ತಾಲ್ಲೂಕಿನ ಇತಿಹಾಸ ಗೊತ್ತಿಲ್ಲದ, ದಲಿತರು ಮತ್ತು ದಲಿತ ಹೋರಾಟಗಳ ಗಂಧ-ಗಾಳಿಯೇ ಗೊತ್ತಿಲ್ಲದ ಪೇಮೆಂಟ್ ಗಿರಾಕಿಯಾಗಿರುವ ಸಂದೇಶ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರ ಕುರಿತು ಸಾರ್ವಜನಿಕವಾಗಿ ಅವಹೇಳನಕಾರಿ ಹಾಗೂ ಆಧಾರರಹಿತ ಆರೋಪಗಳನ್ನು ಮಾಡಿರುವುದು ಹಣ ಮಾಡುವ ಅವರ ದಂಧೆಯ ಒಂದು ಭಾಗವಾಗಿದ್ದು ಮತ್ತೊಮ್ಮೆ ಪುನರಾವರ್ತನೆ ಮಾಡಿದರೆ ಪರಿಣಾಮ ಅತ್ಯಂತ ಕೆಟ್ಟದಾಗಿರುತ್ತದೆ ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಮುಖಂಡರು ಎಚ್ಚರಿಕೆ ನೀಡಿದರು.
ದಸಂಸ ಜಿಲ್ಲಾ ಸಂಚಾಲಕ ಹಾಗು ಕೆಡಿಪಿ ಸದಸ್ಯ ಬಿ.ವಿ.ವೆಂಕಟರಮಣ ಮಾತನಾಡಿ, ಜನರನ್ನು ಯಾರೂ ಹೆದರಿಸಿ,ಬೆದರಿಸಿ ಜಮೀನು ಕಿತ್ತುಕೊಳ್ಳಲು ಸಾಧ್ಯವಿಲ್ಲ. 40 ವರ್ಷಗಳಿಂದ ಹೋರಾಟಗಳನ್ನು ಮಾಡುತ್ತಿರುವ ನಾವು 5 ಸಾವಿರ ಜನರನ್ನು ಸೇರಿಸುತ್ತೇವೆ. ನಿನ್ನ ಕೈಲಾದರೆ 500 ಜನರನ್ನು ಸೇರಿಸು ನೋಡೋಣ. 800 ಎಕರೆ ಜಮೀನು ಶಾಸಕರು ಅಕ್ರಮ ನಡೆಸಿರುವುದನ್ನು ಸಾಭೀತುಪಡಿಸು ನಾವೇ ನಿನ್ನ ಜೊತೆಗೆ ಸೇರಿಕೊಳ್ಳುತ್ತೇವೆ. ಹೋರಾಟವನ್ನು ನಡೆಸುತ್ತೇವೆ. ಇಡೀ ರಾಜ್ಯದಲ್ಲಿಯೇ ಅತಿ ಹೆಚ್ಚು 110 ಅಂಬೇಡ್ಕರ್ ಭವನಗಳನ್ನು ಮಾಡಿಸಿರುವ ಘಟನೆ ಶಾಸಕ ಸುಬ್ಬಾರೆಡ್ಡಿಯವರಿಗೆ ಇದೆ. ದಲಿತರ ಹೋರಾಟಗಳಿಗೆ ಒಮ್ಮೆಯೂ ಬಂದು ಬೆಂಬಲ ವ್ಯಕ್ತಪಡಿಸಲಿಲ್ಲವಲ್ಲ. ಬರೀ ಜಮೀನುಗಳ ವ್ಯವಹಾರ ಮಾಡಿ ಹಣ ಮಾಡುವ ನಿನಗೆ ದಲಿತರ ಸಮಸ್ಯೆಗಳೇ ಗೊತ್ತಿಲ್ಲ. ನಾಲಿಗೆ ಬಿಗಿ ಹಿಡಿದು ಮಾತನಾಡು. ನಾವು ನಿಗಾಗಿ ಎದುರು ನೋಡುತ್ತಿದ್ದೇವೆ. ನೀನು ಎಲ್ಲೆಲ್ಲಿ ಹೋಗಿ ಮಾತನಾಡುತ್ತಿದ್ದೀಯ ಬರೀ ಜಮೀನುಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದೀಯ. ದಲಿತರ ಮೇಲೆ ದೌರ್ಜನ್ಯ ನಡೆದರೆ, ಅನ್ಯಾಯ ಆದರೆ ಮಾತನಾಡುವುದಿಲ್ಲ. ಜಮೀನಿನಲ್ಲಿ ಹಣ ಬಂದಾಗ ಮಾತ್ರ ಮಾತನಾಡುತ್ತಿದ್ದೀಯ. ನಿನ್ನ ಬ್ಲಾಕ್ ಮೇಲ್ ಆಟ ಬಾಗೇಪಲ್ಲಿಯಲ್ಲಿ ನಡೆಯಲ್ಲ. ನಿನ್ನ ಹೇಳಿಕೆ ಸಂಪೂರ್ಣ ಸುಳ್ಳು, ಕಂಬಾಲಪಲ್ಲಿ ಮಾರಣಹೋಮ ಆದಾಗ ಎಲ್ಲಿದ್ದೆ, ಬೋಡಿಕದಿರೇಪಲ್ಲಿ ಕೊಲೆಯಾದಾಗ ಬರಲಿಲ್ಲ, ಲಾಕಪ್ ಡೆತ್ ಆದಾಗ ಇರಲಿಲ್ಲ. ಗೌನಿಪಲ್ಲಿ ಹೋರಾಟಕ್ಕೆ ಬರಲಿಲ್ಲ. ಈಗ ಹಣ ಮಾಡಲು ಇನ್ಯಾರಿಗೋ ಏಜೆಂಟನಂತೆ ವರ್ತಿಸುತ್ತಿದ್ದೀಯಾ ಎಂದರು.
ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎ.ವಿ. ಪೂಜಪ್ಪ ಮಾತನಾಡಿ, ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳ ಬಗ್ಗೆ ಟೀಕೆ ಮಾಡುವಾಗ ಸಭ್ಯತೆ, ಸಂಸ್ಕಾರದಿಂದ್ದರೆ ಅದಕ್ಕೊಂದು ಬೆಲೆ ಇರುತ್ತದೆ. ಆದರೆ ಯಾವುದೇ ದಾಖಲೆ ಅಥವಾ ಸತ್ಯಾಂಶಗಳಿಲ್ಲದೆ ವೈಯಕ್ತಿಕ ನಿಂದನೆ ಮತ್ತು ಮಾನಹಾನಿಕಾರಕ ಹೇಳಿಕೆಗಳನ್ನು ನೀಡಿರುವುದು ಆತನ ಸಂಸ್ಕಾರ ಹೀನತೆಯನ್ನು ತೋರಿಸುತ್ತದೆ. ಜಮೀನುಗಳ ದಂಧೆ ಮಾಡುವ ನೀನು ಹಣ ಮಾಡುವ ಸಲುವಾಗಿ ಬಾಯಿಗೆ ಬಂದಂತೆ ಮಾತನಾಡಿದರೆ ದಲಿತ ಮುಖಂಡರಾಗಿರುವ ನಾವು ಸುಮ್ಮನಿರಲ್ಲ. ಬುಡಬುಡಿಕೆ ಮಾತು ಬಿಟ್ಟು ಶಾಂತಿಯುತವಾಗಿರುವ ಕ್ಷೇತ್ರದಲ್ಲಿ ಯಾವನಿಂದಲೋ ಪೇಮೆಂಟ್ ಪಡೆದು ಸುಳ್ಳು ಆರೋಪಿಗಳನ್ನು ಮಾಡಿದರೆ ಪರಿಣಾಮ ನೆಟ್ಟಗಿರಲ್ಲ. ದಲಿತರು ಸೇರಿದಂತೆ ಎಲ್ಲಾ ವರ್ಗಗಳ ಅಭಿವೃದ್ಧಿಗೆ 25 ವರ್ಷಗಳಿಂದ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಮತ್ತು ಅರ್ಹತೆ ಇಲ್ಲ. ನೀನೊಬ್ಬ ಏಜೆಂಟ್ ಕೆಲಸ ಮಾಡಲು ಬಂದಿದ್ದೀಯಾ ಎಚ್ಚರಿಕೆಯಿಂದಿರು ಎಂದರು.
