ಬಿಜೆಪಿ ಯಾವಾಗಲೂ, ಎಂತಹ ದುಃಖದ ಸಮಯದಲ್ಲೂ ತನ್ನ ಅಧಿಕಾರ ಮತ್ತು ರಾಜಕೀಯಕ್ಕಾಗಿ ಅವಕಾಶಗಳನ್ನು ಹುಡುಕುತ್ತದೆ. ಬಿಜೆಪಿಯ ಈ ಧೋರಣೆ ಅತ್ಯಂತ ಖಂಡನೀಯ
ಮಂಗಳವಾರ (ಏಪ್ರಿಲ್ 22) ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪ್ರವಾಸಿಗರು ಸೇರಿದಂತೆ 28 ಜನರು ಸಾವನ್ನಪ್ಪಿದ್ದಾರೆ. ಘಟನೆಯನ್ನು ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ಕೃತ್ಯವೆಂದು ಹೇಳಲಾಗಿದೆ. ಭಯೋತ್ಪಾದಕ ದಾಳಿಯನ್ನು ಪಕ್ಷಾತೀತವಾಗಿ ಎಲ್ಲ ರಾಜಕೀಯ ಪಕ್ಷಗಳು ಖಂಡಿಸಿವೆ.
ಬುಧವಾರ ಕಾಶ್ಮೀರ ಬಂದ್‌ಗೆ ಕರೆಕೊಡಲಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಎಲ್ಲ ಪಕ್ಷಗಳು ಮತ್ತು ಸಂಘಟನೆಗಳು ಬಂದ್‌ನಲ್ಲಿ ಭಾಗಿಯಾಗಿವೆ. ಅಲ್ಲಿನ ಸರ್ಕಾರ (ಕಾಂಗ್ರೆಸ್-ಎನ್‌ಸಿ) ಕೂಡ ಬಂದ್‌ಗೆ ಬೆಂಬಲ ನೀಡಿದೆ. ಪ್ರತಿಭಟನೆಗಳನ್ನು ನಡೆಸಿದ್ದಾರೆ. ಘಟನೆಯನ್ನು ಖಂಡಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವು ಪಕ್ಷಗಳು ಸರ್ವಪಕ್ಷಗಳ ಸಭೆ ಕರೆಯುವಂತೆ ಒತ್ತಾಯಿಸಿದ ಬಳಿಕ, ಪ್ರಧಾನಿ ಮೋದಿ ಅವರು ದೆಹಲಿಯಲ್ಲಿ ಗುರುವಾರ ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ಹಲವು ಪಕ್ಷಗಳ ನಾಯಕರು ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿವೆ. ಅಲ್ಲದೆ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕೂಡ ಕಾಶ್ಮೀರದಲ್ಲಿ ಗುರುವಾರ ಸರ್ವಪಕ್ಷ ಸಭೆ ಕರೆದಿದ್ದಾರೆ. ಎಲ್ಲ ಪ್ರಮುಖ ರಾಜಕೀಯ ಪಕ್ಷಗಳಿಗೆ ಅಬ್ದುಲ್ಲಾ ಅವರು ಪತ್ರ ಬರೆದಿದ್ದು, ‘ದಾಳಿಯು ಜಮ್ಮು ಮತ್ತು ಕಾಶ್ಮೀರದ ಆತ್ಮದ ಮೇಲಿನ ಗಾಯ’ ಎಂದಿದ್ದಾರೆ.
