ಕೇರಳದ ಯೆಹೋವನ ಸಮಾವೇಶದಲ್ಲಿ ಭಾನುವಾರ(ಅ.29) ನಡೆದ ಸರಣಿ ಸ್ಫೋಟದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಕೇರಳದ ಎರ್ನಾಕುಲಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಧಾರ್ಮಿಕ ದ್ವೇಷ ಪ್ರಚಾರ ಆರೋಪ ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ತೀವ್ರಗಾಮಿ ಅಂಶಗಳ ಬಗ್ಗೆ ಸಹಿಷ್ಣುತೆ ಹೊಂದಿದ್ದಾರೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ರಾಜೀವ್ ಚಂದ್ರಶೇಖರ್ ವಿರುದ್ಧ ಐಪಿಸಿ ಸೆಕ್ಷನ್ 153 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೇರಳದ ಯೆಹೋವನ ಸಮಾವೇಶದಲ್ಲಿ ನಡೆದ ಸ್ಪೋಟದ ನಂತರ ರಾಜೀವ್ ಚಂದ್ರಶೇಖರ್ ಅವರು ಈ ಸ್ಪೋಟಕ್ಕೆ ಕೋಮುವಾದಿ ಬಣ್ಣ ಬಳಿಯಲು ತಮ್ಮ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡಿದ್ದರು.
“ಕಾಂಗ್ರೆಸ್ ಮತ್ತು ಸಿಪಿಎಂನ ಓಲೈಕೆ ರಾಜಕಾರಣದ ಬೆಲೆಯನ್ನು ಎಲ್ಲಾ ಸಮುದಾಯಗಳ ಮುಗ್ಧರು ಯಾವಾಗಲೂ ಭರಿಸಬೇಕಾಗುತ್ತದೆ. ಕಾಂಗ್ರೆಸ್-ಸಿಪಿಎಂ ನಾಚಿಕೆಯಿಲ್ಲದ ತುಷ್ಟೀಕರಣ ರಾಜಕೀಯ ಮಾಡುತ್ತಿವೆ. ಕೇರಳದಲ್ಲಿ ದ್ವೇಷ ಹರಡಲು ಹಮಾಸ್ ಅನ್ನು ಬಳಸಿಕೊಳ್ಳಲಾಗುತ್ತಿದೆ. ಕೇರಳದಲ್ಲಿ ಜಿಹಾದ್ ನಡೆಸಲು ಕರೆ ನೀಡಲಾಗುತ್ತಿದೆ.ಇದು ಬೇಜವಾಬ್ದಾರಿ ಹುಚ್ಚು ರಾಜಕಾರಣದ ಪರಮಾವಧಿ. ಇದು ಇಲ್ಲಿಗೇ ನಿಲ್ಲಬೇಕಿದೆ.#ಹಮಾಸ್ ಟೆರರಿಸ್ಟ್ಸ್ #ಕೊಚ್ಚಿ ಟೆರರಿಸ್ಟ್ಸ್ ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ” ರಾಜೀವ್ ಚಂದ್ರಶೇಖರ್ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದರು.
ಈ ಸುದ್ದಿ ಓದಿದ್ದೀರಾ? ಚಲಿಸುತ್ತಿರುವ ರೈಲುಗಳಿಗೆ ಕಲ್ಲು ತೂರಾಟ; ತಪ್ಪಿತಸ್ಥರ ವಿರುದ್ಧ ಕಾರ್ಯಾಚರಣೆ ಪ್ರಾರಂಭಿಸಿದ ನೈರುತ್ಯ ರೈಲ್ವೆ
“ಈ ಹೇಳಿಕೆಯು ಸಂಪೂರ್ಣವಾಗಿ ಕೋಮುವಾದಿ ಮತ್ತು ವಿಷಕಾರಿ ಮನಸ್ಥಿತಿಯ ಪ್ರತಿಫಲನವಾಗಿದೆ” ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಕ್ರೋಶ ವ್ಯಕ್ತಪಡಿಸಿದ್ದರು.