್ಕಾರವು ರಾಜ್ಯಪಾಲರ ನಡೆ ವಿಳಂಬ ಧೋರಣೆ ಮತ್ತು ರಾಜ್ಯದ ಶಾಸಕಾಂಗ ಅಧಿಕಾರವನ್ನು ದುರ್ಬಲಗೊಳಿಸುವ ಉದ್ದೇಶಪೂರ್ವಕ ಕೃತ್ಯವೆಂದು ಟೀಕಿಸಿತ್ತು.
ಮಾತ್ರವಲ್ಲದೆ, ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮಸೂದೆಗಳ ಅಂಗೀಕಾರಕ್ಕೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಮೂರು ತಿಂಗಳ ಸಮಯದ ಗಡುವು ವಿಧಿಸಿತ್ತು.
ಈ ಲೇಖನ ಓದಿದ್ದೀರಾ?: ಕ್ಯೂಬಾ ಕ್ರಾಂತಿಯ ಕಿಡಿ, ಬಂಡವಾಳಿಗರ ದುಸ್ವಪ್ನ ಫಿಡೆಲ್ ಕ್ಯಾಸ್ಟ್ರೋ
ಇನ್ನು, ಇತ್ತೀಚಿನ ಅಂಶವಾಗಿ, ರಾಜ್ಯಪಾಲ ರವಿ ಅವರು ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರದ ಸಾಧನೆಗಳನ್ನು ವ್ಯಾಪಕವಾಗಿ ಶ್ಲಾಘಿಸಿದ್ದಾರೆ. ಆದರೆ, ತಮಿಳುನಾಡು ಸರ್ಕಾರ ಅಥವಾ ಸ್ಟಾಲಿನ್ ಬಗ್ಗೆ ಯಾವುದೇ ಸಕಾರಾತ್ಮಕ ಅಂಶಗಳನ್ನು ಉಲ್ಲೇಖಿಸಿಲ್ಲ ಎಂಬುದು ಕಂಡುಬಂದಿದೆ.
ಈ ಎಲ್ಲ ಕಾರಣಗಳಿಗಾಗಿ, ಮುಖ್ಯಮಂತ್ರಿ ಸ್ಟಾಲಿನ್ ಅವರು ರಾಜ್ಯಪಾಲರ ಕಚೇರಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗದೆ, ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಆದಾಗ್ಯೂ, ಸ್ಟಾಲಿನ್ ಅವರ ಬಹಿಷ್ಕಾರ ನಿರ್ಧಾರದ ಕುರಿತು ರಾಜ್ಯಪಾಲರ ಕಚೇರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.