ಅರ್ಬನ್ ನಕ್ಸಲರು ಕಾಂಗ್ರೆಸ್ ಪಕ್ಷವನ್ನು ನಡೆಸುತ್ತಿದ್ದಾರೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ಭಯೋತ್ಪಾದಕರ ಪಕ್ಷ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ತಳ್ಳಿಹಾಕಿದ ಖರ್ಗೆ, “ಮೋದಿ ಯಾವಾಗಲೂ ಕಾಂಗ್ರೆಸ್ ಅನ್ನು ಅರ್ಬನ್ ನಕ್ಸಲರ ಪಕ್ಷ ಎಂದು ಲೇಬಲ್ ಮಾಡುತ್ತಾರೆ. ಅದು ಅವರ ಅಭ್ಯಾಸ. ಆದರೆ ಅವರ ಸ್ವಂತ ಪಕ್ಷದ ಬಗ್ಗೆ ಏನಂತಾರೆ? ಬಿಜೆಪಿ ಭಯೋತ್ಪಾದಕರ ಪಕ್ಷವಾಗಿದ್ದು, ಹತ್ಯೆಯಲ್ಲಿ ತೊಡಗಿದೆ. ಇಂತಹ ಆರೋಪ ಮಾಡುವ ಹಕ್ಕು ಮೋದಿಯವರಿಗಿಲ್ಲ ಎಂದಿದ್ದಾರೆ.
ಅರ್ಬನ್ ನಕ್ಸಲರು ಕಾಂಗ್ರೆಸ್ ಅನ್ನು ನಡೆಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಎರಡು ಬಾರಿ, ವಿವಿಧ ಸಂದರ್ಭಗಳಲ್ಲಿ ಹೇಳಿದ್ದಾರೆ. ಅಕ್ಟೋಬರ್ 5 ರಂದು, ಪಿಎಂ ನರೇಂದ್ರ ಮೋದಿ ಅವರು ಕಾಂಗ್ರೆಸ್ ಅನ್ನು ಅರ್ಬನ್ ನಕ್ಸಲರ ಗುಂಪು ನಿಯಂತ್ರಿಸುತ್ತಿದೆ ಎಂದು ಹೇಳಿದ್ದು, ಪಕ್ಷದ “ಅಪಾಯಕಾರಿ ಅಜೆಂಡಾ” ವನ್ನು ಸೋಲಿಸಲು ಜನರು ಒಗ್ಗೂಡಬೇಕೆಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಎಚ್‌ಡಿಕೆ V/s ಎಡಿಜಿಪಿ ಚಂದ್ರಶೇಖರ್- ಇದು ಸಾಮಾನ್ಯ ವಿದ್ಯಮಾನವಲ್ಲ
ʼಬಿಜೆಪಿಯವರು ದುಷ್ಕೃತ್ಯ ನಡೆಸುವವರಿಗೆ ಸಹಕಾರ ನೀಡುತ್ತಿರುತ್ತಾರೆ. ಚಿಂತಕರಿಗೆ, ಕಾಂಗ್ರೆಸ್ ಪಕ್ಷದವರಿಗೆ ಅರ್ಬನ್ ನಕ್ಸಲ್ ಎಂದು ಕರೆಯುವುದು ಬಿಜೆಪಿಗೆ ಚಾಳಿ ಇದೆ. ಈ ಮಧ್ಯೆ ಇದನ್ನು ಹೇಳುವುದನ್ನು ನಿಲ್ಲಿಸಿದ್ದರೂ ಇದೀಗ ಮತ್ತೆ ಹೇಳಲು ಪ್ರಾರಂಭಿಸಿದ್ದಾರೆʼ ಎಂದು ಟೀಕಿಸಿದರು.
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಕುರಿತು ಪ್ರಕ್ರಿಯೆ ನೀಡಿ, ʼಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆ ಎಂದು ಇಡೀ ದೇಶದ ಜನರಿಗೆ ವಿಶ್ವಾಸವಿತ್ತು. ಜನ ಸಮುದಾಯದಲ್ಲಿ ಜನರ ಅಭಿಪ್ರಾಯ ಕಾಂಗ್ರೆಸ್ ಪಕ್ಷದ ಪರವಾಗಿಯೇ ಇತ್ತು. ಆದಾಗ್ಯೂ ಚುನಾವಣಾ ಫಲಿತಾಂಶ ಬೇರೆಯದ್ದೇ ರೀತಿಯಲ್ಲಿ ಬಂದಿದೆ. ಚುನಾವಣಾ ಪ್ರಕ್ರಿಯೆ ಮೇಲೆ ಅನುಮಾನ ಕಾಡುತ್ತಿದೆʼ ಎಂದರು.
ʼಈ ರೀತಿಯ ಫಲಿತಾಂಶ ಬರಲು ಏನು ಕಾರಣ ಎಂಬುದರ ಬಗ್ಗೆ ವಿಶ್ಲೇಷಣೆ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಬೂತ್ ಮಟ್ಟದಿಂದ ವರದಿ ತರಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಒಂದೊಮ್ಮೆ ವರದಿ ಬಂದ ಬಳಿಕ ತಪ್ಪು ನಮ್ಮ ಪಕ್ಷದ ಕಾರ್ಯಕರ್ತರದ್ದೋ, ಅಥವಾ ಈ ಚುನಾವಣಾ ಪ್ರಕ್ರಿಯೆಯಲ್ಲಿ ಮತ್ತೇನಾದರೂ ಅಸಂಬದ್ಧತೆ ನಡೆದಿದೆಯೋ ಎಂಬುದರ ಕುರಿತು ಸ್ಪಷ್ಟ ಚಿತ್ರಣ ಹೊರಬೀಳಲಿದೆʼ ಎಂದು ಹೇಳಿದರು.