ದರಖಾಸ್ತು ಸಮಿತಿ ಸದಸ್ಯ ಹಾಗು ಜಿಪಂ ಮಾಜಿ ಸದಸ್ಯ ಬೂರಗಮಡುಗು ನರಸಿಂಹಪ್ಪ ಮಾತನಾಡಿ, ಶಾಸಕರನ್ನು ಎದುರಿಸಲು ಮುಖವಿಲ್ಲದವನು ಬೆಂಗಳೂರು ಸೇರಿಕೊಂಡು ಸಂದೇಶ್‌ನನ್ನು ಏಜೆಂಟನಂತೆ ಕಳುಹಿಸಿದ್ದಾನೆ. ನಿನ್ನಂತಹವರು ಸಾವಿರ ಏಜೆಂಟುಗಳು ಬಂದರೂ ಸುಬ್ಬಾರೆಡ್ಡಿಯವರನ್ನು ಎದುರಿಸಲು ಸಾಧ್ಯವಿಲ್ಲ. ಎಲ್ಲಾ ದಲಿತ ಮುಖಂಡರು ಶಾಸಕರ ಬೆನ್ನಿಗೆ ಇದ್ದು ಕೆಲಸ ಮಾಡುತ್ತಿದ್ದು ಅವರೂ ದಲಿತ ಸಮುದಾಯಗಳ ಅಭಿವೃದ್ಧಿಗೆ ಅಷ್ಟೇ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ನಿಜವಾದ ಗಂಡಸು ನೀನಾಗಿದ್ದರೆ ಚರ್ಚೆಗೆ ಬಾ ನಾವು ಬರಲು ಸಿದ್ದರಿದ್ದೇವೆ. ಅಂಬೇಡ್ಕರ್ ಹೆಸರು ಹೇಳಿಕೊಂಡು ಹಣ ಮಾಡುತ್ತಿರುವ ನಿನ್ನ ಕೆಲಸ ವ್ಯರ್ಥ ಎಂಬುದು ತಿಳಿದುಕೋ. 25 ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರ ಕಾರ್ಯಗಳನ್ನಾದರೂ ತಿಳಿದುಕೊಂಡಿದ್ದೀಯ ನೀನು. 8 ಸಾವಿರ ಉಚಿತ ಮದುವೆಗಳನ್ನು ಮಾಡಿ 4 ಸಾವಿರ ಸೀಮೆ ಹಸುಗಳನ್ನು ನೀಡಿರುವ ಅವರು ಸಾವಿರಾರು ಉಚಿತ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿದ್ದಾರೆ. ನೂರಾರು ಆರೋಗ್ಯ ಶಿಬಿರಗಳನ್ನು ಏರ್ಪಡಿಸಿದ್ದಾರೆ. ಸಾವಿರಾರು ವಿದ್ಯಾರ್ಥಿಗಳಿಗೆ ಶುಲ್ಕವನ್ನು ಕಟ್ಟಲು ಸಹಾಯ ಮಾಡುತ್ತಿದ್ದಾರೆ. ಅವರ ಸೇವಾ ವಿವರಗಳನ್ನು ಸಂಪೂರ್ಣವಾಗಿ ತಿಳಿಸಿದರೆ ತಲೆತಿರುಗಿ ಬೀಳುತ್ತೀಯ. ಅಂತಹ ಉತ್ತಮ ವ್ಯಕ್ತಿಯ ಬಗ್ಗೆ ರೋಲ್ ಗಿರಾಕಿಯಾಗಿರುವ ನೀನು ಮಾತನಾಡುತ್ತೀಯ. ಧೈರ್ಯವಿದ್ದರೆ ಬಾಗೇಪಲ್ಲಿಗೆ ಬಾ. ಹಗರಣಗಳನ್ನು ನಮಗೂ ತೋರಿಸಿ ನಿನ್ನ ಆರೋಪಗಳನ್ನು ಸಾಭೀತುಪಡಿಸು. ಇಡೀ ದಲಿತ ಸಮುದಾಯಕ್ಕೆ ನೀಡು ಕಪ್ಪುಚುಕ್ಕೆ. ಶ್ರೀಮಂತರನ್ನು,ಜನಪ್ರತಿಗಳನ್ನು ಬ್ಲಾಕ್ ಮೇಲ್ ಮಾಡಿಕೊಂಡು ದಂಧೆಯನ್ನೇ ವೃತ್ತಿಯನ್ನಾಗಿಸಿಕೊಂಡಿರುವ ನಿನಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠವನ್ನು ಕಲಿಸಬೇಕಾಗುತ್ತದೆ ಎಂದರು. 40 ವರ್ಷಗಳಿಂದ ಹೋರಾಟಗಳನ್ನು ಮಾಡಿ ದಲಿತರ ಅಭಿವೃದ್ಧಿಗೆ ಶ್ರಮಿಸುತ್ತಿರುವ ನಮ್ಮಲ್ಲಿ ಬಹುತೇಕರಿಗೆ ಮನೆಯೇ ಇಲ್ಲ. ನಿನಗೆ 10 ಕೋಟಿ ಮನೆ ಹೇಗೆ ಬಂತು ಎಂದು ಪ್ರಶ್ನಿಸಿದರು.
