ಚೀನಾ ನಮ್ಮ ಶತ್ರು ದೇಶವಲ್ಲ, ಆ ದೇಶದಿಂದ ಬೆದರಿಕೆಯಿದೆ ಎಂದು ನಾವು ಭಾವಿಸಬಾರದು ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ತಿಳಿಸಿದ್ದಾರೆ.
ಸುದ್ದಿ ಸಂಸ್ಥೆಯ ಜೊತೆ ಮಾತನಾಡಿದ ಅವರು, ಚೀನಾದಿಂದ ಬರುವ ಬೆದರಿಕೆ ನನಗೆ ಅರ್ಥವಾಗುತ್ತಿಲ್ಲ. ಅಮೆರಿಕವು ಶತ್ರುವನ್ನು ವ್ಯಾಖ್ಯಾನಿಸುವ ಪ್ರವೃತ್ತಿಯನ್ನು ಹೊಂದಿರುವುದರಿಂದ ಈ ವಿಷಯ ಚರ್ಚೆ ಆಗುತ್ತಿದೆ. ಎಲ್ಲ ರಾಷ್ಟ್ರಗಳು ಎದುರಿಸುವ ಬದಲು ಸಹಕರಿಸುವ ಸಮಯ ಬಂದಿದೆ ಎಂದು ನಾನು ನಂಬುತ್ತೇನೆ ಎಂದು ಹೇಳಿದ್ದಾರೆ.
“ನಾವು ಮೊದಲಿನಿಂದಲೂ ಮುಖಾಮುಖಿಯಾಗಿದ್ದೇವೆ. ಈ ಮನೋಭಾವವು ಶತ್ರುಗಳನ್ನು ಸೃಷ್ಟಿಸುತ್ತದೆ ಮತ್ತು ದೇಶದೊಳಗೆ ಸಹಾನುಭೂತಿ ಉಂಟುಮಾಡುತ್ತದೆ. ನಾವು ಈ ಮನಸ್ಥಿತಿಯನ್ನು ಬದಲಾಯಿಸಬೇಕು. ಮೊದಲ ದಿನದಿಂದಲೂ ಚೀನಾವನ್ನು ಶತ್ರು ಎಂದು ಭಾವಿಸುವುದು ನ್ಯಾಯಯುತವಲ್ಲ, ಚೀನಾಕ್ಕೆ ಮಾತ್ರವಲ್ಲ, ಯಾರಿಗೂ ನ್ಯಾಯಯುತವಲ್ಲ” ಎಂದು ತಿಳಿಸಿದ್ದಾರೆ.
“ನಮ್ಮ ನೆರೆಯ ರಾಷ್ಟ್ರಗಳೊಂದಿಗೆ ಏನೇ ಸಮಸ್ಯೆಗಳಿದ್ದರೂ ನಾವು ಯಾವಾಗಲು ಅದನ್ನು ನಿವಾರಿಸಿಕೊಳ್ಳಲು ಸೌಹಾರ್ದಯುತ ವಿಧಾನವನ್ನು ಅಳವಡಿಸಿಕೊಂಡಿದ್ದೇವೆ. ಭಾರತ ಮತ್ತು ಚೀನಾ ನಡುವೆ ಅಂತಹ ವ್ಯತ್ಯಾಸವಿಲ್ಲ. ಯಾವುದೇ ಸಮಸ್ಯೆಗಳಿದ್ದರೂ ನಾವು ಸೌಹಾರ್ದಯುತ ಯೋಜನೆಗಳನ್ನು ಮುಂದುವರೆಸಿಕೊಂಡು ಬಗೆಹರಿಸಿಕೊಳ್ಳಬೇಕು” ಎಂದು ತಿಳಿಸಿದ್ದಾರೆ.
2020ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ಸಂಘರ್ಷಗಳು ಉದ್ಭವಿಸಿದ ನಂತರ ಭಾರತ ಮತ್ತು ಚೀನಾ ನಡುವೆ ಸಂಬಂಧ ಹದಗೆಟ್ಟಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಮೆರಿಕ ನೆಲದಲ್ಲಿ ಮೋದಿ ಸಾಧಿಸಿದ್ದಕ್ಕಿಂತ ತಲೆ ಬಾಗಿದ್ದೇ ಹೆಚ್ಚು
ಲೋಕಸಭೆ ಚುನಾವಣೆಯ ಸಮಯದಲ್ಲಿ ಭಾರತೀಯರ ಬಣ್ಣದ ಬಗ್ಗೆ ಸ್ಯಾಮ್ ಪಿತ್ರೋಡಾ ಅವರು ಮಾತಾನಾಡಿದ್ದು ವಿವಾದವನ್ನು ಉಂಟು ಮಾಡಿತ್ತು.
ಭಾರತದ ಪೂರ್ವದ ಜನರು ಚೀನಿಯರಂತೆ, ಪಶ್ಚಿಮದ ಜನರು ಅರಬ್ಬರಂತೆ ಕಾಣಿಸುತ್ತಾರೆ. ಉತ್ತರ ಭಾರತದವರು ಬಹುಶಃ ಬಿಳಿಯರಂತೆ ಕಂಡರೆ, ದಕ್ಷಿಣ ಭಾರತದ ಜನ ಆಫ್ರಿಕನ್ನರಂತೆ ಕಾಣಿಸುತ್ತಾರೆ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಮಾತ್ರ ಎಲ್ಲರನ್ನೂ ಒಟ್ಟಿಗೆ ನೋಡಲು ಸಾಧ್ಯ. ನಾವೆಲ್ಲರೂ ಸಹೋದರ -ಸೋದರಿಯರಂತೆ ಜೀವಿಸುತ್ತಿದ್ದೇವೆ.
ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಸ್ವಾತಂತ್ರ್ಯದಲ್ಲಿ ಬೇರೂರಿರುವ ಭಾರತದ ಮೂಲಭೂತ ತತ್ವಗಳು ಪ್ರಸ್ತುತ ಸವಾಲಿನಲ್ಲಿದೆ. ಈಗ ಭಾರತ ರಾಮ ನವಮಿ, ರಾಮ ಮಂದಿರದಿಂದ ಸವಾಲನ್ನು ಎದುರಿಸುತ್ತಿದೆ. ಸದಾಕಾಲ ದೇವಸ್ಥಾನಗಳಿಗೆ ಭೇಟಿ ನೀಡುವ ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ಭಾರತೀಯ ನಾಯಕನಂತೆ ಮಾತನಾಡದೇ ಭಾರತೀಯ ಜನತಾ ಪಕ್ಷದ ಪ್ರತಿನಿಧಿಯಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದರು.
ಈ ಹೇಳಿಕೆ ನೀಡಿದ ನಂತರ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥನ ಹುದ್ದೆಗೆ ರಾಜೀನಾಮೆ ನೀಡಿದ್ದರು. ನಂತರದಲ್ಲಿ ಅವರನ್ನು ಅದೇ ಹುದ್ದೆಗೆ ಮರುಸೇರ್ಪಡೆಗೊಳಿಸಲಾಗಿತ್ತು.
