ರಾಷ್ಟ್ರೀಯ ವಿದ್ಯಾರ್ಥಿ ಯೂನಿಯನ್ (NSUI) ಉಸ್ತುವಾರಿ, ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್ ಅವರನ್ನು ದೆಹಲಿ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.
ದೆಹಲಿಯಲ್ಲಿರುವ ಕೇರಳ ಹೌಸ್‌ನ ರೆಸಿಡೆಂಟ್ ಕಮಿಷನರ್ ಪುನೀತ್ ಕುಮಾರ್ ಅವರು ನೀಡಿದ ದೂರಿನ ಆಧಾರದ ಮೇಲೆ ಕನ್ಹಯ್ಯರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಕನ್ಹಯ್ಯ ಕುಮಾರ್ ಅವರು ತಮ್ಮ ಸ್ನೇಹಿತರೊಬ್ಬರ ಹೆಸರಿನಲ್ಲಿ ಕಾಯ್ದಿರಿಸಲಾಗಿದ್ದ ಕೊಠಡಿಗೆ ಆಗಮಿಸಿದ್ದರು. ಆದರೆ, ಯಾವುದೇ ಕೊಠಡಿ ಖಾಲಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದಾಗ, ಅವರು ಸ್ಪಷ್ಟನೆಗಾಗಿ ರೆಸಿಡೆಂಟ್ ಕಮಿಷನರ್ ಅವರನ್ನು ಸಂಪರ್ಕಿಸಿದರು. ಈ ವೇಳೆ ಇಬ್ಬರ ನಡುವೆ ತೀವ್ರ ವಾಕ್ಸಮರ ನಡೆದು, ರೆಸಿಡೆಂಟ್ ಕಮಿಷನರ್ ಅವರು ದೆಹಲಿ ಪೊಲೀಸರಿಗೆ ಕರೆ ಮಾಡಿ ಕನ್ಹಯ್ಯ ಕುಮಾರ್ ಅವರನ್ನು ಆವರಣದಿಂದ ಹೊರ ಕಳಿಸುವಂತೆ ಮನವಿ ಮಾಡಿದ್ದರು. ಇದೇ ಕಾರಣವಾಗಿ ಕನ್ಹಯ್ಯರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ತಮ್ಮನ್ನು ವಶಕ್ಕೆ ಪಡೆದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕನ್ಹಯ್ಯ ಕುಮಾರ್, “ಕೇರಳ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ಇಂದು ಕೇರಳ ಹೌಸ್‌ಗೆ ಬರಲಿದ್ದಾರೆ ಎಂದು ನನಗೆ ತಿಳಿಸಲಾಯಿತು. ಕಮಿಷಿನರ್ ನಡೆಯು ‘ರಾಜ್ಯಪಾಲರು ಬರುತ್ತಿದ್ದಾರೆ, ಅವರು ರಾಜರಿದ್ದಂತೆ’ ಎಂಬ ಧೋರಣೆಯಲ್ಲಿತ್ತು. ನಾನು ನನ್ನ ಸ್ನೇಹಿತನನ್ನು ಭೇಟಿಯಾಗಲು ಬಂದಿದ್ದೆ. ಆದರೆ, ನನ್ನನ್ನು ಬಂಧಿಸಲಾಗಿದೆ. ಇದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ದೆಹಲಿ ಪೊಲೀಸರ ಧೋರಣೆಯನ್ನು ತೋರಿಸುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಕನ್ಹಯ್ಯ ಕುಮಾರ್ ಅವರನ್ನು ನೈಋತ್ಯ ದೆಹಲಿಯ ಜಾಫರ್‌ಪುರ್ ಕಲಾನ್ ಪೊಲೀಸ್ ಠಾಣೆಯಲ್ಲಿ ಬಂಧನದಲ್ಲಿಡಲಾಗಿದೆ. ಅವರ ಕಚೇರಿಯು ಅವರಿಗೆ ಅಗತ್ಯ ಕಾನೂನು ನೆರವು ಒದಗಿಸುತ್ತಿರುವುದಾಗಿ ತಿಳಿಸಿದೆ.




