ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ಮತ್ತೊಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಯುವ ನಾಯಕ ಕನ್ಹಯ್ಯ ಕುಮಾರ್‌ಗೆ ಈಶಾನ್ಯ ದೆಹಲಿಯಿಂದ ಟಿಕೆಟ್ ನೀಡಲಾಗಿದೆ.
ದೆಹಲಿಯ 7 ಲೋಕಸಭಾ ಕ್ಷೇತ್ರಗಳಲ್ಲಿ ಮೈತ್ರಿ ಭಾಗವಾಗಿ ಎಎಪಿ ಕಾಂಗ್ರೆಸ್‌ಗೆ ಮೂರು ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದು, ಈ ಮೂರು ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದೆ.
ಚಾಂದಿನಿ ಚೌಕ್‌ನಿಂದ ಜೆಪಿ ಅಗರ್‌ವಾಲ್, ವಾಯುವ್ಯ ದೆಹಲಿ ಮೀಸಲು ಕ್ಷೇತ್ರದಿಂದ ಉದಿತ್ ರಾಜ್ ಕಣಕ್ಕಿಳಿಯಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಯಲಾಗುತ್ತಿರುವ ಸುಳ್ಳುಗಳು, ಬೆತ್ತಲಾಗುತ್ತಿರುವ ಬಿಜೆಪಿ
ಕನ್ಹಯ್ಯ ಕುಮಾರ್ ಈಶಾನ್ಯ ದೆಹಲಿಯಿಂದ ಬಿಜೆಪಿಯ ಮನೋಜ್ ತಿವಾರಿ ಅವರನ್ನು ಎದುರಿಸಲಿದ್ಧಾರೆ. ಜೆಎನ್‌ಯು ವಿವಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರಾದ ಕನ್ಹಯ್ಯ ಈ ಮೊದಲು 2019ರ ಚುನಾವಣೆಯಲ್ಲಿ ಸಿಪಿಐನಿಂದ ಬಿಹಾರದ ಬೆಗುಸರೈ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ಗಿರಿರಾಜ್ ಸಿಂಗ್ ಎದುರು ಪರಾಭವಗೊಂಡಿದ್ದರು. 2021ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು.
ಉತ್ತರ ಪ್ರದೇಶದ ಅಲಹಾಬಾದ್ ಸೇರಿದಂತೆ ಕಾಂಗ್ರೆಸ್ ಬಿಡುಗಡೆ ಮಾಡಿರುವ 10 ಅಭ್ಯರ್ಥಿಗಳ ಪಟ್ಟಿಯಲ್ಲಿ ಪಂಜಾಬ್‌ನ 6 ಅಭ್ಯರ್ಥಿಗಳು ಇದ್ದಾರೆ. ಇವುಗಳಲ್ಲಿ ಪಂಜಾಬ್‌ನ ಮಾಜಿ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಅವರಿಗೆ ಜಲಂಧರ್ ಮೀಸಲು ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ದೆಹಲಿಯಲ್ಲಿ ಮೇ 25ರಂದು ಚುನಾವಣೆ ನಡೆದರೆ, ಪಂಜಾಬ್‌ನಲ್ಲಿ ಜೂನ್ 1 ರಂದು ಮತದಾನ ನಡೆಯಲಿದೆ.