ಅಂಬೇಡ್ಕರ್ ಸಮಿತಿ ರಾಜ್ಯಾಧ್ಯಕ್ಷ ಶಂಕರ್ ಮಾತನಾಡಿ, ನೀನು ನಿಜವಾದ ದಲಿತನೇ ಆಗಿದ್ದರೆ ಅಂಬೇಡ್ಕರ್ ಸಿದ್ದಂತದ ಮೇಲೆ ಬದುಕು ನಡೆಸುತ್ತಿದ್ದರೆ ಶಾಸಕರ ಅಕ್ರಮಗಳನ್ನು ಸಾಭೀತುಪಡಿಸು. ಪ್ರಚೋಚನಕಾರಿಯಾಗಿ ಮಾತನಾಡಿದರೆ ಇಲ್ಲಿನ ದಲಿತರು ಮತ್ತು ಜನತೆ ತಕ್ಕ ಉತ್ತರ ನೀಡಬೇಕಾಗುತ್ತದೆ. ಎಚ್ಚರಿಕೆಯಿಂದ ಮಾತನಾಡು. ಇಲ್ಲಿನ ದಲಿತರ ಸಮಸ್ಯೆಗಳಾದರೂ ಗೊತ್ತಿದೆಯೇ. ನ್ಯಾಯದ ಪರ ಹೋರಾಟ ಮಾಡು ದಲಿತ ಮುಖಂಡರು ನಿನ್ನ ಜೊತೆಗಿರುತ್ತಾರೆ. ಅದು ಬಿಟ್ಟು ಶಾಸಕರನ್ನು ಬ್ಲಾಕ್ ಮೇಲೆ ಮಾಡಲು ಬಂದರೆ ಪರಿಣಾಮ ನೆಟ್ಟಗಿರಲ್ಲ ಎಂದರು.
ಇದನ್ನು ಓದಿದ್ದೀರಾ..?ಚಿಂತಾಮಣಿ | ಬೆಂಕಿ ಕೆನ್ನಾಲಿಗೆಗೆ ತಡರಾತ್ರಿ ಸುಟ್ಟು ಭಸ್ಮವಾಯ್ತು 3 ಅಂಗಡಿಗಳು!
ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಮುಖಂಡರಾದ ಜೀವಿಕ ನಾರಾಯಣಸ್ವಾಮಿ ಲಂಬೂ ಶ್ರೀನಿವಾಸ್, ಶ್ರೀರಾಮ ನಾಯಕ್, ಪೈಪಾಳ್ಯ ರವಿ, ಸೋಮಶೇಖರ್, ವಕೀಲ ರಮಣ, ವೆಂಕಟೇಶ್, ವೆಂಕಟರಮಣಪ್ಪ, ಬಿ.ನರಸಿಂಹಪ್ಪ, ಆನಂದ್, ನಂಜುಂಡಪ್ಪ, ಮುನಿರಾಜು, ಮರಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.





