- ದೆಹಲಿ ಪ್ರಗತಿ ಮೈದಾನ್ ಸುರಂಗ ರಸ್ತೆಯಲ್ಲಿ ಘಟನೆ
- ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ದೆಹಲಿ ನಗರದಲ್ಲಿ ಸಿನಿಮೀಯ ಶೈಲಿಯ ದರೋಡೆಯೊಂದು ಸೋಮವಾರ (ಜೂನ್ 26) ವರದಿಯಾಗಿದೆ. ಚಲಿಸುತ್ತಿದ್ದ ಕಾರನ್ನು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದ ಕಳ್ಳರ ಗುಂಪು ಕಾರನ್ನು ಅಡ್ಡಗಟ್ಟಿ ದರೋಡೆ ನಡೆಸಿ ಪರಾರಿಯಾಗಿದೆ.
ದೆಹಲಿಯ ಪ್ರಗತಿ ಮೈದಾನ್ ಸುರಂಗ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕಳ್ಳರು ದರೋಡೆ ಮಾಡಿರುವ ವಿಡಿಯೋ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಘಟನೆ ಶನಿವಾರ ಮಧ್ಯಾಹ್ನ 3 ರಿಂದ 4 ಗಂಟೆಯ ಮಧ್ಯೆ ನಡೆದಿದೆ. ಒಬ್ಬ ಡೆಲಿವರಿ ಏಜೆಂಟ್ ತನ್ನ ಸಹಾಯಕನೊಂದಿಗೆ ಕಾರಿನಲ್ಲಿ ಹಣ ತೆಗೆದುಕೊಂಡು ಗುರುಗ್ರಾಮಕ್ಕೆ ಪ್ರಯಾಣಿಸುತ್ತಿದ್ದರು. ಇವರ ಬಳಿ ಹಣ ಇರುವುದು ತಿಳಿದ ನಾಲ್ವರು ದರೋಡೆಕೋರರು ಎರಡು ಬೈಕ್‌ಗಳಲ್ಲಿ ಹಿಂಬಾಲಿಸಿಕೊಂಡು ಬಂದು ಪ್ರಗತಿ ಮೈದಾನ್ ರಸ್ತೆಯಲ್ಲಿ ಗನ್ ತೋರಿಸಿ ಅಡ್ಡಗಟ್ಟಿದೆ.
ಬಳಿಕ ಕಾರನ್ನು ಸುತ್ತುವರಿದು ಒಳಗಿದ್ದ ವ್ಯಕ್ತಿಯ ಕೈಯಲ್ಲಿದ್ದ ಬ್ಯಾಗ್ ಕಸಿದ ನಾಲ್ವರು ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾರೆ. ಬ್ಯಾಗ್‌ನಲ್ಲಿ ₹2 ಲಕ್ಷ ಹಣವಿತ್ತು ಎಂದು ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದರು.
ಘಟನೆ ಸಂಬಂಧ ಕಾರಿನಲ್ಲಿದ್ದ ವ್ಯಕ್ತಿ ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆದರೆ ಈವರೆಗೆ ಯಾವ ಆರೋಪಿಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ಕಳ್ಳರು ಕಾರಿನಲ್ಲಿದ್ದ ವ್ಯಕ್ತಿಗಳನ್ನು ಬಹಳ ಸಮಯದಿಂದ ಹಿಂಬಾಲಿಸುತ್ತಿದ್ದರೇ ಎಂಬುದು ತನಿಖೆ ನಂತರ ತಿಳಿಯಲಿದೆ. ಈ ಬಗ್ಗೆ ಡೆಲಿವರಿ ಕಂಪನಿಯ ಸಿಬ್ಬಂದಿಯನ್ನು ಪ್ರಶ್ನಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? 16 ವರ್ಷದವರು ಲೈಂಗಿಕತೆಯ ಬಗ್ಗೆ ನಿರ್ಧರಿಸಬಲ್ಲರು ಎಂದ ಮೇಘಾಲಯ ಹೈಕೋರ್ಟ್; ಪೋಕ್ಸೋ ಎಫ್‌ಐಆರ್ ರದ್ದು
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ದರೋಡೆ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
“ಘಟನೆ ಖಂಡನೀಯವಾಗಿದೆ. ಲೆಫ್ಟಿನಂಟ್ ಗೌವರ್ನರ್ ವಿ ಕೆ ಸಕ್ಸೇನಾ ಅವರು ಕೂಡಲೇ ರಾಜೀನಾಮೆ ನೀಡಬೇಕು. ದೆಹಲಿಯ ಜನರಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಕಲ್ಪಿಸುವ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು. ದೆಹಲಿಯನ್ನು ಸುರಕ್ಷಿತವಾಗಿಡಲು ಕೇಂದ್ರ ಸರ್ಕಾರಕ್ಕೆ ಆಗದಿದ್ದರೆ, ನಮಗೆ ಅವಕಾಶ ನೀಡಲಿ. ನಗರವನ್ನು ಮತ್ತು ನಾಗರಿಕರನ್ನು ಹೇಗೆ ಸುರಕ್ಷಿತವಾಗಿ ಇರಿಸಬೇಕು ಎಂಬುದನ್ನು ನಾವು ನಿಮಗೆ ತೋರಿಸುತ್ತೇವೆ” ಎಂದು ಕೇಜ್ರಿವಾಲ್ ಟ್ವೀಟ್‌ನಲ್ಲಿ ಕುಟುಕಿದ್ದಾರೆ.