ಇವಿಎಂ ಹ್ಯಾಕಿಂಗ್ ಕುರಿತು ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ನೀಡಿರುವ ಹೇಳಿಕೆಯ ಕುರಿತು ಕಾಂಗ್ರೆಸ್ ಮತ್ತೊಮ್ಮೆ ಆತಂಕ ವ್ಯಕ್ತಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಹಾಗೂ ಚುನಾವಣಾ ಆಯೋಗದ ಮೌನವನ್ನು ಪ್ರಶ್ನಿಸಿರುವ ಹಿರಿಯ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲ, ಸುಪ್ರೀಂ ಕೋರ್ಟ್ ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡು, ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆದ ರಣದೀಪ್ ಸುರ್ಜೇವಾಲ, “ವಿದ್ಯುನ್ಮಾನ ಮತ ಯಂತ್ರಗಳ ಹ್ಯಾಕಿಂಗ್ ಹಾಗೂ ಅವುಗಳ ದೌರ್ಬಲ್ಯತೆ ಕುರಿತು ಗಬ್ಬಾರ್ಡ್ ಸಾರ್ವಜನಿಕವಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅತ್ಯಾಚಾರ ಯತ್ನ ಮಾಮೂಲು ಸಂಗತಿಯೇ ಗೃಹಸಚಿವರೇ?
ವಾಸ್ತವವಾಗಿ, ಚಲಾವಣೆಗೊಂಡ ಮತಗಳ ಫಲಿತಾಂಶಗಳನ್ನು ತಿರುಚಲು ವಿದ್ಯುನ್ಮಾನ ಮತ ಯಂತ್ರಗಳನ್ನು ಸುಲಭವಾಗಿ ದುರ್ಬಳಕೆ ಮಾಡಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಪ್ರಶ್ನೆಯೆಂದರೆ, ಈ ಹೇಳಿಕೆ ಕುರಿತು ಮುಖ್ಯ ಚುನಾವಣಾ ಆಯುಕ್ತರು ಹಾಗೂ ಭಾರತೀಯ ಚುನಾವಣಾ ಆಯೋಗವೇಕೆ ಮೌನವಾಗಿವೆ? ತುಳಸಿ ಗಬ್ಬಾರ್ಡ್ ನೀಡಿರುವ ಹೇಳಿಕೆಗೆ ಪ್ರತ್ಯುತ್ತರ ನೀಡಲು ಭಾರತೀಯ ಚುನಾವಣಾ ಆಯೋಗವೇಕೆ ಮೂಲಗಳ ಆಧಾರಿತ ಕತೆಗಳನ್ನು ಬಿತ್ತುತ್ತಿದೆ? ಪ್ರಧಾನಿ, ಎನ್‌ಡಿಎ ಸರಕಾರ ಹಾಗೂ ಬಿಜೆಪಿಯೇಕೆ ಈ ಕುರಿತು ಮೌನ ಧರಿಸಿವೆ?” ಎಂದು ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.