ಪ್ರಸ್ತುತ ನಡೆಯುತ್ತಿರುವ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿನ (ಟಿಎನ್‌ಪಿಎಲ್) ಪಂದ್ಯದಲ್ಲಿ ಭಾರತ ತಂಡದ ಮಾಜಿ ಸ್ಟಾರ್ ಬೌಲ್ ಆರ್ ಅಶ್ವಿನ್ ಅವರು ಬಾಲ್ ಟ್ಯಾಂಪರಿಂಗ್ (ವಿರೂಪ) ಮಾಡಿದ್ದಾರೆ ಎಂದು ಗಂಭೀರ ಆರೋಪ ಕೇಳಿಬಂದಿದೆ. ಅಶ್ವಿನ್ ವಿರುದ್ಧ ‘ಮಧುರೈ ಪ್ಯಾಂಥರ್ಸ್’ ತಂಡ ಆರೋಪ ಮಾಡಿದೆ.
ಜೂನ್ 14ರಂದು ಅಶ್ಚಿನ್ ಇರುವ ತಂಡ ‘ದಿಂಡಿಗಲ್ ಡ್ರಾಗನ್ಸ್’ ಮತ್ತು ‘ಮಧುರೈ ಪ್ಯಾಂಥರ್ಸ್’ ನಡುವೆ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಅಶ್ವಿನ್ ಮತ್ತು ಅವರ ಫ್ರಾಂಚೈಸಿಯವರು ಬಾಲ್‌ಅನ್ನು ವಿರೂಪಗೊಳಿಸಿದ್ದಾರೆ ಎಂದು ಮಧುರೈ ಪ್ಯಾಂಥರ್ಸ್ ಆರೋಪಿಸಿದೆ. ಟಿಎನ್‌ಪಿಎಲ್ ಆಡಳಿತ ಮಂಡಳಿಗೆ ದೂರು ಸಲ್ಲಿಸಿದೆ.
“ಬಾಲ್‌ಅನ್ನು ಭಾರವಾಗಿಸಲು ರಾಸಾಯನಿಕವಾಗಿ ಸಂಸ್ಕರಿಸಿದ ಟವೆಲ್‌ಗಳನ್ನು ಬಳಸಲಾಗಿದೆ. ಹೀಗಾಗಿಯೇ, ಬಾಲ್‌ಅನ್ನು ಹೊಡೆದಾಗ ಲೋಹೀಯ ಶಬ್ದ ಕೇಳಿಬಂದಿದೆ” ಎಂದು ತಂಡವು ಆರೋಪಿಸಿದೆ.
ಆರೋಪಗಳಿಗೆ ಪೂರಕವಾದ ಪುರಾವೆಗಳನ್ನು ಒದಗಿಸುವಂತೆ ಟಿಎನ್‌ಪಿಎಲ್ ಆಡಳಿತವು ತಂಡಕ್ಕೆ ಸೂಚಿಸಿದೆ.
ಈ ಲೇಖನ ಓದಿದ್ದೀರಾ?: ಇರಾನ್-ಇಸ್ರೇಲ್ ಸಂಘರ್ಷ ಶುರುವಾಗಿದ್ದು ಎಲ್ಲಿಂದ? ಇತಿಹಾಸದ ಹಿನ್ನೋಟ!
ದೂರಿನ ಬಗ್ಗೆ ಪ್ರತಿಕ್ರಿಯಿಸಿರುವ ಟಿಎನ್‌ಪಿಎಲ್ ಸಿಇಒ ಪ್ರಸನ್ನ ಕಣ್ಣನ್, “ನಿಯಮದಂತೆ ಪಂದ್ಯ ನಡೆದ 24 ಗಂಟೆಗಳ ಒಳಗೆ ದೂರು ಸಲ್ಲಿಸಬೇಕು. ಆದರೆ, ಅವರು ತಡವಾಗಿ ದೂರು ನೀಡಿದ್ದಾರೆ. ಆದರೂ, ದೂರು ಸ್ವೀಕರಿಸಿದ್ದೇವೆ. ದೂರುದಾರರಿಂದ ಪುರಾವೆ ಕೇಳಲಾಗಿದೆ.ಆರೋಪಗಳಲ್ಲಿ ಯಾವುದೇ ಸತ್ಯ ಕಂಡುಬಂದರೆ, ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಹೇಳಿದ್ದಾರೆ.
ತಮಿಳುನಾಡಿನಲ್ಲಿ TNPLನ 9ನೇ ಆವೃತ್ತಿಯು 2025ರ ಜೂನ್ 5ರಂದು ಆರಂಭವಾಗಿದ್ದು, ಜುಲೈ 6ರವರೆಗೆ ನಡೆಯಲಿದೆ. ಟೂರ್ನಿಯಲ್ಲಿ 8 ತಂಡಗಳಿದ್ದು, ಒಟ್ಟು 32 ಪಂದ್ಯಗಳು ನಡೆಯಲಿವೆ.