ಇದೆಲ್ಲದರ ನಡುವೆ, ಭಯೋತ್ಪಾದಕ ಕೃತ್ಯದಲ್ಲಿಯೂ ಧರ್ಮದ್ವೇಷವನ್ನು ಹುಡುಕುವ ಚಾಳಿಯನ್ನು ಬಿಜೆಪಿ ಮುಂದುವರೆಸಿದೆ. ಬಿಜೆಪಿ ಛತ್ತೀಸ್‌ಗಢ ‘ಎಕ್ಸ್’ ಖಾತೆಯಲ್ಲಿ ದಾಳಿಯಲ್ಲಿ ಹತರಾದವರ AI ಚಿತ್ರವನ್ನು ಹಂಚಿಕೊಂಡಿದ್ದು, “ಧರ್ಮ ಪೂಚಾ, ಜಾತಿ ನಹಿ” (ಧರ್ಮ ಕೇಳಲಾಗಿದೆ, ಜಾತಿಯನ್ನಲ್ಲ) ಎಂದು ಬರೆದುಕೊಂಡಿದೆ. ಬಿಜೆಪಿಯ ಈ ಪೋಸ್ಟ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ‘ಪ್ರಾಣ ಕಳೆದುಕೊಂಡವರ ಬಗ್ಗೆ ಬಿಜೆಪಿ ಶೂನ್ಯ ಸಹಾನುಭೂತಿ ಹೊಂದಿದೆ’ ಎಂದು ವಿಪಕ್ಷಗಳ ನಾಯಕರು ಕಿಡಿಕಾರಿದ್ದಾರೆ.
ದಾಳಿ ನಡೆದ ಬಳಿಕ, ಮಂಗಳವಾರ ರಾತ್ರಿ ಪಹಲ್ಗಾಮ್ ತೆರಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬುಧವಾರ ಸಂತ್ರಸ್ತರ ಕುಟುಂಬಸ್ಥರನ್ನು ಭೇಟಿ ಮಾಡಿದ್ದಾರೆ. ಸಂತಾಪ ಸೂಚಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಶ್ರೀನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಅವರು ದೇಶಕ್ಕೆ ಕ್ಷಮೆಯಾಚಿಸಿ ‘ಇದು ನಮ್ಮೆಲ್ಲರ ಮೇಲಿನ ದಾಳಿ’ ಎಂದಿದ್ದಾರೆ.
”ನಿನ್ನೆ ನಡೆದ ದಾಳಿ, ಇದು ಮುಗ್ಧ ಪ್ರವಾಸಿಗರ ಮೇಲಿನ ದಾಳಿ ಮಾತ್ರವಲ್ಲ, ಇದು ಕಶ್ಮೀರಿಯತ್ ಮೇಲಿನ ದಾಳಿಯೂ ಆಗಿದೆ. ಇದನ್ನು ಸಹಿಸಲಾಗುವುದಿಲ್ಲ. ನಾವು ಇದನ್ನು ಖಂಡಿಸುತ್ತೇವೆ. ದಾಳಿ ನಡೆಸಿದವರನ್ನು ಕೂಡಲೇ ಕಂಡುಹಿಡಿಯಬೇಕು, ಶಿಕ್ಷೆಗೆ ಗುರಿಪಡಿಸಬೇಕು” ಎಂದು ಆಗ್ರಹಿಸಿದ್ದಾರೆ.
Muslims Residents of #JammuAndKashmir Take out Tiranga Rally in Srinagar and Raised "Vande Mataram"
— Ethan Hunt. (@Yeh_Dekh) April 23, 2025
Respect INDIAN MUSLIMS
Please Don't do हिन्दू मुस्लिम this time 🙏#पहलगाम_आतंकी_हमला #पहलगाम #Pahalgam #PahalgamTerroristAttack #pahalgamattack pic.twitter.com/jMTQcrwfak
“ಜನರು ಇಲ್ಲಿಗೆ ಸಂತೋಷದಿಂದ ಕಾಲ ಕಳೆಯಲು ಬರುತ್ತಾರೆ. ಆದರೆ, ಅವರ ಜೀವ ಬಲಿ ಪಡೆಯಲಾಗಿದೆ. ಇದು ಹೇಡಿತನದ ದಾಳಿ. ನಾನು ದೇಶದ ಜನರಿಗೆ ಹೇಳಲು ಬಯಸುತ್ತೇನೆ; ಈ ಬಿಕ್ಕಟ್ಟಿನ ಸಮಯದಲ್ಲಿ ನಾವು ನಿಮ್ಮೊಂದಿಗೆ ನಿಂತಿದ್ದೇವೆ. ಕಠಿಣ ಕ್ರಮ ಕೈಗೊಳ್ಳಬೇಕು. ನಮ್ಮ ದೇಶದ ಜನರಲ್ಲಿ ನಾನು ಕ್ಷಮೆಯಾಚಿಸಲು ಬಯಸುತ್ತೇನೆ” ಎಂದಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಈ ಹೇಡಿತನದ ಭಯೋತ್ಪಾದಕ ಕೃತ್ಯವನ್ನು ಪಕ್ಷವು ಖಂಡಿಸುತ್ತದೆ. ಇದು ನಮ್ಮ ರಾಷ್ಟ್ರದ ಏಕತೆ ಮತ್ತು ಸಮಗ್ರತೆಯ ಮೇಲಿನ ನೇರ ದಾಳಿಯಾಗಿದೆ. ಕೃತ್ಯಕ್ಕೆ ಕಾರಣರಾದವರ ವಿರುದ್ಧ ತ್ವರಿತ ಕ್ರಮ ಆಗಬೇಕು” ಎಂದು ಹೇಳಿದ್ದಾರೆ.
