ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ ‘ಇಂಡಿಯಾ’ ಒಕ್ಕೂಟದ ನಾಯಕರ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಪ್ರತಿಕ್ರಿಯಿಸಿದ ನಂತರ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮತ್ತೊಮ್ಮೆ ಕಳವಳ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ.
ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಪತ್ರ ಬರೆದಿರುವ ಜೈರಾಮ್ ರಮೇಶ್, ಇವಿಎಂಗಳ ಮೇಲೆ ಇಂಡಿಯಾ ಒಕ್ಕೂಟಕ್ಕೆ ಮೂಡಿರುವ ಕಳವಳಗಳನ್ನು ನೀವು ತಿಳಿಸಲಾಗಿಲ್ಲ. ಅಲ್ಲದೆ ನಮ್ಮ ಒಕ್ಕೂಟಕ್ಕೆ ವಿಚಾರಣೆ ನಡೆಸಲು ಅವಕಾಶವನ್ನು ನೀಡಿಲ್ಲ ಎಂದು ತಿಳಿಸಿದ್ದಾರೆ.
“ಇವಿಎಂಗಳ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟೀಕರಣ ನೀಡಿರುವುದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿಲ್ಲ. ಈ ಮೊದಲು ಇಂಡಿಯಾ ಒಕ್ಕೂಟ ಕೋರಿದ ಮನವಿಗಳಿಗೆ ಯಾವುದೇ ವಿಚಾರಣೆ ಅಥವಾ ಸಭೆಯನ್ನು ಒದಗಿಸಲಾಗಿಲ್ಲ. ಈ ಕಾರಣದಿಂದ ಇವಿಎಂಗಳ ಬಗ್ಗೆ ಇರುವ ನಮ್ಮ ಕಳವಳ ತಿಳಿಸಲು ಸಭೆ ಏರ್ಪಡಿಸಿ ಅವಕಾಶ ನೀಡಬೇಕೆಂದು” ಪತ್ರ ಬರೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅತ್ತ ಅತಿಥಿ ಉಪನ್ಯಾಸಕರು ಇತ್ತ ಸರಕಾರ; ನಡುವೆ ನಲುಗದಿರಲಿ ವಿದ್ಯಾರ್ಥಿಗಳು
“ವಿವಿಪಿಟಿ ಬಳಕೆಯ ಕುರಿತು ನಮ್ಮ ಕಳವಳಗಳನ್ನು ವ್ಯಕ್ತಪಡಿಸಲು ಸಭೆ ಏರ್ಪಡಿಸಬೇಕೆಂದು ಇಂಡಿಯಾ ಒಕ್ಕೂಟಕ್ಕೆ 2023 ಆಗಸ್ಟ್ 9 ರಿಂದ ನಾಲ್ಕು ಬಾರಿ ಮನವಿ ಮಾಡಿದ್ದೇವೆ. ಇತ್ತೀಚಿಗಷ್ಟೆ ಡಿಸೆಂಬರ್ 20ರಂದು ಕೂಡ ಪತ್ರ ಬರೆದಿದ್ದರೂ ಕೇಂದ್ರ ಚುನಾವಣಾ ಆಯೋಗವು ನಮ್ಮ ಒಕ್ಕೂಟಕ್ಕೆ ಸಭೆ ಏರ್ಪಡಿಸಲು ವಿಫಲವಾಗಿದೆ” ಎಂದು ತಿಳಿಸಿದ್ದಾರೆ.
ಡಿಸೆಂಬರ್ 19 ರಂದು ಇವಿಎಂ ತಾಂತ್ರಿಕ ವಿನ್ಯಾಸ ಹಾಗೂ ಕಾರ್ಯಾಚರಣೆಗಳ ಬಗ್ಗೆ ಹಲವು ನಿರ್ದಿಷ್ಟ ಪ್ರಶ್ನೆಗಳೊಂದಿಗೆ ಇಂಡಿಯಾ ಒಕ್ಕೂಟ ಜ್ಞಾಪಕ ಪತ್ರ ಸಲ್ಲಿಸಲು ನಿರ್ಣಯ ಕೈಗೊಂಡು ಡಿ.20 ರಂದು ಪತ್ರ ಬರೆಯಲಾಗಿತ್ತು. ದುರಾದೃಷ್ಟವಶಾತ್, ಕೇಂದ್ರ ಚುನಾವಣಾ ಆಯೋಗ ನಮ್ಮ ಮನವಿಯನ್ನು ನಿರಾಕರಿಸುತ್ತಲೇ ಬಂದಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
“ನಮ್ಮ ಸಲಹೆ ಸರಳವಾಗಿದೆ. ವಿವಿಪ್ಯಾಟ್ ಚೀಟಿ ಮತಯಂತ್ರಕ್ಕೆ ಬೀಳುವ ಮೊದಲು ಅದನ್ನು ಮತದಾರನಿಗೆ ನೀಡಿ ಅದನ್ನು ಆತ ಪರಿಶೀಲಿಸಿ ಪ್ರತ್ಯೇಕ ಇನ್ನೊಂದು ಮತಡಬ್ಬಿಗೆ ಹಾಕುವುದಕ್ಕೆ ವ್ಯವಸ್ಥೆ ಮಾಡಬೇಕು. ಮತಡಬ್ಬಿಗೆ ಹಾಕಿದ ಚೀಟಿಗಳನ್ನು ಕೂಡ ಶೇ.100 ರಷ್ಟು ಎಣಿಕೆ ಮಾಡಬೇಕು. ಈ ಕಾರಣದಿಂದ ಇಂಡಿಯಾ ಒಕ್ಕೂಟದ ಮೂರ್ನಾಲ್ಕು ಮಂದಿಗೆ ಸಭೆ ಏರ್ಪಡಿಸಲು ನಿಮ್ಮ ಆಯೋಗದ ಸಿಬ್ಬಂದಿ ಅವಕಾಶ ನೀಡಬೇಕು. ಸಂಪೂರ್ಣವಾಗಿ ಇದು ಸಮಂಜಸ ಹಾಗೂ ಕಾನೂನುಬದ್ಧವಾಗಿದೆ” ಎಂದು ಹೇಳಲಾಗಿದೆ.