ಬುಧವಾರ ಸಂಜೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದೇನೆಂದ ಖರ್ಗೆ, ”ಈ ಸಂದರ್ಭವು ‘ಪಕ್ಷಪಾತದ ರಾಜಕೀಯ’ ಮಾಡುವ ಸಮಯವಲ್ಲ. ಅಪರಾಧಿಗಳನ್ನು ನ್ಯಾಯದ ಕಟಕಟೆಗೆ ತರಲು ‘ಸಾಮೂಹಿಕ ಸಂಕಲ್ಪ’ ಕೈಗೊಳ್ಳುವ ಸಮಯ” ಎಂದಿದ್ದಾರೆ.
ಈ ವರದಿ ಓದಿದ್ದೀರಾ?: 2014ರಿಂದ ಈವರೆಗೆ ಬಿಜೆಪಿ ಆಡಳಿತಾವಧಿಯಲ್ಲಿ ನಡೆದ ಭಯೋತ್ಪಾದಕರ ದಾಳಿಗಳು!
ಅಮೆರಿಕ ಪ್ರವಾಸದಲ್ಲಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ”ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್‌ನ ಅಧ್ಯಕ್ಷ ತಾರಿಕ್ ಕರ್ರಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರೊಂದಿಗೆ ಮಾತನಾಡಿದ್ದೇನೆ. ಸಂತ್ರಸ್ತರ ಕುಟುಂಬಗಳಿಗೆ ನ್ಯಾಯ ಮತ್ತು ನಮ್ಮ ಸಂಪೂರ್ಣ ಬೆಂಬಲ ನೀಡಬೇಕಿದೆ” ಎಂದು ಹೇಳಿದ್ದಾರೆ.
ಎನ್‌ಸಿಪಿ (ಎಸ್‌ಪಿ) ಸಂಸದೆ ಸುಪ್ರಿಯಾ ಸುಳೆ, ”ದಾಳಿಯು ಹೇಡಿತನದ ಕೃತ್ಯ. ಭಯೋತ್ಪಾದನೆಯ ಸಮಸ್ಯೆಯನ್ನು ಎಲ್ಲ ಪಕ್ಷಗಳು ಒಟ್ಟಾಗಿ ಪರಿಹರಿಸೋಣ. ಇದು ಭಾರತದ ಮೇಲಿನ ದಾಳಿಯಾಗಿದೆ” ಎಂದಿದ್ದಾರೆ.
ದಾಳಿಯಲ್ಲಿ ಹತರಾದ ಸಂತ್ರಸ್ತರ ಸ್ಮರಣಾರ್ಥ ಬುಧವಾರ ತಮಿಳುನಾಡು ವಿಧಾನಸಭೆಯಲ್ಲಿ ಎರಡು ನಿಮಿಷಗಳ ಮೌನಾಚರಣೆ ಆಚರಿಸಲಾಗಿದೆ. ”ದಾಳಿಯು ಅಮಾಯಕ ಪ್ರವಾಸಿಗರನ್ನು ಬಲಿತೆಗೆದುಕೊಂಡಿದೆ. ಇದು ದೇಶದ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸುವ ಅನಾಗರಿಕ ಕೃತ್ಯ. ಅತ್ಯಂತ ಖಂಡನೀಯ” ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಈ ದಾಳಿಯನ್ನು ”ಅಮಾನವೀಯ ಭಯೋತ್ಪಾದನಾ ಕೃತ್ಯ” ಎಂದಿದ್ದಾರೆ.
”ಪಹಲ್ಗಾಮ್‌ನಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರ ಧರ್ಮವನ್ನು ಕೇಳಿ, ಅಮಾಯಕ ಜನರನ್ನು ಭಯೋತ್ಪಾದಕರು ಕೊಂದರು. ಈ ಘಟನೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಸರ್ಕಾರವು ಈ ಭಯೋತ್ಪಾದಕರಿಗೆ ಪಾಠ ಕಲಿಸುತ್ತದೆ ಎಂದು ನಾವು ಭಾವಿಸುತ್ತೇವೆ. ನಾವು ಸಂತ್ರಸ್ತ ಕುಟುಂಬಗಳೊಂದಿಗೆ ಒಗ್ಗಟ್ಟಿನಲ್ಲಿ ನಿಲ್ಲುತ್ತೇವೆ. ಗಾಯಗೊಂಡವರು ಬೇಗ ಗುಣಮುಖರಾಗಬೇಕೆಂದು ಪ್ರಾರ್ಥಿಸುತ್ತೇವೆ” ಎಂದು AIMIM ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ರಾಜಕೀಯ ಪಕ್ಷಗಳು ದಾಳಿಯನ್ನು ಒಗ್ಗಟ್ಟಿನಿಂದ ಖಂಡಿಸಿವೆ. ಅಂತೆಯೇ, ದಾಳಿಯ ನೈತಿಕ ಹೊಣೆಯನ್ನು ಮೋದಿ ಸರ್ಕಾರ ತೆಗೆದುಕೊಳ್ಳಬೇಕು. ಸಮಸ್ಯೆಯನ್ನು ಪರಿಹರಿಸಲು ಮುಂದಾಗಬೇಕು ಎಂದು ಕರೆಕೊಟ್ಟಿವೆ.
ಈ ವರದಿ ಓದಿದ್ದೀರಾ?: ಪಹಲ್ಗಾಮ್ ದಾಳಿ | ಭಯೋತ್ಪಾದನೆ ಬಗ್ಗೆ ಅಮಿತ್ ಶಾ ಹಳೆಯ ಹೇಳಿಕೆ ಮತ್ತೆ ವೈರಲ್
”ಈ ದಾಳಿಯಿಂದ ಗುಪ್ತಚರ ವೈಫಲ್ಯ ಎದ್ದುತೋರುತ್ತಿದೆ. ನರೇಂದ್ರ ಮೋದಿ ಸರ್ಕಾರವು ತನ್ನ ನೀತಿಗಳನ್ನು ಮರುಪರಿಶೀಲಿಸಬೇಕು. ಈ ಘಟನೆಯು ಉರಿ ಮತ್ತು ಪುಲ್ವಾಮಾಕ್ಕಿಂತ ಹೆಚ್ಚು ಖಂಡನೀಯ. ಏಕೆಂದರೆ, ನೆರೆಯ ದೇಶದಿಂದ ಬಂದಿರುವ ಈ ಭಯೋತ್ಪಾದಕರು ನಾಗರಿಕರು ಮತ್ತು ಪ್ರವಾಸಿಗರನ್ನು ಗುರಿಯಾಗಿಸಿಕೊಂಡಿದ್ದಾರೆ. ಇಂತಹ ದಾಳಿಗಳು ಮರುಕಳಿಸದಂತೆ ನೋಡಿಕೊಳ್ಳಲು ಹೊಣೆಗಾರಿಕೆಯನ್ನು ಸರಿಪಡಿಸಿಕೊಳ್ಳಬೇಕು” ಎಂದು ಓವೈಸಿ ಒತ್ತಾಯಿಸಿದ್ದಾರೆ.
ಮಂಗಳವಾರ ಸಂಜೆ, ಶಿವಸೇನಾ ಸಂಸದ ಸಂಜಯ್ ರಾವತ್ ಅವರು ಗೃಹ ಮಂತ್ರಿ ಅಮಿತ್ ಶಾ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ”ಅಮಿತ್ ಶಾ ದೇಶದ ಇತಿಹಾಸದಲ್ಲಿ ವಿಫಲ ಗೃಹ ಸಚಿವರು. ಇಡೀ ದೇಶವು ಅವರ ರಾಜೀನಾಮೆ ಕೇಳುತ್ತಿದೆ. ಅವರಿಗೆ ಒಂದು ದಿನವೂ ಆ ಹುದ್ದೆಯನ್ನು ಅಲಂಕರಿಸುವ ಹಕ್ಕಿಲ್ಲ” ಎಂದು ರಾವತ್ ಹೇಳಿದ್ದಾರೆ.
ಮಂಗಳವಾರ ಸಂಜೆ, ಛತ್ತೀಸ್‌ಗಢ ಬಿಜೆಪಿ ತನ್ನ ‘ಎಕ್ಸ್’ನ ಖಾತೆಯಲ್ಲಿ ದಾಳಿಯ ಸಂತ್ರಸ್ತರ ಎಐ ಚಿತ್ರವನ್ನು ರಚಿಸಿ ಹಂಚಿಕೊಂಡಿದೆ. ಆ ಚಿತ್ರದಲ್ಲಿ ‘ಧರ್ಮ ಪೂಚಾ, ಜಾತಿ ನಹಿ’ (ಜಾತಿ ಅಲ್ಲ, ಧರ್ಮವನ್ನು ಕೇಳಲಾಗಿದೆ) ಎಂದು ಬರೆಯಲಾಗಿದೆ.
ಬಿಜೆಪಿಯ ಈ ಪೋಸ್ಟ್ ವಿರುದ್ಧ ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಲೋಕಸಭಾ ಸಂಸದ ಅಖಿಲೇಶ್ ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ”ಬಿಜೆಪಿ ನಾಯಕರು ಜೀವಗಳನ್ನು ಕಳೆದುಕೊಂಡವರ ಮತ್ತು ದುಃಖದಲ್ಲಿರುವ ಕುಟುಂಬಗಳ ಬಗ್ಗೆ ಶೂನ್ಯ ಸಹಾನುಭೂತಿ ಹೊಂದಿದ್ದಾರೆಂದು ಈ ಪೋಸ್ಟ್ ಸಾಬೀತುಪಡಿಸಿದೆ” ಎಂದು ಹೇಳಿದ್ದಾರೆ.
“ಬಿಜೆಪಿ ಯಾವಾಗಲೂ, ಎಂತಹ ದುಃಖದ ಸಮಯದಲ್ಲೂ ತನ್ನ ಅಧಿಕಾರ ಮತ್ತು ರಾಜಕೀಯಕ್ಕಾಗಿ ಅವಕಾಶಗಳನ್ನು ಹುಡುಕುತ್ತದೆ. ಬಿಜೆಪಿಯ ಈ ಧೋರಣೆ ಅತ್ಯಂತ ಖಂಡನೀಯ!” ಎಂದಿದ್ದಾರೆ.
”ಬಿಜೆಪಿ ಸರ್ಕಾರ ಹಿಂದಿನ ಭಯೋತ್ಪಾದಕ ದಾಳಿಗಳಿಂದ ಪಾಠ ಕಲಿತಿದ್ದರೆ, ಈಗ ಜಾಗರೂಕತೆ ವಹಿಸುತ್ತಿತ್ತು ಮತ್ತು ಜೀವಗಳನ್ನು ಉಳಿಸಬಹುದಿತ್ತು. ಈಗಲಾದರೂ, ದೇಶದ ಭದ್ರತೆಯನ್ನು ಕೇವಲ ಘೋಷಣೆಯನ್ನಾಗಿ ಮಾಡಬಾರದು ಎಂಬ ಸಂವೇದನಾಶೀಲತೆಯನ್ನು ಬಿಜೆಪಿಗರು ಬೆಳೆಸಿಕೊಳ್ಳಲಿ” ಎಂದಿದ್ದಾರೆ.